ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ಆಯುರ್ವೇದ, ಯುನಾನಿ, ಯೋಗ, ಸಿದ್ದ, ಹೋಮಿಯೋಪತಿಯನ್ನೊಳಗೊಂಡ ಆಯುಷ್ ವಿಶ್ವವಿದ್ಯಾಲಯ ಶಿವಮೊಗ್ಗದ ಸೋಗಾನೆ ಗ್ರಾಮದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿದ್ದು, ಆರಂಭಿಕ ವೆಚ್ಚವಾಗಿ ಸರ್ಕಾರ ರೂ. 20 ಕೋಟಿ ಅನುದಾನ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಸಚಿವ ಸಂಪುಟದ ಸಚಿವರಿಗೆ, ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಿವಮೊಗ್ಗ ಜಿಲ್ಲೆಗೆ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ & ತೋಟಗಾರಿಕೆ ವಿಶ್ವವಿದ್ಯಾಲಯ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿಮಾನ ನಿಲ್ದಾಣ, ಅತ್ಯಾಧುನಿಕ ಬಸ್‌ನಿಲ್ದಾಣ, ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಹಲವಾರು ರಸ್ತೆ, ಸೇತುವೆ, ರೈಲ್ವೆ ಸಂಪರ್ಕಗಳ ಜೊತೆಗೆ ಆಯುಷ್ ವಿಶ್ವವಿದ್ಯಾಲಯ ಮತ್ತೊಂದು ಮೈಲಿಗಲ್ಲಾಗಿ ಉಳಿಯಲಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅಸಂಖ್ಯಾತ ಶಿವ-ಶರಣರ ಸಾಧು-ಸಂತರ ನೆಲೆವೀಡಾಗಿರುವ ಶಿವಮೊಗ್ಗ ಜಿಲ್ಲೆಯು ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಶಿಲಾಶಾಸನ, ಪ್ರಾಚೀನ ಸ್ಮಾರಕಗಳು, ಕೋಟೆ ಕೊತ್ತಲುಗಳು, ಪೌರಾಣಿಕ-ಧಾರ್ಮಿಕ ವಿಷಯಗಳಂತಹ ಅನೇಕ ಕಾರಣಗಳಿಂದಾಗಿ ಖ್ಯಾತವಾಗಿರುವಂತೆಯೇ, ಪರಂಪರಾಗತ ವೈದ್ಯಪದ್ಧತಿಗಳು, ಆಯುರ್ವೇದ ವೈದ್ಯವಿಜ್ಞಾನದ ನಿರಂತರ ಬಳಕೆಯ ತಾಣವೂ ಆಗಿರುವುದು ಸರ್ವರಿಗೂ ತಿಳಿದಿರುವ ಸಂಗತಿಯಾಗಿದೆ ಎಂದವರು ತಿಳಿಸಿದ್ದಾರೆ.
ಸುಮಾರು ಐದು ಸಾವಿರ ವರ್ಷಗಳ ಹಿಂದೆ ಚರಕ-ಸುಶ್ರುತ-ವಾಗ್ಭಟಾದಿ ಮಹಾಮುನಿ ಪ್ರಣೀತವಾದ ಆಯುರ್ವೇದ ವೈದ್ಯವಿಜ್ಞಾನವು ಜನಸಾಮಾನ್ಯರಲ್ಲಿ ನಂಬಿಕೆ-ಶ್ರದ್ಧೆಗಳು ಕಿಂಚಿತ್ತೂ ಕಡಿಮೆಯಾಗದೆ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ, ತನ್ನ ಅಸ್ತಿತ್ವವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದವರು ತಿಳಿಸಿದ್ದಾರೆ.
ಆಯುರ್ವೇದ ವೈದ್ಯಪದ್ಧತಿಗಳ ಸಂಶೋಧನೆ-ಸಮನ್ವಯಕ್ಕಾಗಿಯೇ ಪ್ರತ್ಯೇಕ ವಿವಿ ಅಗತ್ಯತೆಗೆ ಪ್ರಮುಖ ಕಾರಣ:
ಕರ್ನಾಟಕ ರಾಜ್ಯವೊಂದರಲ್ಲಿಯೇ 4 ಸರ್ಕಾರಿ ಮತ್ತು ಸುಮಾರು 70ಕ್ಕೂ ಹೆಚ್ಚಿನ ಖಾಸಗಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳಿದ್ದು, ಇವುಗಳಿಂದ ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ಕನಿಷ್ಟ 4000 ಆಯುರ್ವೇದ ವೈದ್ಯ ಪದವೀಧರರು ಹೊರಬರುತ್ತಿದ್ದಾರೆ. ಪ್ರಸ್ತುತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಡಿಯಲ್ಲಿ ಈ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿರುವ ಅವರು, ಆಗುಂಬೆ ಮಳೆಕಾಡಿನಲ್ಲಿ ಬೆಳೆಯುವ ವಿವಿಧ ಜಾತಿಯ ಸಸ್ಯೌಷಧಿಗಳು, ಪಶ್ಚಿಮಘಟ್ಟದ ಸೆರಗಿನಲ್ಲಿಯೇ ಲಭ್ಯವಿರುವ ಬಗೆಬಗೆಯ ವನೌಷಧಿಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಕಾರಣ ಈ ವಿಶ್ವವಿದ್ಯಾಲಯದ ಆರಂಭಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದವರು ತಿಳಿಸಿದ್ದಾರೆ.
ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಆಗಲಿರುವ ಪ್ರಯೋಜನಗಳು :
ಒಂದು ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಕನಿಷ್ಟ 500 ಜನರಿಗೆ ನೇರ ಮತ್ತು ಪರೋಕ್ಷವಾಗಿ ಕನಿಷ್ಟ 5000-6000 ಜನರಿಗೆ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ವಿಶ್ವವಿದ್ಯಾಲಯದಲ್ಲಿ ಔಷಧೀಯ ಉತ್ಪಾದನಾ ಘಟಕವನ್ನು ಆರಂಭಿಸಿದಲ್ಲಿ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲು ಸಾಧ್ಯವಾಗಲಿದೆ. ಗ್ರಾಮೀಣ ಜನತೆಗೆ ಉತ್ತಮ ಗುಣಮಟ್ಟದ ಔಷಧೀಯ ಸಸ್ಯಗಳನ್ನು ಬೆಳೆಸಲು ತರಬೇತಿ ನೀಡಿ, ಸ್ಥಳೀಯವಾಗಿಯೇ ಮಾರುಕಟ್ಟೆಯನ್ನು ಒದಗಿಸಿ, ತನ್ಮೂಲಕ ರೈತಾಪಿ ವರ್ಗದ ಜನತೆಯ ಆರ್ಥಿಕ ಸಂಕಷ್ಟವನ್ನು ದೂರ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದವರು ತಿಳಿಸಿದ್ದಾರೆ.
ನಮ್ಮ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಂಶೋಧನಾರ್ಥಿಗಳಾಗಿ ಅನ್ಯ ರಾಜ್ಯದೆಡೆಗೆ ವಲಸೆ ಹೋಗುವುದು ತಪ್ಪಲಿದೆ ಅಲ್ಲದೆ ಪಶ್ಚಿಮ ಘಟ್ಟಗಳ ನಿಸರ್ಗ ಸಹಜ ಔಷಧೀಯ ಸಸ್ಯಗಳ ಲಭ್ಯತೆಯಿಂದಾಗಿ ಅತ್ಯುತ್ತಮ ಔಷಧಿಗಳ ಸಂಯೋಜನೆಗೆ ಸಹಕಾರಿಯಾಗಲಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಔಷಧಿಗಳ ಉತ್ಪಾದನೆಗೊಳ್ಳಲಿದೆ ಮಾತ್ರವಲ್ಲ ಸಂಶೋಧನಾ ಚಟುವಟಿಕೆಗಳಿಂದಾಗಿ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆಗೆ ಸಹಕಾರಿಯಾಗಲಿದೆ ಎಂದವರು ತಿಳಿಸಿದ್ದಾರೆ.
