ಕಲ್ಪ ಮೀಡಿಯಾ ಹೌಸ್ | ಉಡುಪಿ | ಅಕ್ಷರ ರೂಪ: ಕೌಸಲ್ಯಾರಾಮ |
ಸ್ವಾತಂತ್ರ್ಯ ಎಂಬುದು ಅಖಂಡ ರಾಷ್ಟ್ರದ ಹಿತಕ್ಕೆ ಪೂರಕವಾಗಿರಬೇಕು. ಆದರೆ ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಸ್ವಾತಂತ್ರ್ಯ ರಾಷ್ಟ್ರ ಘಾತಕ ಕೃತ್ಯಗಳಿಗೆ ಬಳಕೆಯಾಗುತ್ತಿದೆ. ಹಾಗಾಗಿ ಯಾರಿಗೆ ಬಂತು…? ಎಲ್ಲಿಗೆ ಬಂತು… 47ರ ಸ್ವಾತಂತ್ರ್ಯ? – ಇದು ಉಡುಪಿ ಶ್ರೀ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅಂತರಂಗದ ಕಳವಳ.
ಉಡುಪಿ ಕ್ಷೇತ್ರದಲ್ಲಿರುವ ಭಂಡಾರಕೇರಿ ಮಠದಲ್ಲಿ 45ನೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಅವರು ಸ್ವಾತಂತ್ರೋತ್ಸವದ ಮುನ್ನಾದಿನ ವಿಶೇಷ ಸಂದೇಶದಲ್ಲಿ ತಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ.
ದೇಶವಾಸಿಗಳು ಮುಕ್ತವಾಗಿ ಬದುಕು ನಿರ್ವಹಿಸಿಕೊಂಡು ನಾಡಿನ ಹಿತಕ್ಕಾಗಿ ಶ್ರಮಿಸಬೇಕು. ವಿಶ್ವಕ್ಕೆ ಮಾದರಿಯಾದ ಭಾರತದಲ್ಲಿ ಸನಾತನ ಧರ್ಮ, ಸಂಸ್ಕೃತಿ, ಪರಂಪರೆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಭಗವಂತ ಸರ್ವತಂತ್ರ, ಸ್ವತಂತ್ರ. ಅವನ ಇಚ್ಛೆಯಂತೆ ಎಲ್ಲವೂ ನಡೆಯಬೇಕು. ನಾವು ಆತನ ಅಧೀನ ಜೀವಗಳು. ಇಹ ಮತ್ತು ಪರದ ಸಾಧನೆಗೆ ಮಾನವ ಜನ್ಮ ಪಡೆದವರು ಎಂಬ ಧ್ಯೇಯ ಇಟ್ಟುಕೊಂಡವರು. ಹಾಗಿದ್ದೂ ದೇಶದ ಅಖಂಡತೆ, ಸಾರ್ವಭೌಮತೆಗೆ ಮನ್ನಣೆ ನೀಡಿ, ಸಂವಿಧಾನವನ್ನೂ ಗೌರವಿಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಎಂಬುದು ಕೇವಲ ರಾಜ ತಾಂತ್ರಿಕವಾಗಿ ಒಲಿದರೆ ಸಾಲದು. ಸನಾತನ ಭಾರತೀಯ ಪರಂಪರೆ, ಮೌಲ್ಯ, ಸಂಸ್ಕೃತಿ, ಆಚಾರ-ವಿಚಾರ ಮತ್ತು ಜೀವ ವೈವಿಧ್ಯತೆಗಳನ್ನು ಜತನವಾಗಿ ಕಾಪಿಟ್ಟಿಕೊಂಡು ಗೌರವಯುತವಾಗಿ ಬದುಕಿ ನಾಡಿನ ಹಿತಕ್ಕೆ ಜೀವಿಸುವ ಕ್ರಮವೇ ನಿಜವಾದ ಸ್ವಾತಂತ್ರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಭರತ ಖಂಡದಲ್ಲಿ ಸನಾತನ ಧರ್ಮಕ್ಕೆ ಚ್ಯುತಿ ಬರುವಂತೆ ನಡೆದುಕೊಂಡರೆ, ಮೌಲ್ಯ ಪ್ರತಿನಿಧಿಸುವ ಮಹಾಕಾವ್ಯಗಳ ಪಾತ್ರಗಳನ್ನು ಕೆಡಿಸಿದರೆ ಅದು ಅನಿಯಂತ್ರಿತ ಸ್ವಾತಂತ್ರೃ. ಭರತ ಭೂಮಿ ಮತ್ತು ಭಾರತಾಂಬೆ ಬಗ್ಗೆ ಭಕ್ತಿ ಇದ್ದವ ಈ ಕೃತ್ಯ ಎಸಗಲಾರ ಎಂದು ಅವರು ದಿಟ್ಟವಾಗಿ ನುಡಿದರು. ಯಾವ ಸಂವಿಧಾನ ಉಚಿತವಾಗಿ ಎಲ್ಲ ಸವಲತ್ತುಗಳನ್ನೂ ಕೊಡು ಎಂದು ಹೇಳಿದೆ? ಇದರಿಂದ ವಿಷಮ ಸ್ಥಿತಿ ಮುಂದೆ ನಿರ್ಮಾಣವಾಗಲಿದೆ ಎಂದು (ಗ್ಯಾರಂಟಿ ಯೋಜನೆಗಳ ಹೆಸರು ಹೇಳದೇ) ಅವರು ಗುಡುಗಿದರು.
