ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸ್ವಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯಡಿಯಲ್ಲಿ ವಾರ್ಡ್ ನಂ.13ರಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯು ಅವೈಜ್ಞಾನಿಕವಾಗಿದ್ದು, ಇದನ್ನು ಪರಿಶೀಲಿಸುವಂತೆ ಒತ್ತಾಯಿಸಿ ಕೋಟೆ ನಾಗರೀಕ ಹಿತರಕ್ಷಣಾ ಸಮಿತಿ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದೆ.
ನಗರದ ಕೋಟೆ ಮುಖ್ಯರಸ್ತೆಯಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯು ಕಿರಿದಾಗಿರುವುದರಿಂದ ಭವಿಷ್ಯದ ದೃಷ್ಟಿ ಇಟ್ಟುಕೊಂಡು ನಗರಾಭವೃದ್ಧಿ ಪ್ರಾಧಿಕಾರವು ರಸ್ತೆ ಅಗಲೀಕರಣಕ್ಕೆ ಈ ರಸ್ತೆಯನ್ನು ಸೇರಿಸಿದೆ. ಹೀಗಿದ್ದರೂ ಸಹ ಈ ರಸ್ತೆಯನ್ನು ಸ್ಮಾರ್ಟ್ ಸಿಟಿ ಅಭಿವೃದ್ಧಿಯಲ್ಲಿ ಸೇರಿಸಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಕಿರಿದಾದ ರಸ್ತೆಯಲ್ಲಿ ಎರಡೂ ಬದಿಯಲ್ಲಿ ಫುಟ್‌ಪಾತ್ ನಿರ್ಮಿಸುತ್ತಿದೆ. ಇದರಿಂದ ಈ ರಸ್ತೆಯಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ವಾಸವಿ ಸಾಲೆ, ಅಯ್ಯಪ್ಪಸ್ವಾಮಿ ಶಾಲೆಯ ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವುದರಿಂದ ಸಾರ್ವಜನಿಕರಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತದೆ ಎಂದು ದೂರಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯ ಮತ್ತು ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯ ಅಭಿಪ್ರಾಯ ಪಡೆಯದೇ ಅವೈಜ್ಞಾನಿಕವಾಗಿ ಫುಟ್‌ಪಾತ್ ನಿರ್ಮಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಮುಖವಾಗಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ವಿಶೇಷ ಕಾರ್ಯಕ್ರಮಗಳಲ್ಲಿ ಹಾಗೂ ಬೆಕ್ಕಿನ ಕಲ್ಮಠದ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಕ್ತರ ನಾಲ್ಕು ಚಕ್ರದ ವಾಹನಗಳನ್ನು ಇಲ್ಲಿಯೇ ನಿಲ್ಲಿಸುವುದರಿಂದ ಭಾರೀ ತೊಂದರೆಯಾಗುವ ಸಂಭವವಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯೋಜನಾಧಿಕಾರಿಗಳ ಉದ್ಧಟತನದಿಂದ ಈ ಕಾಮಗಾರಿ ಮುಂದುವರೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೂಡಲೇ ಉಸ್ತುವಾರಿ ಸಚಿವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಮಿತಿ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post