ಇಡಿ ದಕ್ಷಿಣ ಭಾರತದ ಮೊಟ್ಟ ಮೊದಲ ಆಯುಷ್ ವಿಶ್ವವಿದ್ಯಾಲಯ ಇದಾಗಿರಲಿದ್ದು, ಈಗಾಗಲೇ ಸೋಗಾನೆ ವಿಮಾನ ನಿಲ್ದಾಣದ ಸಮೀಪ 100 ಎಕರೆ ಭೂಮಿಯನ್ನು ಆಯುಷ್ ಇಲಾಖೆಗೆ ಕಾಯ್ದಿರಿಸಲಾಗಿದೆ. ಸದರಿ ಆಯುಷ್ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕಾರ್ಯಾರಂಭಗೊಳಿಸಿದಲ್ಲಿ, ಆಯುರ್ವೇದವನ್ನು ಜಗತ್ತಿನೆಲ್ಲೆಡೆ ಪಸರಿಸಲು ಅನುವು ಮಾಡಿಕೊಟ್ಟ ಖ್ಯಾತಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಇಂತಹ ಒಂದು ಸುವರ್ಣಾವಕಾಶವನ್ನು ಕಾರ್ಯರೂಪಕ್ಕೆ ತಂದು ಮಲೆನಾಡಿಗರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿ, ಅತ್ಯಂತ ಪ್ರಾಚೀನ, ಚಿರಪರಿಚಿತ, ಶ್ರೇಷ್ಟ ಹಾಗೂ ಮೌಲ್ಯಯುತವಾದ ಆಯುರ್ವೇದ ವೈದ್ಯಪದ್ಧತಿಗಳ ಉಳಿವು-ಬೆಳವಣಿಗೆಗೆ ಕಾರಣರಾದವರಲ್ಲಿ ಅಗ್ರಮಾನ್ಯರಾಗಿ ಯಡಿಯೂರಪ್ಪನವರನ್ನು ಗುರುತಿಸಲಾಗುವುದೆಂದವರು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸರ್ಕಾರವು ಒಂದೇ ಒಂದು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿತ್ತು. ಅದುವರೆಗೂ 3 ಸರ್ಕಾರಿ, 5 ಅನುದಾನಿತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತರುವಾಯ ಎರಡನೇ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಲು 2008ರ ಆಯವ್ಯಯದಲ್ಲಿ ಘೋಷಣೆ ಮಾಡಿದ್ದರು. ಪ್ರಸ್ತುತ ಸುಮಾರು 6 ದಶಕಗಳ ನಂತರ ರಾಜ್ಯದಲ್ಲಿ ೨2ನೇ ಕಾಲೇಜಿಗೆ ನಾಂದಿ ಹಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಪ್ರಸ್ತುತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯಲ್ಲಿರುವ ರಾಜ್ಯದ 75 ಆಯುರ್ವೇದ, 4 ಯೋಗ ಮತ್ತು ನಿಸರ್ಗ ಚಿಕಿತ್ಸೆ, 5 ಯುನಾನಿ, ಸಿದ್ಧ, 14 ಹೋಮಿಯೋಪಥಿ ಮಹಾವಿದ್ಯಾಲಯಗಳ ಆಡಳಿತ ವ್ಯವಸ್ಥೆಯ ಕೇಂದ್ರ ಬಿಂದು ಇನ್ನು ಮುಂದೆ ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿರುವ ನೂತನ ಆಯುಷ್ ವಿಶ್ವವಿದ್ಯಾಲಯದ ಪರಿಧಿಯಲ್ಲಿ ಬರಲಿವೆ ಎಂದವರು ತಿಳಿಸಿದ್ದಾರೆ.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವು ಶಿವಮೊಗ್ಗ ನಗರದಲ್ಲಿ ಸ್ಥಾಪನೆ ಮಾಡಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಯಡಿಯೂರಪ್ಪನವರ ಆಸಕ್ತಿ ಮತ್ತು ಛಲ, ಅಂದಿನ ವಿಧಾನ ಪರಿಷತ್ ಸಭಾಪತಿಗಳಾಗಿದ್ದ ಡಿ.ಎಚ್. ಶಂಕರಮೂರ್ತಿಯವರು, ಶಿವಮೊಗ್ಗ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ, ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಆಶೋಕ್ ನಾಯ್ಕ ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳ ನಿರಂತರ ಸಹಕಾರದಿಂದ ಇಂದು ಶಿವಮೊಗ್ಗ ನಗರದಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ಸಾಧ್ಯವಾಗಿದೆ ಎಂದವರು ತಿಳಿಸಿದ್ದಾರೆ.
ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಕ್ಕಾಗಿ ನೆನಗುದಿಗೆ ಬಿದ್ದಿದ್ದ ಈ ಪ್ರಸ್ತಾವನೆಯನ್ನು ಬೆಳಗಾವಿ ಅಧಿವೇಶನದಲ್ಲಿ ಪುನರ್ ಮಂಡಿಸುವಂತೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಒತ್ತಡವನ್ನು ತಂದು ಹಾಗೂ ಯಡಿಯೂರಪ್ಪರವರ ಒತ್ತಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರವು ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದೆ. ಆಯುಷ್ ವಿಶ್ವವಿದ್ಯಾಲಯವನ್ನು ಸ್ಪಾಪಿಸಲು ಕಾರಣಕರ್ತರಾದ ಎಲ್ಲಾ ಮಹನೀಯರಿಗೆ ವೈಯಕ್ತಿಕವಾಗಿ ಹಾಗೂ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post