ಪಾಟ್ನಾ: ಬಿಹಾರದ ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ ದಂಪತಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದೆ.
82 ವರ್ಷದ ನಿವೃತ್ತ ಆಯುಕ್ತ ಹರೇಂದ್ರ ಪ್ರಸಾದ್ ಹಾಗೂ ಅವರ ಪತ್ನಿ ಸಾಧನಾ ದಾಸ್ ಗುಪ್ತಾ ಅವರ ತಮ್ಮ ಡ್ರಾಯಿಂಗ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದೆ ಹತ್ಯೆ ಎಂಬಂತೆ ತೋರಿದೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಈ ಕುರಿತಂತೆ ಮಾತನಾಡಿರುವ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಮನು ಮಹರಾಜ್, ಎರಡೂ ಮೃತ ದೇಹಗಳ ಮೇಲೆ ಗಾಯಗಳು ಕಂಡುಬಂದಿವೆ. ಘಟನೆ ಸಂಬಂಧ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು, ಇವರಲ್ಲಿ ಚಾಲಕ ಮತ್ತು ಮನೆ ಕೆಲಸದಾಕೆ ಸೇರಿದ್ದಾರೆ ಎಂದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಯ ನಿಗೂಢತೆಯನ್ನು ತಾವು ಬೇಗನೆ ಭೇದಿಸುವುದಾಗಿ ಪೊಲಿಸರು ಹೇಳಿದ್ದಾರೆ.
















