ನಾನು ನೀರಿಗೆ ಬಿದ್ದ ರೀತಿ ನೋಡಿಯೇ ಡಾ.ಸುಬ್ಬಯ್ಯ ಅಪಾಯ ಅರಿತಿದ್ದರಂತೆ, ನಾನು ಒಮ್ಮೆ ಮೇಲಕ್ಕೆ ಬಂದು ಚಡಪಡಿಸುತ್ತ ಕೆಳಕ್ಕೆ ಹೋಗುತ್ತಿದ್ದಂತೆ ಅವರು ಉಳಿದವರನ್ನು ಎಚ್ಚರಿಸಿ, ಸಹಾಯಕ್ಕಾಗಿ ಮೊರೆ ಇಟ್ಟರಂತೆ. ಅಲ್ಲಿದ್ದ ನೂರಾರು ಜನ ಈಜು ನಿಲ್ಲಿಸಿ ಬೊಬ್ಬೆ ಹೊಡೆಯಲಾರಂಭಿಸಿದರೂ, ಆಳಕ್ಕೆ ಇಳಿದು ನನ್ನನ್ನು ರಕ್ಷಿಸುವ ಧೈರ್ಯವನ್ನೂ ಯಾರೂ ತೋರಲಿಲ್ಲ.
ನಮ್ಮ ಗ್ರಹಚಾರಕ್ಕೆ ಅಲ್ಲಿಯವರೆಗೆ ಅಲ್ಲಿಯೇ ಇದ್ದ ಹರೀಶ್ ಬಾತ್‌ಕೋಟ್ ಧರಿಸಿಕೊಂಡು ಸ್ನೇಹಿತರ ಜತೆ ಟೀ ಕುಡಿಯಲು ಹೊರಟಿದ್ದರು. ಆದರೆ ಸ್ವಿಮ್ಮಿಂಗ್‌ಪೂಲ್‌ನಿಂದ ಆರ್ತನಾದ ಕೇಳಿ ಬರುತ್ತಿದ್ದುದರಿಂದ ಅವರು ಓಡೋಡಿ ಬಂದು, ನಾನು ಕೊನೆಯ ಬಾರಿ ಮುಳುಗಿದ ಸ್ಥಳ ಕೇಳಿಕೊಂಡು ನೀರಿಗೆ ಧುಮುಕಿದರಂತೆ, ತಳಪೂರ್ತಿ ಹುಡುಕಾಡಿ ನಾನೆಲ್ಲೂ ಕಾಣಸಿಗದೆ ಮೇಲಕ್ಕೆ ತೇಲಿ ಜೋರಾಗಿ ಉಸಿರೆಳೆದುಕೊಂಡು ಕೊನೆಯ ಪ್ರಯತ್ನವೆಂಬಂತೆ ಮತ್ತೊಮ್ಮೆ ಮುಳುಗಿದರಂತೆ. ನನ್ನ ದೇಹ ಎಲ್ಲೂ ಕಾಣಿಸದೆ ಸುಸ್ತಾಗಿ ಮೇಲೆ ಬರಬೇಕು ಎನ್ನುವಷ್ಟರಲ್ಲಿ ನಾನು ಧರಿಸಿದ್ದ ಹಳದಿ ಸ್ವಿಮ್ಮಿಂಗ್ ಚೆಡ್ಡಿ ಗೋಚರಿಸಿ ಅತ್ತ ಧಾವಿಸಿದರಂತೆ.
ನಿಸ್ತೇಜವಾಗಿ ಬಿದ್ದಿದ್ದ ನನ್ನ ದೇಹ ಕಂಡು. ಚೆಡ್ಡಿಯ ಬೆಲ್‌ಟ್ ಹಿಡಿದು ಮೇಲಕ್ಕೆ ಎಳೆದು ತಂದರಂತೆ. ಉಸಿರಾಟ ನಿಂತುಹೋಗಿ, ನನ್ನ ಮೈಯೆಲ್ಲ ಕಪ್ಪಗಾಗಿತ್ತಂತೆ ಡಾ. ಸುಬ್ಬಯ್ಯ ಅವರು ತಕ್ಷಣ ನನ್ನನ್ನು ಬೋರಲು ಮಲಗಿಸಿ ಹೊಟ್ಟೆಯನ್ನು ಪ್ರೆಸ್ ಮಾಡಿ ನೀರನ್ನು ಹೊರತೆಗೆದರಂತೆ, ಒಮ್ಮೆ ಕಣ್ಣು ಬಿಟ್ಟ ನಾನು, ಸುತ್ತ ಸೇರಿದ್ದ ನೂರಾರು ಜನರನ್ನು ನೋಡಿ ಮತ್ತೆ ಪ್ರಜ್ಞೆ ತಪ್ಪಿದೆನಂತೆ! ಅಷ್ಟರಲ್ಲಿ ಯಾರೋ ಸೀಮೆ ಎಣ್ಣೆ ತಂದು ನನ್ನ ಮೈಕೈಗೆಲ್ಲ ಉಜ್ಜಿ, ಕಂಬಳಿ ಹೊದಿಸಿ ಬಿಸಿ ಮಾಡಿದರಂತೆ. ಆಗ ಪ್ರಜ್ಞೆ ಇಲ್ಲದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಯ ಐಸಿಯುಗೆ ಸೇರಿಸಿದರಂತೆ.
