ಕಲ್ಪ ಮೀಡಿಯಾ ಹೌಸ್
ಬೆಂಗಳೂರು: 53 ವರ್ಷದ ರಾಜೇಶ್ (ಹೆಸರನ್ನು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ಅವರಿಗೆ ನಾಲಗೆಯ ಮೇಲೆ ಸಣ್ಣ ಹುಣ್ಣು ಕಾಣಿಸಿಕೊಂಡಿತು. ತಂಬಾಕು ಸೇವನೆಯ ಅಭ್ಯಾಸ ಇಲ್ಲದೇ ಇರೋದ್ರಿಂದ ಹುಣ್ಣಿನ ಬಗ್ಗೆ ಅವರು ಹೆಚ್ಚೇನೂ ತಲೆ ಕೆಡಿಸಿಕೊಳ್ಳಲಿಲ್ಲ. ಆದ್ರೆ ಕೆಲವು ವಾರಗಳವರಗೆ ನಾನಾ ಬಗೆಯ ಔಷಧಗಳನ್ನು ತೆಗೆದುಕೊಂಡರೂ ಅವರ ಬಾಯಿಯ ಹುಣ್ಣು ಸ್ವಲ್ಪವೂ ಕಡಿಮೆಯಾಗಲೇ ಇಲ್ಲ. ಕೊನೆಗೆ ಪರಿಚಿತರ ಸೂಚನೆಯಂತೆ ಟ್ರಸ್ಟ್ ವೆಲ್ ಆಸ್ಪತ್ರೆಯ ಡಾ ಸತೀಶ್ ಅವರರನ್ನು ಭೇಟಿಯಾದರು.
ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಆಗಿರುವ ಡಾ ಸಿ. ಸತೀಶ್, ನಾಲಗೆಯ ಬಯಾಪ್ಸಿ ಮತ್ತು ಸಿಟಿ ಸ್ಕ್ಯಾನ್ ಮಾಡಲು ತಿಳಿಸಿದರು. ಆಗ ರಾಜೇಶ್ ಅವರ ಅರ್ಧದಷ್ಟು ನಾಲಗೆ ಮತ್ತು ಕುತ್ತಿಗೆಯ ಲಿಂಫ್ ನೋಡ್ಗಳಿಗೆ ಕ್ಯಾನ್ಸರ್ ಹರಡಿರುವುದು ತಿಳಿಯಿತು. ಅದು ಇನ್ನಷ್ಟು ಹರಡದಂತೆ ತಡೆಯಲು ಮುಕ್ಕಾಲು ಭಾಗ (ಶೇ.75ರಷ್ಟು) ನಾಲಗೆ ಮತ್ತು ಕುತ್ತಿಗೆಯ ಎರಡೂ ಬದಿಯ ಲಿಂಫ್ ನೋಡ್ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಯಿತು. ಇದಾದ ನಂತರ ಮಾರ್ಚ್ 5, 2021ರಂದು ನಾಲಗೆಯ ಪುನರ್ ನಿರ್ಮಾಣದ ವಿಶಿಷ್ಟ ಶಸ್ತ್ರಚಿಕಿತ್ಸೆಯನ್ನು ಡಾ ಸತೀಶ್ ಸಿ ನೇತೃತ್ವದಲ್ಲಿ ಮಾಡಲಾಯಿತು.
