ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ಶಿವಮೊಗ್ಗ ರಾಂ |
ನಾವು ಎಲ್ಲಿದ್ದೇವೆ, ಹೇಗಿದ್ದೇವೆ, ಯಾರಿಗಾಗಿ ಯಾವ ಕೆಲಸವನ್ನು ಮಾಡುತ್ತಾ ಇದ್ದೇವೆ, ನಮ್ಮ ಚೌಕಟ್ಟುಗಳು ಏನು, ಕುಟುಂಬಕ್ಕೆ ಸಮಾಜಕ್ಕೆ ಮತ್ತು ನಮ್ಮ ಪರಿಸರಕ್ಕೆ ನಾವು ಏನು ಕೊಡುಗೆ ನೀಡುತ್ತ ಇದ್ದೇವೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅರಿತುಕೊಂಡು ನಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿದಾಗ ಮಾತ್ರ ನಮ್ಮನ್ನು ನಾವು ಗೌರವಿಸಿಕೊಂಡಂತೆ…. ಹೀಗೆ ಹೇಳುತ್ತಾರೆ ಬೆಂಗಳೂರಿನ ಆಯುರ್ವೇದ ತಜ್ಞೆ ಮತ್ತು ಭರತನಾಟ್ಯ ಕ್ಷೇತ್ರದ ಯುವ ಕಲಾವಿದೆ ಸ್ಫೂರ್ತಿ ಐತಾಳ್.
ಬದುಕಿನ ನಿರ್ವಹಣೆಗೆ ಮಾಡುವ ವೃತ್ತಿ ಏನೇ ಇರಬಹುದು, ಆದರೆ ಮನುಷ್ಯನಿಗೆ ಒಂದು ಕಲೆ ಬೇಕೇ ಬೇಕು. ಕಲೆಯನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಹಿರಿಯರನ್ನು ಗೌರವಿಸುವ, ನಮ್ಮ ಸಮ ವಯಸ್ಸಿನವರನ್ನು ಪ್ರೀತಿ- ವಿಶ್ವಾಸದಿಂದ ಕಾಣುವ ಹಾಗೂ ಕಿರಿಯರನ್ನು ಬೆನ್ನು ತಟ್ಟಿ ಬೆಳೆಸುವ ಗುಣ ನಮ್ಮದಾಗಬೇಕು. ಯಾವುದೇ ಕಲೆಯನ್ನು ಮತ್ತು ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಹತ್ತಾರು ಬಾರಿ ಅದನ್ನು ಅಭ್ಯಾಸ ಮಾಡಬೇಕು. ಗುರು ಹೇಳಿದ್ದನ್ನು ಶ್ರದ್ಧೆಯಿಂದ ಕೇಳಿ ಅನುಸರಿಸಬೇಕು. ಆಗ ಮಾತ್ರ ನಾವು ಏನನ್ನಾದರೂ ಕಲಿಯಲು, ಸಾಧನೆ ಮಾಡಲು ಸಾಧ್ಯ ಎಂಬುದು ಸ್ಫೂರ್ತಿ ಅವರ ಅಭಿಮತ.
ಬೇಕರಿ ಉದ್ಯಮಿ ಮಂಜುನಾಥ ಐತಾಳ್ ಮತ್ತು ಶಿಕ್ಷಕಿ ಶಶಿಕಲಾ ಅವರ ಪುತ್ರಿಯಾದ ಸ್ಫೂರ್ತಿ ಐತಾಳ್‌ಅವರು ಈಗಾಗಲೇ ಭರತನಾಟ್ಯದ ಜೂನಿಯರ್, ಸೀನಿಯರ್ ಸೇರಿದಂತೆ ವಿದ್ವತ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ಬೆಂಗಳೂರಿನ ಸಂಯೋಗ – ಕನಕ್ಟಿಂಗ್ ಆರ್ಟ್ಸ್ ಸಂಸ್ಥೆಯ ‘ವಿದುಷಿ ಲತಾ ಲಕ್ಷೀಶ ಅವರನ್ನು ಗುರುವಾಗಿ ಪಡೆದು ಧನ್ಯತೆ ಹೊಂದಿರುವೆ ಎನ್ನುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಆಯುರ್ವೇದ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಸ್ಫೂರ್ತಿ ಐತಾಳ್‌ಗೆ ನೃತ್ಯ ರಂಗದ ಬಗ್ಗೆ ವಿಶೇಷ ಪೂಜ್ಯತೆ ಇರುವುದು ಗಮನಾರ್ಹ ಸಂಗತಿ.

