ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿದಿಗೆ ಕೆರೆಯಲ್ಲಿ ದೋಣಿ ವಿಹಾರ ನಡೆಸುತ್ತಿರುವ ಚುಂಚಾದ್ರಿ ಮೀನು ಅಭಿವೃದ್ಧಿ ಮತ್ತು ಜಲಕ್ರೀಡೆ ಸಂಸ್ಥೆ, ಸರ್ಕಾರದ ಆದೇಶ ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ತನ್ನ ಖಾಸಗೀ ಸ್ವತ್ತಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಅಕ್ಕಪಕ್ಕದ ಜಮೀನು ಹಾಗೂ ತೋಟಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಮಿಲ್ಟ್ರಿಕ್ಯಾಂಪ್ ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ಕಿಡಿ ಕಾರಿದ ರೈತರು, ಭದ್ರಾ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ನಿದಿಗೆ ಕೆರೆಯಲ್ಲಿ ಚುಂಚಾದ್ರಿ ಸಂಸ್ಥೆಯವರು ಸರಕಾರದೊಂದಿಗೆ ಮಾಡಿಕೊಂಡಿರುವ ಕರಾರನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಕೆರೆಯಲ್ಲಿನ ಹೂಳು ತೆಗೆದು ರಸ್ತೆ ಇಲ್ಲದಂತೆ ಅಕ್ರಮವೆಸಗಿ ಜಮೀನುಗಳ ಕಡೆ ಸುಮಾರು 15 ಅಡಿ ಎತ್ತರದ ರಸ್ತೆ ನಿರ್ಮಿಸಿದ್ದಾರೆ. ಇದರಿಂದಾಗಿ ಜಮೀನುಗಳಿಂದ ನೀರು ಕೆರೆಗೆ ಸರಾಗವಾಗಿ ಹರಿದು ಹೋಗದೇ ತೋಟ, ಬತ್ತದ ಫಸಲು ನಾಶವಾಗುತ್ತಿದೆ. ಹೂಳಿನ ಏರಿಗಳನ್ನು ತೆಗೆಯುವಂತೆ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದರೂ ಚುಂಚಾದ್ರಿ ಸಂಸ್ಥೆ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆಯ ಅಂಗಳದಲ್ಲಿ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ನಡು ನೀರಿನಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಇದರಿಂದ ಸುತ್ತಮುತ್ತಲಿನ ಜಮೀನುಗಳಿಗಿಂತಲೂ ಎತ್ತರ ಇರುವ ಕಾರಣ ಜಮೀನು ನೀರು ಹರಿದು ಹೋಗದೇ ಮುಳುಗಡೆಯಾಗುತ್ತಿದೆ. ಇನ್ನು, ದೋಣಿ ವಿಹಾರದ ಸಲಕರಣೆಗಳನ್ನು ಓಡಿಸಲು ಜಿಲ್ಲಾ ಪಂಚಾಯತ್ ಅಥವಾ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆದು ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ರೈತರ ಬೇಡಿಕೆಗಳೇನು?
- ನಮ್ಮ ಜಮೀನುಗಳ ಪಕ್ಕದಲ್ಲಿ ಹಾಕಲಾಗಿರುವ ಹೂಳನ್ನು ತೆರವುಗೊಳಿಸಬೇಕು, ಸರಕಾರಿ ಆದೇಶದ ಷರತ್ತುಗಳನ್ನು ಉಲ್ಲಂಘಿಸಿ ಅನುಮೋದಿಸಿರುವ ನಕ್ಷೆಯನ್ನು ರದ್ದುಗೊಳಿಸಬೇಕು
- ಕೆರೆಯ ಅಂಗಳದಲ್ಲಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸಿ, ದೋಣಿ ವಿಹಾರ ನಿಲ್ಲಿಸಬೇಕು
- ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುವ ಕುರಿತು ಸಂಬಂಧಿತ ಪ್ರಾಧಿಕಾರದಿಂದ ಮಂಜೂರಾತಿ/ಅನುಮತಿ ಪಡೆಯುವುದು, ಸಾರ್ವಜನಿಕರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು, ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಈ ಹಿಂದಿನ ಕಾರ್ಯಪಾಲಕ ಅಭಿಯಂತರರಿಗೆ ನೀಡಿದ ಮನವಿಗೆ ಸ್ಪಂದಿಸಿ ಚುಂಚಾದ್ರಿ ಸಂಸ್ಥೆಗೆ ದಿನಾಂಕ 23-11-2018 ರಲ್ಲಿ ಪತ್ರ ಬರೆದು ಕರಾರಿನ ಷರತ್ತುಗಳಂತೆ ಕೂಡಲೇ ಕೆರೆಯ ಅಂಗಳದಲ್ಲಿ ಹಾಕಿರುವ ಹೂಳಿನ ಏರಿಗಳನ್ನು ತೆಗೆಯಲು ಸೂಚಿಸಿದ್ದರು ಸಹ ಚುಂಚಾದ್ರಿ ಸಂಸ್ಥೆಯವರು ಕಾನೂನನ್ನು ಉಲ್ಲಂಘಿಸಿರುವುದಲ್ಲದೆ ಪತ್ರಕ್ಕೆ ಯಾವುದೇ ಮಾನ್ಯತೆ ನೀಡಿರುವುದಿಲ್ಲ ಎಂದು ಕಿಡಿಕಾರಿದರು.