ನನ್ನ ಬ್ಯಾಚ್‌ಮೇಟ್ ಶ್ರೀಮತಿ ಆಂಡಾಳ್ ಆಗ ಮಲ್ಲೇಶ್ವರ ಠಾಣೆಯಲ್ಲಿ ಮಹಿಳಾ ಎಸ್‌ಐ ಆಗಿ ಪ್ರೊಬೆಷನರಿಯಲ್ಲಿದ್ದರು. ಹೆಚ್ಚಾಗಿ ಅವರು ದೈನಂದಿನ ಆಸ್ವಾಭಾವಿಕ ಸಾವಿನ ಪ್ರಕರಣಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಈಜುಕೊಳದಲ್ಲಿ ಮುಳುಗಿ ಯಾವುದೋ ಯುವಕ ಸತ್ತಿದ್ದಾನೆ ಎಂಬ ಸುದ್ದಿ ಕೇಳಿ ಅವರು ಆಸ್ಪತ್ರೆಗೆ ಓಡಿ ಬಂದಿದ್ದರು. ಯುಡಿಆರ್ ಫಾರ್ಮ್ ಭರ್ತಿ ಮಾಡುತ್ತ, ಸತ್ತ ವ್ಯಕ್ತಿಯ ಹೆಸರು ಅಶೋಕ್, 27 ವರ್ಷ ಎಂದು ಬರೆದು, ಈತನ ತಂದೆಯ ಹೆಸರೇನು ಎನ್ನುವುದು ಗೊತ್ತಾಗದೆ ಅವರಿವರಲ್ಲಿ ಕೇಳಿಕೊಂಡು ಓಡಾಡುತ್ತಿದ್ದರಂತೆ! ಅಷ್ಟರಲ್ಲಿ ಅಲ್ಲಿಗೆ ಬಂದ ಇತರ ಪೊಲೀಸರು, ‘ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮುಳುಗಿದವರು ಚಾಮರಾಜಪೇಟೆ ಪ್ರೊಬೆಷನರಿ ಎಸ್‌ಐ ಅಶೋಕ್‌ಕುಮಾರ್ ಮೇಡಂ,’ ಎಂದಾಗ ಅವರು ಹೌಹಾರಿದರಂತೆ! ‘ಅವರು ಸತ್ತಿಲ್ಲ ಮೇಡಂ, ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ,’ ಎಂದಾಗ ಮತ್ತಷ್ಟು ತಬ್ಬಿಬ್ಬಾದರಂತೆ!
