ಬೆಂಗಳೂರು: ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ ಕುಟುಂಬ ನಮ್ಮದು. ಇನ್ನು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕೂರುತ್ತೇವಾ? ಜನರಿಗೆ ಮೋಸ ಮಾಡಿ ನಾನು ಸಿಎಂ ಸ್ಥಾನದಲ್ಲಿ ಇರುತ್ತೇನಾ? ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟಿಯ ಅಧಿವೇಶನದಲ್ಲಿ ಮಾತನಾಡಿದ ಅವರು, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದು ನಿಜ. ಮಿತ್ರ ಪಕ್ಷದವರು ನನ್ನ ಮೇಲೆ ತೀವ್ರ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನನಗೆ ಉಸಿರಾಡಲು ಪುರುಸೊತ್ತಿಲ್ಲದಂತೆ ಕೆಲಸ ಮಾಡುತ್ತಿದ್ದೇನೆ. ಎಷ್ಟು ಅಂತ ಕಾಂಗ್ರೆಸ್ ಶಾಸಕರ ಕಾಟ ತೆಡೆದುಕೊಳ್ಳಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ತಮ್ಮ ತಮ್ಮ ತಂದೆಯವರ ವಿಚಾರ ಪ್ರಸ್ತಾಪ ಮಾಡಿದ ಅವರು, ಅಂದು ಕೇಂದ್ರದಲ್ಲಿ ಪ್ರಧಾನಿಯಾಗಲು ಯಾರೂ ಸಿದ್ಧರಿರಲಿಲ್ಲ. ದೇವೇಗೌಡರನ್ನು ಬಲವಂತದಿಂದ ಕರೆದುಕೊಂಡು ಹೋಗಿ ಕೂರಿಸಿದರು. ಆ ಸ್ಥಾನ ಬಿಡಬೇಕಾದರೆ ಗೌಡರು ತ್ಯಾಗ ಮಾಡಿ ಬಂದರು. ಅಂತಹ ಕುಟುಂಬ ನಮ್ಮದು ಎಂದು ಪ್ರಶಂಸಿಸಿಕೊಂಡರು.

















