ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಅಧಿಕಾರಿಗಳು ಪೌರ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ಹೇಳಿದರು.
ಸರ್ಕ್ಯೂಟ್ ಹೌಸಿನಲ್ಲಿಂದು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಹಿತರಕ್ಷಣೆ ಮುಖ್ಯ. ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಇನ್ನಷ್ಟು ಸುಧಾರಣೆಗಳಾಗಬೇಕು. ಪೌರ ಕಾರ್ಮಿಕರ ಬ್ಯಾಂಕ್ ಪಾಸ್ ಬುಕ್ ಹಾಗೂ ಎಟಿಎಂ ಕಾರ್ಡ್ ಗಳನ್ನು ಗುತ್ತಿಗೆದಾರರು ತೆಗೆದುಕೊಳ್ಳಬಾರದು. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ನೇರ ವೇತನ ಪಾವತಿಸಬೇಕು. ಈಗಾಗಲೇ ನಿಧನ ಹೊಂದಿದ 7 ಜನ ಪೌರ ಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು. ದಿನನಿತ್ಯದ ಕೆಲಸದಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ,ಜೀವಿತಾವಧಿ ಇಳಿಮುಖವಾಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್, ಬೂಟು, ಗ್ಲೌಸ್, ರೇನ್ ಕೋಟ್, ಸಮವಸ್ತ್ರ, ವೈದ್ಯಕೀಯ ಕಿಟ್ ಮತ್ತಿತರ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.
ಪೌರ ಕಾರ್ಮಿಕರು ಮಾಡುವ ಕೆಲಸವನ್ನು ಬೇರೆ ಯಾರೂ ಮಾಡುವುದಿಲ್ಲ. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಶುದ್ಧ ಕುಡಿಯುವ ನೀರು, ಉತ್ತಮ ಗುಣಮಟ್ಟದ ಉಪಹಾರ , ಮೂತ್ರಾಲಯಗಳ ವ್ಯವಸ್ಥೆ ಒದಗಿಸಬೇಕು. ಪೌರ ಕಾರ್ಮಿಕರಿಗೆ ಅವರ ವಾಸ ಸ್ಥಳದಿಂದ ಸಾಧ್ಯವಾದಷ್ಟು ಹತ್ತಿರದ ಪ್ರದೇಶದ ಕೆಲಸಕ್ಕೆ ಹಾಜರಾಗಲು ಅನುವು ಮಾಡಿಕೊಡಬೇಕು. ಬರುವ ಅಕ್ಟೋಬರ್ ನಲ್ಲಿ ಮತ್ತೆ ಸಭೆ ನಡೆಸಿ,ಈಗ ಚರ್ಚಿಸಿದ ಸಮಸ್ಯೆಗಳ ನಿವಾರಣೆ ಪರಿಶೀಲಿಸಲಾಗುವುದು. ಪೌರ ಕಾರ್ಮಿಕರ ಮಕ್ಕಳ ಆರೋಗ್ಯ, ಕೌಶಲ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪೌರ ಕಾರ್ಮಿಕರು ಹಾಗೂ ಕಸ ಸಂಸ್ರಹಣೆ ಟಿಪ್ಪರ್ ಚಾಲಕರಿಗೆ ಜೀವ ವಿಮೆ ಮಾಡಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ,ಜೆ.ಸಿ.ನಗರದ ವಲಯ ಕಚೇರಿ 8 ರಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ.ಉಳಿದ ಕಡೆಗಳಲ್ಲಿಯೂ ವಿಶ್ರಾಂತಿ ಗೃಹಗಳು ನಿರ್ಮಾಣವಾಗಲಿವೆ ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ ಎಚ್ ಅವರು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಮಾಸ್ಕ್, ಬೂಟು, ಗ್ಲೌಸ್ ವಿತರಿಸಲಾಯಿತು.
Also read: ಈದ್ಗಾ ಯಾರಪ್ಪನ ಆಸ್ತಿಯಲ್ಲ, ಗಣೇಶೋತ್ಸವಕ್ಕೆ ಅರ್ಜಿ ಕೊಟ್ಟರೆ ಅವಕಾಶ ನೀಡಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಯೋಗದ ಕಾರ್ಯದರ್ಶಿ ಚಂದ್ರಕಲಾ, ಸದಸ್ಯ ಕೆ.ಪಿ.ವೆಂಕಟೇಶ, ಸಫಾಯಿ ಕರ್ಮಚಾರಿಗಳ ರಾಜ್ಯ ಪರಿಷತ್ ಅಧ್ಯಕ್ಷ ಜಗದೀಶ ಹಿರೇಮನಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಂಬರ, ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರಾದ ರೇಣುಕಪ್ಪ ಕೇಲೂರ, ವಿದ್ಯಾ ನರಸಪ್ಪನವರ, ಹನುಮಂತಪ್ಪ ಮಾಲಪಲ್ಲಿ, ಭೀಮರಾವ್ ಸವಣೂರ, ಕಾರ್ಮಿಕ ಇಲಾಖೆಯ ಲಲಿತಾ ಸಾತೇನಹಳ್ಳಿ, ತಹಸೀಲ್ದಾರ ಜಿ.ವಿ. ಪಾಟೀಲ್, ಎಚ್.ಎ. ಕೊಚ್ಚರಗಿ ಸೇರಿದಂತೆ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ವಲಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