6ನೇ ತರಗತಿಯಿಂದಲೂ ವಿದುಷಿ ಲತಾ ಅವರಲ್ಲಿ ಭರತನಾಟ್ಯವನ್ನು ಕಲಿತು ನಾಡಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾ ಪ್ರದರ್ಶನವನ್ನು ಮಾಡಿರುವ ಈಕೆ ಅದಮ್ಯ ಭರವಸೆ ಮತ್ತು ಉತ್ಸಾಹಗಳಿಂದ ಕಲೆ ಮತ್ತು ವೈದ್ಯಕೀಯ ರಂಗವನ್ನು ಸಮನ್ವಯಗೊಳಿಸಿಕೊಂಡು ಸಾಗುತ್ತಿದ್ದಾರೆ.
ನನ್ನ ತಾಯಿಗೆ ಸಂಗೀತ ಎಂದರೆ ಬಲು ಇಷ್ಟ. ಅವರು ಅನೇಕ ಜನರಿಗೆ ಭಜನೆಯನ್ನು ಕೂಡ ಹೇಳಿಕೊಡುತ್ತಾರೆ. ನನ್ನ ಅಜ್ಜ ಯಕ್ಷಗಾನ ಮಾಡಿಸುತ್ತಾ ಇದ್ದರು. ಅಜ್ಜನ ಮನೆಗೆ ಹೋದಾಗಲೆಲ್ಲ ಯಕ್ಷಗಾನ ನೋಡುವುದು ನನ್ನ ಬಿಡುವಿನ ವೇಳೆ ಹವ್ಯಾಸವಾಗಿತ್ತು . ಆದರೆ ನನ್ನ ಆಸಕ್ತಿ ನೃತ್ಯದ ಕಡೆಗೆ ಮೊದಲಿಂದಲೂ ಇತ್ತು. ಹಾಗಾಗಿ ಭರತನಾಟ್ಯ ರಂಗವನ್ನು ಆಯ್ಕೆ ಮಾಡಿಕೊಂಡೆ ಎಂಬುದು ಸ್ಫೂರ್ತಿ ಅನಿಸಿಕೆ.
ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅಧ್ಯಯನ ಮಾಡುವ ವಿಷಯಗಳೇ ಸಾಕಷ್ಟು ಇದ್ದವು. ಅವುಗಳ ನಡುವೆಯೂ ಮನಕ್ಕೆ ಒಂದಿಷ್ಟು ಹೊಸತನ ಮತ್ತು ಸ್ಫೂರ್ತಿ ಬೇಕು ಎಂಬ ಕಾರಣಕ್ಕಾಗಿ ಭರತನಾಟ್ಯವನ್ನು ಬಿಡಲಿಲ್ಲ.
ಗುರುವಿನ ಕಾರುಣ್ಯ ದೊಡ್ಡದು
ನನಗೆ ಎಷ್ಟೇ ಸಮಯದ ಒತ್ತಡವಿದ್ದರೂ ನನ್ನ ಗುರು ಲತಾ ಲಕ್ಷ್ಮೀಶ ಅವರು ತಮ್ಮ ಅಮೂಲ್ಯವಾದ ಸಮಯವನ್ನು ನನಗೆ ಧಾರೆ ಎರೆದು, ನನ್ನ ಊಟ, ತಿಂಡಿ ಇತ್ಯಾದಿಗಳನ್ನು ತಾವೇ ನಿರ್ವಹಿಸಿಕೊಂಡು ‘ ನೀನು ಎಲ್ಲವನ್ನೂ ಮಾಡುತ್ತೀಯಾ … ಎಂಬ ಭರವಸೆಯನ್ನು ತುಂಬಿ ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ. ಗುರುವಿನ ಕಾರುಣ್ಯ ದೊಡ್ಡದು. ಹಾಗಾಗಿ ನನಗೆ ಸಮಯ ಸಿಕ್ಕಾಗಲೆಲ್ಲವೂ ಕಲೆ ಬಗ್ಗೆ ಆಲೋಚಿಸುತ್ತೇನೆ. ನೃತ್ಯವನ್ನು ಅಭ್ಯಾಸ ಮಾಡುತ್ತೇನೆ ಎನ್ನುತ್ತಾರೆ ಈ ಯುವ ಕಲಾವಿದೆ.