ಭಾರತಕ್ಕೆ ಬಹುದೊಡ್ಡ ಅಪಾಯ ಕಾದಿದೆ
ದೇಶದಲ್ಲಿ ಇಂದು ನಡೆಯುತ್ತಿರುವ ಮತಾಂತರ, ಧಾರ್ಮಿಕ ಆಕ್ರಮಣ, ಭಯೋತ್ಪಾದನೆ, ಮೀಸಲು ನೀತಿ, ಸೈಬರ್ ಕ್ರೈಂ, ಸ್ತ್ರೀ ಶೋಷಣೆ ಮತ್ತಿತರ ಅಸಂವಿಧಾನಿಕ ಕೃತ್ಯಗಳು ಹೀಗೆಯೇ ಮುಂದುವರಿದರೆ ಭಾರತಕ್ಕೆ ಬಹುದೊಡ್ಡ ಅಪಾಯ ಕಾದಿದೆ. ಆತಂಕವಾದಿಗಳೇ ನಮ್ಮನ್ನು ಆಳುವ ಸ್ಥಿತಿ ಬರಲಿದೆ. ಭಾರತೀಯ ಸಂಸ್ಕೃತಿ, ಧರ್ಮ, ಪರಂಪರೆ ಆಚರಿಸುವವರೇ ಸ್ವಾತಂತ್ರ್ಯ ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ. ಇವುಗಳ ಬಗ್ಗೆ ದೇಶವಾಸಿಗಳು ಇಂದೇ ಎಚ್ಚೆತ್ತುಕೊಳ್ಳುವ ತುರ್ತು ಇದೆ.
-ವಿದ್ಯೇಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶರು
ವಿಚಾರವಾದಿಗಳೇ ಎಚ್ಚರ!
ಮನಸ್ಸಿಗೆ ಬಂದ ಹಾಗೆ ಬದುಕುವುದು, ಬಾಯಿಗೆ ಬಂದ ಹಾಗೆ ಮಾತನಾಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ಇದನ್ನು ಸಂವಿಧಾನ ಬೆಂಬಲಿಸುವುದಿಲ್ಲ. ಹಿಂದು ಧರ್ಮದ ಬಗ್ಗೆ ಅವಹೇಳನವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು ಪ್ರಕಟಮಾಡುವುದು, ನಿರಾಧಾರವಾಗಿ ಹೇಳಿಕೆಗಳನ್ನು ಕೊಡುವುದೇ ವಾಕ್ ಸ್ವಾತಂತ್ರ್ಯ ಎನಿಸಲಾರದು. ಕೆಲವು ಸಾಹಿತಿಗಳು, ಕಲಾವಿದರು, ವಿಚಾರವಾದಿ ಎನಿಸಿಕೊಂಡವರು ಸನಾತನ ಪರಂಪರೆಯ ಋಷಿಗಳು, ಪುರಾಣ ಪುರುಷರು, ಮರ್ಯಾದ ಪುರುಷೋತ್ತಮರು, ವೀರ ವನಿತೆಯರ ಬಗ್ಗೆ ‘ಸೃಜನಶೀಲತೆ’ ಎಂಬ ಹೆಸರಿನಲ್ಲಿ ಮಹಾಕಾವ್ಯಗಳನ್ನೇ ತಮಗೆ ಬೇಕಾದಂತೆ ತಿರುಚಿ, ಪಾತ್ರಗಳನ್ನು ಹೀನಾಯವಾಗಿ ಚಿತ್ರಿಸುವುದು ಸರ್ವಥಾ ಸಲ್ಲದು ಎಂದು ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಯಾವುದೇ ವಿಚಾರವನ್ನು ಅಲ್ಲಗಳೆಯಬೇಕಾದರೆ ಅದಕ್ಕೆ ಸೂಕ್ತವಾದ ಆಧಾರ ಮತ್ತು ಸಾಕ್ಷಿ ಇಟ್ಟುಕೊಂಡು ಖಂಡನೆ ಮಾಡಬೇಕು. ಯಾವುದೇ ಮತ, ಧರ್ಮ ಮತ್ತು ಸಮುದಾಯಗಳ ಸಂಸ್ಕೃತಿಗಳನ್ನು ತುಚ್ಛವಾಗಿಕಾಣುವುದು, ಚಿತ್ರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ. ಭಯೋತ್ಪಾದಕರ ಪರವಾಗಿ ಮಾತನಾಡುವುದು, ದೇಶವನ್ನು ವಿಭಜಿಸುವ ಶಕ್ತಿಗಳನ್ನು ಬೆಂಬಲಿಸುವುದು, ಭಾರತೀಯ ಸಂಸ್ಕೃತಿ ಪ್ರತಿಪಾದಕರಿಗೆ ಧಕ್ಕೆ ತರುವಂಥ ಚಟುವಟಿಕೆ ಮಾಡುವುದು ದೇಶ ದ್ರೋಹವಾಗುತ್ತದೆ. ಸಂವಿಧಾನ ಎಲ್ಲಿಯೂ ವಿಚ್ಛಿದ್ರಕಾರಿ ಕೃತ್ಯ ಮಾಡು ಎಂದು ಹೇಳಿಲ್ಲ ಎಂದು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೂ ಗುಲಾಮರಾಗಿಯೇ ಇದ್ದೇವೆ
ಬ್ರಿಟಿಷರ ದಾಸ್ಯದಿಂದ 1947ರಲ್ಲಿ ಮುಕ್ತಿ ಪಡೆದವು. ಆದರೆ ಇಂದಿಗೂ ಅನೇಕ ವಿಷಯಗಳಲ್ಲಿ ಗುಲಾಮರಾಗಿಯೇ ಇದ್ದೇವೆ. ನಮ್ಮ ಶಿಕ್ಷಣ ಪದ್ಧತಿ ಆಂಗ್ಲರ ಅನುಕರಣೆಯೇ ಆಗಿದೆ. ಅನೇಕ ಕಚೇರಿಗಳಲ್ಲಿ ಬ್ರಿಟಿಷ್ ಪದ್ಧತಿಯೇ ಜಾರಿಯಲ್ಲಿದೆ. ಈ ನೆಲಕ್ಕೆ ತನ್ನದೇ ಆದ ಸಂಸ್ಕೃತಿ ಮತ್ತು ಬದುಕುವ ರೀತಿ, ಮೌಲ್ಯಗಳಿವೆ. ಆದರೆ ಅವುಗಳನ್ನು ದಿಟ್ಟತನದಿಂದ ಆಚರಿಸುವ, ಅನುಸರಿಸುವವರಿಗೆ ಇಂದು ಸಂಕಷ್ಟ ಎದುರಾಗಿದೆ. ಭರತ ಖಂಡದಲ್ಲಿ ಸಾವಿರಾರು ವರ್ಷಗಳಿಂದ ಋಷಿಮುನಿಗಳು, ಸಾಧು ಸಂತರು ಹಾಕಿಕೊಟ್ಟ ಹಿಂದೂ ಪರಂಪರೆಯನ್ನು ಅನುಸರಿಸುವುದೇ ತಪ್ಪು ಎಂದು ಕೆಲವರು ಚಳವಳಿಗಳನ್ನೇ ಮಾಡಿದ್ದಾರೆ. ನಮ್ಮ ಮಣ್ಣಿನ ಸನಾತನ ಪದ್ಧತಿಯಂತೆ ಬದುಕು ನಡೆಸುವುದು ‘ಜಾತ್ಯತೀತ ತತ್ವ’ಕ್ಕೆ ವಿರೋಧ ಎಂದು ಕೆಲವರು ಬಣ್ಣಿಸುತ್ತಿದ್ದಾರೆ. ಯಾವ ದೇಶದಲ್ಲಿ ಹೀಗೆ ಹೇಳುವ ಸಂವಿಧಾನ ಮತ್ತು ನೀತಿ ಇದೆ ಎಂದು ಸ್ವಾಮೀಜಿ ಪ್ರಶ್ನಿಸಿದರು.
ರಾಜಕೀಯ ಮುಖಂಡರಿಗೆ ಸಂಹಿತೆ ಇಲ್ಲವೇ?
