ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಮ್ಮ ಸಂಸ್ಕೃತಿಯ ಬುನಾದಿಯೇ ಲಲಿತ ಕಲೆಗಳು. ಇದರಲ್ಲಿಯೂ ಮುಖ್ಯವಾಗಿ ಸಂಗೀತ, ನೃತ್ಯ ಮುಂತಾದ ಪ್ರದರ್ಶನ ಕಲೆಗಳು. ಇವುಗಳನ್ನು ಪೋಷಿಸಿ ಬಳೆಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಸಮಾಜ ದೃಷ್ಟಿಯಿಂದ ಹಿತಕರವಾದ ಬೆಳವಣಿಗೆ.
ಬೆಂಗಳೂರಿನ ನಟನ ತರಂಗಿಣಿ ಸಂಸ್ಥೆ ಅನೇಕ ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡಲು ವೇದಿಕೆಯನ್ನು ಕಲ್ಪಿಸತೊಡಗಿದೆ.

ಶ್ರೀ ವೆಂಕಟೇಶ್ವರ ಸ್ವಾಮಿಯು ವರಾಹಾವತಾರಿಯಾಗಿ ಕಂಗೊಳಿಸುತ್ತಿರಲು ನಟನ ತರಂಗಿಣಿಯ ವಿದ್ಯಾರ್ಥಿನಿ ಕು.ಜಿ.ವಿ.ಶ್ರೀಲಾಸ್ಯ, ತನ್ನಲಾಸ್ಯ-ತಾಂಡವಯುತ ಭರತನಾಟ್ಯ ಪ್ರದರ್ಶನವನ್ನು ನೀಡಿ ನೆರೆದಿದ್ದ ಜನಮನವನ್ನು ಸೆಳೆದರು.
ಯಾವುದೇ ಭರತನಾಟ್ಯ ಪ್ರದರ್ಶನದ ಮೊದಲ ವಿನಿಕೆ ಪುಷ್ಪಗಳನ್ನು ಅರ್ಪಿಸಿ ವೇದಿಕೆಗೆ, ಸಭೆಗೆ ಸಲ್ಲಿಸುವ ನಮನ, ಪುಷ್ಪಾಂಜಲಿ ಹೀಗೆ ನರ್ತನವನ್ನು ಪ್ರಾರಂಭಿಸಿದ ಶ್ರೀಲಾಸ್ಯ, ಊತ್ತುಕ್ಕಾಡು ವೆಂಕಟ ಸುಬ್ಬಯ್ಯ ಅವರ ಶ್ರೀ ವಿಘ್ನರಾಜಂಭಜೇ ಕೃತಿಯ ಮೂಲಕ ತಮ್ಮ ನೃತ್ತದ ಕುಶಲತೆಯನ್ನು ವ್ಯಕ್ತಪಡಿಸಿದರು.
ದೇವಿಯನ್ನು ಕುರಿತ, ವಿದ್ವಾನ್ ಗುರುಮೂರ್ತಿ ಅವರ ಓಂಕಾರ ಬಿಂದು, ದೇವಿಯ ಓಂಕಾರ ರೂಪವನ್ನು ತೋರಿದರೆ, ಶ್ರೀಪುರಂದರದಾಸರ ಹನುಮಂತ ದೇವನಮೋ, ಹನುಮಂತನ ರಾಮಭಕ್ತಿ , ಕಾರ್ಯಪರತೆಯ ಹಾಸ್ಯ ಬೆರೆತ ನಿರೂಪಣೆ ಗಮನ ಸೆಳೆಯಿತು.

ಕು.ಚೈತನ್ಯ ಒಳ್ಳೆಯ ಕಂಠ ಸಿರಿಯಿಂದ ಶ್ರೀ ರಾಗದ ವರ್ಣದಿಂದ ಪ್ರಾರಂಭಿಸಿ, ಅಪರೂಪದ ಛಾಯಾ ತರಂಗಿಣೆ, ಮುಖ್ಯಪ್ರಸ್ತುತಿಯಾಗಿ ಪಂತುವರಾಳಿ ಉತ್ತಮವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಭಜನೆ, ನಾಮ ಸಂಕೀರ್ತನ, ಪ್ರಸ್ತುತಿಗಳು ಕಛೇರಿಯನ್ನು ಮೆರಗುಗೊಳಿಸಿದವು. ಡಾ.ಬಾಲಮುರಳೀ ಕೃಷ್ಣ ಅವರ ಕದನ ಕುತೂಹಲ ರಾಗದ ತಿಲ್ಲಾನದೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post