ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಚನೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತು ಎಂಟು ವಲಯಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿ ಅವರು ಮಾತನಾಡಿದರು.
ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಆಸ್ಪತ್ರೆಯಲ್ಲಿ ಮೃತರಾದವರಿಗೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಿ ಶವವನ್ನು ಕೂಡಲೇ ಹಸ್ತಾಂತರಿಸಲು ಅಥವಾ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಕ್ರಮ ವಹಿಸಬೇಕು. ಮನೆಯಲ್ಲಿ ಮೃತರಾದವರಿಗೂ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಿ ಮೃತದೇಹವನ್ನು ತುರ್ತಾಗಿ ಅಂತ್ಯಕ್ರಿಯೆ ನಡೆಸಲು ಕ್ರಮ ವಹಿಸಬೇಕು ಎಂದರು.
ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವೈದ್ಯರ ಕೊರತೆ ನಿವಾರಿಸಲು, ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಾರ್ಡಿನಲ್ಲೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ ಹಾಗೂ ಅಂಬ್ಯುಲೆನ್ಸ್ ನಿಗದಿ ಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗು ನೋಡಲ್ ಅಧಿಕಾರಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿ ವಾರ್ಡುಗಳಲ್ಲಿ ಕಲ್ಯಾಣ ಮಂಟಪಗಳನ್ನು ಹಾಗು ವಸತಿ ಗೃಹಳನ್ನು ಗುರುತಿಸಲಾಗಿದ್ದು, ಪ್ರತ್ಯೇಕವಾಗಿ ವಾಸಿಸಲು ಕೊಠಡಿಗಳು ಇಲ್ಲದವರಿಗೆ ಕ್ವಾರಂಟೈನ್ ಮಾಡಲು ಈ ಕಲ್ಯಾಣ ಮಂಟಪಗಳನ್ನು ಬಳಸುವಂತೆ ಸೂಚಿಸಿದರು.
ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು.
ಜನ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವ ಸಾಧ್ಯತೆಗಳಿರುವ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು.
ಪರೀಕ್ಷೆಯ ಫಲಿತಾಂಶ ದೊರೆತ ಎರಡು ಗಂಟೆಗಳೊಳಗೆ ಹಾಸಿಗೆ ಹಂಚಿಕೆ ಮಾಡಿ, ಅಂಬ್ಯುಲೆನ್ಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ರಮ ವಹಿಸಬೇಕು. ಈ ವ್ಯವಸ್ಥೆಯನ್ನು ವೀಕೇಂದ್ರೀಕರಿಸಿ, ವಲಯವಾರು, ಮೇಲ್ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.
ರೋಗ ಲಕ್ಷಣ ಇರುವ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು. ರೋಗಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್’ಗೆ ದಾಖಲಿಸಬೇಕು ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093






Discussion about this post