ನಾವು ಏನು ಬೇಕಾದರೂ ಮಾಡಬಹುದು ಎಂಬ ಆ ನಿಯಂತ್ರಿತ ಸ್ವಾತಂತ್ರ್ಯವನ್ನು ನಮ್ಮ ರಾಜಕೀಯ ನಾಯಕರು ಹೊಂದಿಬಿಟ್ಟಿದ್ದಾರೆ. ಅವರ ವರ್ತನೆಗೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಿವೆ. ಅವರಿಗೆ ಯಾವುದೇ ಸಂಹಿತೆಗಳು ಇಲ್ಲವೇ ? ನಾಯಕರಿಗೆ ಸ್ವಾತಂತ್ರ್ಯ ಎಂಬ ಪದದ ಅರ್ಥ ತಿಳಿಯಬೇಕಿದೆ. ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರತಿಪಾದಿಸುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳನ್ನು ಧೈರ್ಯದಿಂದ ಕೈಗೊಳ್ಳುವ ಪ್ರವೃತ್ತಿ ಆಡಳಿತ ಪಕ್ಷಕ್ಕೂ ಇಂದು ಇಲ್ಲದಾಗಿರುವುದು ಬೇಸರಕರ ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಮೊದಲು ಉದ್ಯೋಗ- ನಂತರ ಸವಲತ್ತು
ದಲಿತರು, ಆರ್ಥಿಕವಾಗಿ ಹಿಂದುಳಿದವರು, ಯುವಕರು, ಶೋಷಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೊದಲು ಅವರಿಗೆ ಅರ್ಹ ಉದ್ಯೋಗ ಸೃಷ್ಟಿಮಾಡಿ. ಆಳುವ ಪಕ್ಷಗಳು ಕಾಯಕ ಸಂಸ್ಕೃತಿಯನ್ನು ಬೆಂಬಲಿಸುವ ಬದಲು ‘ಉಚಿತ ಭಾಗ್ಯ’ ಗಳನ್ನು ನೀಡಿ ಒಂದು ಪೀಳಿಗೆಯನ್ನೇ ಸೋಮಾರಿಗಳನ್ನಾಗಿಸುವ ಕೃತ್ಯವನ್ನು ಮಾಡುತ್ತಿವೆ. ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಮೊದಲು ಕೈ ತುಂಬಾ ಕೆಲಸ ಕೊಡಿ. ಆನಂತರ ಸಂಬಳ, ಸವಲತ್ತು ನೀಡಿ. ಅದನ್ನು ಹೊರತುಪಡಿಸಿ ಕೇವಲ ಓಟ್ ಬ್ಯಾಂಕ್‌ಗಾಗಿ ಉಚಿತ ಸವಲತ್ತು ನೀಡಿ ಸಮಾಜವನ್ನು ದುಡಿಮೆಯಿಂದ ವಿಮುಖ ಮಾಡುವುದು ಸ್ವಾತಂತ್ರೃ ಭಾರತದ ಅಭ್ಯುದಯಕ್ಕೆ ಮಾರಕ ಎಂದು ಸ್ವಾಮೀಜಿ ನೇರವಾಗಿ ವ್ಯವಸ್ಥೆ ಟೀಕಿಸಿದರು.
ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನಾವು ನಮ್ಮತನದ ಅರಿವು ಮೂಡಿಸಿಕೊಳ್ಳದಿದ್ದರೆ ದುರಂತಗಳನ್ನು ಎದುರಿಸುವ ಸಂಕಷ್ಟಕಾಲಕ್ಕೆ ನಾವುಗಳೇ ಸಾಕ್ಷಿ ಆಗಬೇಕಿದೆ. ಪ್ರತಿಯೊಬ್ಬರೂ ನಮ್ಮ ನೆಲ, ನಮ್ಮ ತನ, ನಮ್ಮ ರಾಷ್ಟ್ರ, ನಮ್ಮ ಸಂವಿಧಾನ ಎಂಬ ಗೌರವಾದರ ಮೂಡಿಸಿಕೊಂಡು ರಾಷ್ಟ್ರೀಯ ವಾಹಿನಿಯಲ್ಲಿ ಒಂದಾಗಬೇಕು. ಮನ ಬಂದಂತೆ ಬದುಕುವ ಸ್ವೇಚ್ಛೆಗೆ ಒಳಗಾದರೆ ಅದು ಅನಿಯಂತ್ರಿತ ಸ್ವಾತಂತ್ರ್ಯವೆಂದಾಗುತ್ತದೆ. ರಾಷ್ಟ್ರ ಘಾತಕ ಶಕ್ತಿಗಳನ್ನು ಸದೆ ಪಡೆಯುವ, ಭಯೋತ್ಪಾದನೆ ಮಟ್ಟ ಹಾಕುವ, ಭಾರತೀಯತೆಯನ್ನು ಎತ್ತಿ ಹಿಡಿಯುವ ದಿಟ್ಟ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು. ಆಗ ಮಾತ್ರ ನಾವು ಗಳಿಸಿದ ಸ್ವಾತಂತ್ರ್ಯಕ್ಕೆ ಪರಿಪೂರ್ಣ ಅರ್ಥ ಬರುತ್ತದೆ. ದೇಶದ ಬಗ್ಗೆ ಗೌರವ ಇದ್ದವ ಮಾತ್ರ ನಿಜವಾದ ಪ್ರಜೆ ಎಂದು ಭಂಡಾರ ಕೇರಿ ಶ್ರೀಗಳು ನುಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post