ಮುಂದೆ 1988ರಲ್ಲಿ, ನೀರಿನಲ್ಲಿ ಮುಳುಗಿದ್ದ ಮಹಿಳೆ ಮತ್ತು ಆಕೆಯ ಒಂದೂವರೆ ವರ್ಷದ ಮಗುವನ್ನು ರಕ್ಷಿಸುವ ಸವಾಲು ನನಗೆ ಎದುರಾಗಿತ್ತು. ಅವತ್ತು ನಾವು ಶ್ರೀರಾಂಪುರ ಕಿಟ್ಟಿ ಎಂಬ ರೌಡಿಯನ್ನು ನೆಲಮಂಗಲದಲ್ಲಿ ಹಿಡಿದು ಬೆಳಗಿನ ಜಾವ ವೈಯಾಲಿಕಾವಲ್ ಠಾಣೆಗೆ ಕರೆದುಕೊಂಡು ಬಂದಿದ್ದೆವು. ನೊಂದ ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜತೆ ಪ್ಯಾಲೇಸ್‌ಗುಟ್ಟಹಳ್ಳಿ ಬಳಿಯ ಸುಮಾರು 40 ಅಡಿ ಆಳದ ಬಾವಿಗೆ ಹಾರಿದ್ದಳು. ನೂರಾರು ಜನ ಆ ಬಾವಿಯ ಸುತ್ತ ಸೇರಿ ಹಾಹಾಕಾರ ಎಬ್ಬಿಸುತ್ತಿದ್ದರೇ ಹೊರತು ಯಾರೋಬ್ಬರೂ ಬಾವಿಗೆ ಇಳಿಯುವ ಧೈರ್ಯ ತೋರಲಿಲ್ಲ. ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿತ್ತಾದರೂ ಅವರು ಬರುವಷ್ಟರಲ್ಲಿ ಜೀವ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ನಾನು ತಡ ಮಾಡದೆ ಯೂನಿಫಾರ್ಮ್, ಶೂ, ಜರ್ಕಿನ್ ಸಮೇತ ಹಗ್ಗದ ಸಹಾಯದಿಂದ ಬಾವಿಗಿಳಿದೆ.
ಮುಳುಗಿದ್ದ ಮಹಿಳೆ ಮತ್ತು ಮಗುವನ್ನು ನೀರಿನಲ್ಲಿ ಎತ್ತಿ ಹಿಡಿದುಕೊಂಡೆ. ಮತ್ತೊಂದು ಜೋಡುಹಗ್ಗದ ಸಹಾಯದಿಂದ ಅವರಿಬ್ಬರನ್ನು ಮೇಲಕ್ಕೆ ಎಳೆದುಕೊಳ್ಳಲಾಯಿತು. ಆದರೆ ಅದು ಪಾಳುಬಾವಿಯಾಗಿದ್ದ ಕಾರಣ ವಿಷಾನಿಲ ಆವರಿಸಿ ನನಗೆ ಉಸಿರುಕಟ್ಟಲಾರಂಭಿಸಿತು. ಹಗ್ಗ ಹಿಡಿದುಕೊಂಡು ಅರ್ಧ ಮಟ್ಟಕ್ಕೆ ಏರುವಷ್ಟರಲ್ಲಿ ನಿಶ್ಯಕ್ತನಾಗಿಬಿಟ್ಟೆ. ಮೇಲಿದ್ದವರೇ ಹಗ್ಗ ಎಳೆಯಬೇಕಾಯಿತು. ಅಸ್ವಸ್ಥನಾಗಿ ಬಿದ್ದ ನನ್ನನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸೇರಿಸಲಾಯಿತು. ಕಾಕತಾಳಿಯವೆಂದರೆ, ಹಿಂದೆ ನಾನು ಈಜುಕೊಳದಲ್ಲಿ ಮುಳುಗಿದ್ದಾಗ ಇದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ನಾನು ನೀರಿನಿಂದ ಮೇಲಕ್ಕೆತ್ತಿದ ಮಹಿಳೆಯೇನೋ ಬದುಕುಳಿದಳು. ಆದರೆ ಆಕೆಯ ಮಗು ಬದುಕುಳಿಯಲಿಲ್ಲ ಎಂಬ ಸುದ್ದಿ ತಿಳಿದು ದನಾನು ದುಃಖಿತನಾಗಿದ್ದೆ.
ಈಜುಕೊಳದ ಹರೀಶ್ ಮತ್ತು ನನ್ನ ಭಾವ ಡಾ.ಸುಬ್ಬಯ್ಯ ಅವರು ನನ್ನ ಪಾಲಿಗೆ ಪ್ರಾಣದಾತರು. ಬೇಸರದ ಸಂಗತಿ ಎಂದರೆ, ಪಾಣದ ಹಂಗು ತೊರೆದು ನನ್ನ ಜೀವ ಕಾಪಾಡಿದ ಈಜುಕೊಳದ ಕೋಚ್ ಹರೀಶ್ ಸಣ್ಣ ಪ್ರಾಯದಲ್ಲೇ ದಾರುಣವಾಗಿ ತೀರಿಕೊಂಡರು. ನನ್ನ ಜತೆ ಈಜಲು ಬಂದಿದ್ದ ದೇವಯ್ಯ ಕರ್ತವ್ಯದಲ್ಲಿರುವಾಗಲೇ ಅಪಘಾತಕ್ಕೆ ಬಲಿಯಾದರು.
Discussion about this post