ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಜೆಗಳು ಮಾಡುವ ಪಾಪದಲ್ಲಿ ಒಂದು ಪಾಲು ರಾಜನಿಗೂ ಇರುತ್ತದೆ. ಪ್ರಜೆಗಳು ತಮ್ಮ ಸಂಪಾದನೆಯ ಒಂದು ಪಾಲನ್ನು ಕರದ ರೂಪದಲ್ಲಿ ರಾಜನಿಗೆ ಸಲ್ಲಿಸುವುದರಿಂದ ಅವರ ಪಾಪಗಳಲ್ಲಿಯೂ ರಾಜನು (King) ಪಾಲನ್ನು ಹೊಂದುತ್ತಾನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು (Raghaveshwara Shri) ಹೇಳಿದರು.
ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಅಕ್ಟೋಬರ್ 17ರಂದು ಲಲಿತೋಪಾಖ್ಯಾನ ಪ್ರವಚನ ಅನುಗ್ರಹಿಸಿದ ಶ್ರೀಗಳು, ಧರ್ಮ, ಕರ್ಮಫಲ, ಅಧಿಕಾರ ಹಾಗೂ ಜೀವನದಲ್ಲಿ ಸಿದ್ಧಾಂತಗಳ ಅನುಷ್ಠಾನದ ಮಹತ್ವದ ಕುರಿತು ವಿವರಿಸಿದರು.
ಇಂದ್ರನಿಗೂ ರಾಜಕಾರಣಿಗಳಿಗೂ ಕುರ್ಚಿಯ ಚಿಂತೆ
ತ್ರಿಲೋಕದ ಅಧಿಪತಿಯಾದ ಇಂದ್ರನಿಗೂ ಇಂದಿನ ರಾಜಕಾರಣಿಗಳಿಗೂ ಹೋಲಿಕೆ ಕಾಣಬಹುದು. ಇಬ್ಬರೂ ಸದಾ ತಮ್ಮ ಕುರ್ಚಿಯ ರಕ್ಷಣೆಯ ಚಿಂತೆಯಲ್ಲಿಯೇ ಇರುತ್ತಾರೆ. ಇಂದ್ರನಿಗೆ ತಪಸ್ಸನ್ನಾಚರಿಸುವವರು ಹಾಗೂ ರಾಕ್ಷಸರ ಬಗ್ಗೆ ಭಯವಿದ್ದರೆ, ಇಂದಿನ ರಾಜಕಾರಣಿಗಳಿಗೆ ಸ್ವಪಕ್ಷ ಮತ್ತು ವಿಪಕ್ಷದವರ ಬಗ್ಗೆ ಆತಂಕವಿರುತ್ತದೆ ಎಂದು ಶ್ರೀಗಳು ವಿಶ್ಲೇಷಿಸಿದರು.
ದೇವರು ನಮಗೆ ವರ ನೀಡಿದರೆ ಅಧಿಕಾರ ಅಥವಾ ಪದವಿಗಳ ಹಿಂದೆ ಹೋಗುವ ಬದಲು ಅವುಗಳನ್ನೂ ಮೀರಿದ ಮೋಕ್ಷವನ್ನು ಪ್ರಾರ್ಥಿಸಬೇಕು ಎಂದು ಕಿವಿಮಾತು ಹೇಳಿದರು.
‘ನನಗೇ ಏಕೆ ಹೀಗೆ?’ ಬದಲು ‘ನಾನೇಕೆ ಹೀಗೆ?’
ಕರ್ಮದ ಫಲದಿಂದ ಇಂದ್ರನಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮನುಷ್ಯರು ಮಾತ್ರ ಕರ್ಮಫಲ ತಮಗೆ ಬಾಧಿಸುವುದಿಲ್ಲ ಎಂಬಂತೆ ವರ್ತಿಸುತ್ತಾರೆ. ತಾವು ಮಾಡುವ ತಪ್ಪು ಕಾರ್ಯಗಳಿಗೆ ಪೊಳ್ಳು ಸಮರ್ಥನೆಗಳನ್ನು ನೀಡುತ್ತಿರುತ್ತಾರೆ. ಸಮಸ್ಯೆ ಎದುರಾದಾಗ ‘ನನಗೇ ಏಕೆ ಹೀಗೆ?’ ಎಂದು ಎಲ್ಲರಲ್ಲೂ ಹೇಳಿಕೊಳ್ಳುತ್ತೇವೆ. ಆದರೆ ‘ನಾನೇಕೆ ಹೀಗೆ?’ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಿಲ್ಲ ಎಂದು ಶ್ರೀಗಳು ಹೇಳಿದರು.