ಅತಿ ಅಪರೂಪದ ಪುನರ್ ನಿರ್ಮಾಣದ ಶಸ್ತ್ರಚಿಕಿತ್ಸೆ ನಿರ್ವಹಿಸಿದ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಆಗಿರುವ ಡಾ. ಸತೀಶ್ ಮಾತನಾಡಿ, ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬದಲಿ ನಾಲಗೆಯನ್ನು ಜೋಡಿಸುವಾಗ ದೇಹದ ಹೊರಭಾಗದ ಚರ್ಮವನ್ನು ಪಡೆದು ಅದನ್ನು ನಾಲಗೆಯ ಹೊರಮೈಗೆ ಜೋಡಿಸಲಾಗುತ್ತದೆ. ಇಂಥಾ ನಾಲಗೆ ಇದ್ದಾಗ ಚರ್ಮದ ಮೇಲ್ಭಾಗದಲ್ಲಿ ಕೂದಲು ಬೆಳೆದು ರೋಗಿ ಬಾಯಿ ತೆರೆದಾಗ ಅಸಹ್ಯವಾಗಿ ಕಾಣುತ್ತದೆ. ಅಲ್ಲದೇ ಚರ್ಮ ಸದಾ ಒಣಗಿದಂತೆ ಇರುವುದರಿಂದ ರೋಗಿಗೆ ಯಾವಾಗಲೂ ಬಾಯಾರಿಕೆ ಎನಿಸುತ್ತಿರುತ್ತದೆ. ನಾಲಗೆಯ ಮೇಲೆ ತೇವಾಂಶ ಇರುವುದರಿಂದಲೇ ಮಾತನಾಡಲು ಸಾಧ್ಯ, ಅದೇ ಇಲ್ಲದಿದ್ದಾಗ ಮಾತು ಕೂಡಾ ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ವಿಭಿನ್ನವಾದ ಪರಿಹಾರ ಕಂಡುಕೊಂಡೆವು. ರೋಗಿಯ ಜಠರದ ಪದರವನ್ನು ತೆಗೆದು ಅದನ್ನೇ ನಾಲಗೆಯ ಆಕಾರಕ್ಕೆ ಬದಲಿಸಿದೆವು. ಜಠರದ ಒಳಮೈಯ ಭಾಗವನ್ನು ನಾಲಗೆಯ ಮೇಲ್ಪದರವಾಗಿ ಇರಿಸಿ ಜೋಡಿಸಿದೆವು. ಇದರಿಂದಾಗಿ ಹೊಸಾ ನಾಲಗೆಯ ಮೇಲ್ಪದರ ಹಿಂದಿನಂತೆಯೇ ತೇವದಿಂದ ಕೂಡಿದ್ದು, ರೋಗಿ ಮೊದಲಿನಂತೆಯೇ ಮಾತನಾಡಲು ಹಾಗೂ ಊಟವನ್ನು ನುಂಗಲು ಸಾಧ್ಯವಾಗುತ್ತಿದೆ ಎಂದರು.
ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಸಿಎಂಡಿ ಡಾ. ಹೆಚ್.ವಿ. ಮಧುಸೂಧನ್ ಮಾತನಾಡಿ, ಈಗಾಗಲೇ ಉಳಿದಿದ್ದ ರೋಗಿಯ ನಾಲಗೆಯ ಶೇ.25ರಷ್ಟು ಭಾಗಕ್ಕೆ ಹೊಸ ಭಾಗವನ್ನು ಜೋಡಿಸಲಾಗಿದೆ. 8 ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯಿಂದ ರೋಗಿ ಆರಾಮಾಗಿ ಮಾತನಾಡಲು ಮತ್ತು ಊಟಮಾಡಲು ಸಾಧ್ಯವಾಗಿದೆ. ಅರಿವಳಿಕೆ ತಂಡ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಐಸಿಯು ಆರೈಕೆ ರೋಗಿಯನ್ನು ಚೆನ್ನಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದೆ. ಕರ್ನಾಟಕದಲ್ಲಿ ಈ ರೀತಿಯ ಮೊಟ್ಟಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ. ಈ ಪ್ರಕರಣದ ಮೂಲಕ ಟ್ರಸ್ಟ್‌ವೆಲ್ ಹಾಸ್ಪಿಟಲ್‌ನ ಡಾ. ಸತೀಶ್ ಮತ್ತು ತಂಡವು ಇದೇ ಬಗೆಯ ಸಮಸ್ಯೆಗಳಿಂದ ಬಳಲುವ ಹಲವಾರು ರೋಗಿಗಳಿಗೆ ಭರವಸೆ ಮೂಡಿಸಿದ್ದಾರೆ ಎಂದರು.
ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಿಂದ ಹೊಸ ನಾಲಿಗೆಯನ್ನು ಪಡೆದ ಆಟೋ ಡ್ರೈವರ್ ರಾಜೇಶ್ (ಹೆಸರು ಬದಲಿಸಲಾಗಿದೆ) ಮಾತನಾಡಿ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ನನಗೆ ಟ್ರಸ್ಟ್ ವೆಲ್ ಆಸ್ಪತ್ರೆಯಿಂದ ಬಹಳಷ್ಟು ನೆರವಾಗಿದೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯಿಂದ ನಾನು ಈಗ ಮಾತನಾಡಲು ಸಾಧ್ಯವಾಗಿದೆ. ಇಲ್ಲದಿದ್ದರೆ ಬಹಳ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತಿತ್ತು ಎಂದರು.
ಈ ಸಂಧರ್ಭದಲ್ಲಿ ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕರಾದ ಡಾ ದೀಪಕ್ ಹಲ್ದೀಪುರ್, ಡಾ ಎನ್ ಎಸ್ ಚಂದ್ರಶೇಖರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post