ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಕೆಎಫ್‍ಡಿ (ಮಂಗನ ಕಾಯಿಲೆ) ನಿಯಂತ್ರಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಎಫ್‍ಡಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.


ಜಿಲ್ಲೆಯಲ್ಲಿ 2019ರಲ್ಲಿ 4956 ಮಾದರಿ ಪರೀಕ್ಷೆ ನಡೆಸಲಾಗಿದ್ದು, 445 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು 15 ಮಂದಿ ಸಾವನ್ನಪ್ಪಿದ್ದರು. 1,15,957 ಮಂದಿಗೆ ಲಸಿಕೆ ಹಾಗೂ 37869 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು. 2020ರಲ್ಲಿ 6975 ಮಾದರಿ ಪರೀಕ್ಷೆ ನಡೆಸಲಾಗಿದ್ದು, 287 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು 5 ಮಂದಿ ಸಾವನ್ನಪ್ಪಿದ್ದರು. 106862 ಮಂದಿಗೆ ಲಸಿಕೆ ಹಾಗೂ 81995 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು. 2021ರಲ್ಲಿ 4211 ಮಾದರಿ ಪರೀಕ್ಷೆ ನಡೆಸಲಾಗಿದ್ದು, 23 ಕೆಎಫ್‍ಡಿ ಪ್ರಕರಣಗಳು ದೃಢಪಟ್ಟು ಸಾವು ಸಂಭವಿಸಿಲ್ಲ. 132769 ಮಂದಿಗೆ ಲಸಿಕೆ ಹಾಗೂ 89720 ಡಿಪಿಎಂ ತೈಲ ವಿತರಣೆ ಮಾಡಲಾಗಿತ್ತು. ಪ್ರಸ್ತುತ ವರ್ಷ 350 ಮಾದರಿ ಪರೀಕ್ಷೆ ನಡೆಸಲಾಗಿದ್ದು, 3 ಪ್ರಕರಣಗಳು ದೃಢಪಟ್ಟಿವೆ. ಯಾವುದೇ ಸಾವು ಸಂಭವಿಸಿರುವುದಿಲ್ಲ. ಇದುವರೆಗೆ 69991 ಮಂದಿಗೆ ಲಸಿಕೆ ಹಾಗೂ 21450 ಡಿಪಿಎಂ ತೈಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಯಾಸನೂರು ಕಾಡಿನ ಖಾಯಿಲೆಯ ಲಸಿಕೆಯನ್ನು 20ವರ್ಷಗಳಿಂದ ಐಎಎಚ್‍ವಿಬಿ ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದ್ದು, ಹಾಲಿ 50ಸಾವಿರ ಲಸಿಕೆ ತಯಾರಾಗಿರುತ್ತದೆ. ಸದರಿ ಲಸಿಕೆಯ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಉಪಯೋಗಕ್ಕೆ ಲಭ್ಯವಾಗಲಿದೆ. ಮಾರ್ಗಸೂಚಿ ಪ್ರಕಾರ ಕೋವಿಡ್ ಲಸಿಕೆ ಪಡೆದ ಎರಡು ವಾರಗಳ ನಂತರ ಲಭ್ಯವಿರುವ ಕೆಎಫ್‍ಡಿ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು. ಜಿಲ್ಲೆಯಲ್ಲಿ ಬಿಎಸ್‍ಎಲ್-2 ಶ್ರೇಣಿಯ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಬಿಎಸ್‍ಎಲ್-3 ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು.
ಆರ್‍ಸಿಎಚ್ ಡಾ.ನಾಗರಾಜ ನಾಯಕ್, ಡಾ.ಅರುಣ್ ಕುಮಾರ್ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post