ನಾವು ಹಳೆಯ ತಲೆಮಾರಿನ ಕಲೆ,ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಅದನ್ನು ಕಲಿಯಬೇಕು ಮತ್ತು ಹೊಸ ಪೀಳಿಗೆಗೆ ಕಳಿಸಬೇಕು. ಈ ನಿಟ್ಟಿನಲ್ಲಿ ನಾನು ವೈದ್ಯಳಾಗುವ ಜೊತೆಗೆ ಒಬ್ಬ ನೃತ್ಯ ಶಿಕ್ಷಕಿಯೂ ಆಗ ಬಯಸುತ್ತೇನೆ. ನೂರಾರು ಕಿರಿಯ ಮಕ್ಕಳಿಗೆ ಕಲೆಯನ್ನು ಬೋಧಿಸುವುದು ನನ್ನ ಬದುಕಿನ ಅತ್ಯಂತ ದೊಡ್ಡ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಂಗ ಪ್ರವೇಶ ನನಗೆ ಇನ್ನಷ್ಟು ಹೊಸ ದ್ವಾರಗಳನ್ನು ತೆರೆಯಲಿದೆ ಎಂಬ ಆಶಾವಾದವಿದೆ ಎನ್ನುತ್ತಾರೆ ಸ್ಫೂರ್ತಿ.
ಅಮ್ಮನ ಅಂತರಂಗ
ವೈದ್ಯ ವೃತ್ತಿಗೆ ಬದ್ಧರಾಗಿದ್ದು ಆ ನಿಟ್ಟಿನಲ್ಲಿ ಅನೇಕ ಜೀವಗಳನ್ನು ಉಳಿಸಬೇಕು- ಇದು ಕರ್ತವ್ಯ. ಇನ್ನೊಂದೆಡೆ ಕಲೆಯನ್ನು ಪ್ರೀತಿಸುವ ನಿಟ್ಟಿನಲ್ಲಿ ಹಲವು ಜೀವಿಗಳನ್ನು ಅರಳಿಸಬೇಕು- ಇದು ಗುರುವಿಗೆ ಮತ್ತು ಕಲೆಗೆ ತೋರುವ ಗೌರವ. ಇವೆರಡನ್ನೂ ನನ್ನ ಮಗಳು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಎಂಬ ಸಂತೋಷ ಮತ್ತು ಸಂಭ್ರಮ ನನಗೆ ಇದೆ ಎನ್ನುತ್ತಾರೆ ಸ್ಫೂರ್ತಿ ಅವರ ತಾಯಿ ಶಶಿಕಲಾ.
ದೇವರ ಕೃಪೆ, ಗುರುವಿನ ಅನುಗ್ರಹ ಮತ್ತು ವಿದ್ಯಾರ್ಥಿಯಲ್ಲಿ ಕಲಿಕಾಸಕ್ತಿ – ಇವು ಮೂರು ಒಂದೆಡೆ ಸಮನ್ವಯವಾದರೆ ನಾವು ಸಮಾಜದಲ್ಲಿ ನಮ್ಮ ಗುರುತನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಪುತ್ರಿ ಒಂದಷ್ಟು ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾಳೆ. ಆಕೆಗೆ ನಿರಂತರವಾಗಿ ದೈವ ಕೃಪೆ ಒಲಿದು ಬರಲಿ ಎಂದು ಹಾರೈಸುತ್ತೇನೆ ಎನ್ನುತ್ತಾರೆ ಶಶಿಕಲಾ ಅವರು.
9ರಂದು ಕಾರ್ಯಕ್ರಮ
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ನ. 9 ರಂದು ಸಂಜೆ 5ಕ್ಕೆ ಸಂಯೋಗ – ಕನಕ್ಟಿಂಗ್ ಆರ್ಟ್ಸ್ ಸಂಸ್ಥೆಯು ‘ಶಾಂಭವಿ’ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಯುವ ಕಲಾವಿದೆ ಡಾ. ಸ್ಫೂರ್ತಿ ಐತಾಳ್ ಅವರು ರಂಗಪ್ರವೇಶ ಮಾಡಲಿದ್ದಾರೆ. ಗುರು ವಿದುಷಿ ಲತಾ ಲಕ್ಷ್ಮೀಶ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಕೇಶ್ ಚೌಧರಿ, ಸಿಇಒ ಡಾ. ವರ್ಷಾ ಮತ್ತು ಹಿರಿಯ ವಿದ್ವಾಂಸ ರಮೇಶ್ ಚಡಗ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post