ರಾಷ್ಟ್ರೀಯ ಹೆದ್ದಾರಿ 206ಕ್ಕೂ ಧಕ್ಕೆ!?
ಕೆರೆಯ ಪೂರ್ವ ಪಶ್ಚಿಮವಾಗಿ ಯಾವುದೇ ಕೋಡಿ ಹಾಗೂ ವೈಜ್ಞಾನಿಕವಲ್ಲದ ಏರಿ ನಿರ್ಮಿಸಲಾಗಿದೆ. ಇದು ದಕ್ಷಿಣ ಭಾಗದಲ್ಲಿ ಮತ್ತೊಂದು ಕೆರೆಯಾಗಿ ಮಾರ್ಪಟ್ಟು ಮಳೆಗಾಲದಲ್ಲಿ ಹಾಲಿ ಕೆರೆಗಿಂತಲೂ ಹೆಚ್ಚಿನ ಮಟ್ಟಕ್ಕೆ ಏರುತ್ತದೆ. ಒಂದು ವೇಳೆ ಕೆರೆ ತುಂಬಿದಾಗ ಏರಿ ಒಡೆದಲ್ಲಿ ಸುತ್ತಮುತ್ತಲಿನ ಜಮೀನು ಹಾಗೂ ತೋಟಗಳಿಗೆ ಮಾತ್ರವಲ್ಲ ಅಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ಕ್ಕೂ ಸಹ ಧಕ್ಕೆಯಾಗುವುದು ನಿಶ್ಚಿತ. ಕರಾರಿನ ಷರತ್ತುಗಳನ್ನು ಪರಿಗಣಿಸಿದೇ, ವೈಜ್ಞಾನಿಕವಾಗಿ ಯಾವುದೇ ಪರಿಶೀಲನೆ ನಡೆಸದೇ ಕೆರೆಯ ಅಂಗಳವನ್ನು ಖಾಸಗೀ ಸ್ವತ್ತು ಎಂಬಂತೆ ಕಾರ್ಯಪಾಲಕ ಅಭಿಯಂತರರು ನಕ್ಷೆಗೆ ಅನುಮೋದನೆ ನೀಡಿರುವುದು ಅನ್ಯಾಯ ಹಾಗೂ ಕಾನೂನಿನ ಉಲ್ಲಂಘನೆ ಎಂದು ಸ್ಥಳೀಯ ನೊಂದ ರೈತ ಗಿರಿಯಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಅಳಲು ತೋಡಿಕೊಂಡರು.
-ನೊಂದ ರೈತರು
ನಿದಿಗೆ ದೊಡ್ಡಕೆರೆ ಉಳಿಸಿ ಹೋರಾಟ ಸಮಿತಿಯ ಮುಖಂಡರಾದ ಮಲ್ಲೇಶಪ್ಪ, ಕೆಂಚಪ್ಪ, ಸತ್ಯನಾರಾಯಣ, ಅಂದಾನಪ್ಪ, ಚಂದ್ರಪ್ಪ, ಮಣಿ, ಕೃಷ್ಣಮೂರ್ತಿ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post