ನಮ್ಮ ನಡೆ-ನುಡಿಗಳ ಕುರಿತು ಆತ್ಮಾವಲೋಕನ ಮಾಡಿಕೊಂಡು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡಾಗ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಿದ್ಧಾಂತಗಳ ಅನುಷ್ಠಾನದಿಂದಲೇ ಸಾರ್ಥಕತೆ
ಸಿದ್ಧಾಂತಗಳನ್ನು ಕೇವಲ ಕೇಳುವುದರಿಂದ ಅಥವಾ ಪುಸ್ತಕಗಳಲ್ಲಿ ಓದುವುದರಿಂದ ಮಾತ್ರ ಪ್ರಯೋಜನವಿಲ್ಲ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಪ್ರವಚನದಲ್ಲಿ ಕೇಳಿದ ಹಾಗೂ ಗ್ರಂಥಗಳಲ್ಲಿ ಓದಿದ ಉತ್ತಮ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ಅವು ಸಾರ್ಥಕವಾಗುತ್ತವೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ದುಷ್ಟರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕು
ಸಮುದ್ರ ಮಥನದ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ದೇವತೆಗಳಿಗೆ ನೀಡಿದ ಮಾರ್ಗದರ್ಶನವನ್ನು ಪ್ರಸ್ತಾಪಿಸಿದ ಶ್ರೀಗಳು, ಸಂಸ್ಕೃತದಲ್ಲಿ ‘ಶಠಂ ಪ್ರತಿ ಶಾಠ್ಯಂ’ ಎಂಬ ಮಾತಿದೆ. ಮೋಸಗಾರನಿಗೆ ಸಂದರ್ಭಕ್ಕೆ ತಕ್ಕ ರೀತಿಯಲ್ಲಿಯೇ ಉತ್ತರಿಸಬೇಕಾಗುತ್ತದೆ. ದುಷ್ಟರಿಗೆ ಸಜ್ಜನ ಭಾವದ ಭಾಷೆ ಅರ್ಥವಾಗುವುದಿಲ್ಲ. ಹೀಗಾಗಿ ದುಷ್ಟರಿಗೆ ಅವರದೇ ಭಾಷೆಯಲ್ಲಿ ಉತ್ತರಿಸುವ ಸಂದರ್ಭವೂ ಎದುರಾಗುತ್ತದೆ ಎಂದು ವಿವರಿಸಿದರು.
Also Read>> ಕೊಲ್ಕತ್ತಾದಲ್ಲಿ ಭೀಕರ ಕಾಲ್ತುಳಿತ | ಮೃತರ ಸಂಖ್ಯೆ 19ಕ್ಕೆ ಏರಿಕೆ? ಹೇಗಾಯ್ತು ಘಟನೆ?
ವಿವಿಧ ಧಾರ್ಮಿಕ ಕಾರ್ಯಕ್ರಮಗಳು
‘ನವರಾತ್ರ ನಮಸ್ಯಾ’ ಅಂಗವಾಗಿ ಮಹಾಸರಸ್ವತೀ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, CMR ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಶಿವಕುಮಾರ್, ಸಾಹಿತಿ ಚಿಂತಾಮಣಿ ಕೊಡ್ಲಕೆರೆ, ಉದ್ಯಮಿ ನಾಗರಾಜ್ ಆರ್. ಹಾಗೂ ಎಲ್.ಆರ್. ಹೆಗಡೆ ಸೇರಿದಂತೆ ಗಣ್ಯರು ಶ್ರೀಗಳ ಆಶೀರ್ವಾದ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













