ಶಿಷ್ಯನಲ್ಲಡಗಿರುವ ಶಕ್ತಿಯನ್ನು ತಿಳಿಯಲು ಒಬ್ಬ ಗುರುವಿಗೆ ಮಾತ್ರ ಸಾಧ್ಯ. ಮಾತಾಪಿತೃಗಳಿಗೂ ಮಕ್ಕಳ ಶಕ್ತಿಯನ್ನು ಪೂರ್ಣವಾಗಿ ತಿಳಿಯಲು ಅಸಾಧ್ಯ. ಆದರೆ ಒಬ್ಬ ಗುರುವಿಗೆ ಸಾಧ್ಯ ಎಂಬುದನ್ನು ಈಗಲ್ಲ ಹಿಂದಿನಿಂದಲೇ ಸಾಬೀತು ಪಡಿಸಿದೆ.
ವಿಶ್ವಾಮಿತ್ರರು ಶ್ರೀರಾಮನಿಗೆ ಗುರುವಾಗಿ, ರಾಮನಲ್ಲಡಗಿದ್ದ ಮಹಾಶಕ್ತಿಯನ್ನರಿತು ಖರಧೂಷಣಾದಿ ದಾನವರ ವಧೆಯನ್ನೂ ಮಾಡಿಸಿ, ಗೃಹಸ್ಥಾಶ್ರಮವನ್ನೂ ಕೊಡಿಸಿ, ರಾಮಲಕ್ಷ್ಮಣರು ಮಹಾ ಪ್ರಬುದ್ಧರೆಂದು ಸಾಬೀತು ಮಾಡಿಸಿದರು.
ಜಾಂಭವನು ಹನುಮನೊಳಗಿನ ಶಕ್ತಿಯನ್ನು ತಿಳಿದು, ಹನುಮನನ್ನು ಸಮುದ್ರೋಲ್ಲಂಘನ ಮಾಡಿಸಿದ. ಗುರುದ್ರೋಣಾಚಾರ್ಯರು ವಿರೋಧಿಪಾಳಯದೊಳಗಿದ್ದರೂ, ತನ್ನ ಆಪ್ತ ಶಿಷ್ಯ ಅರ್ಜುನನನ್ನು ಕೆಣಕಿ ಅರ್ಜುನನ ಪರಾಕ್ರಮವನ್ನು ಜಗತ್ತಿಗೆ ತೋರಿಸುತ್ತಾರೆ.
ರಾಮಕೃಷ್ಣರು ಹಾಗೂ ವಿವೇಕಾನಂದರು
ಪರಮ ಪೂಜ್ಯ ರಾಮಕೃಷ್ಣ ಪರಮಹಂಸರು ಶಿಷ್ಯ ನರೇಂದ್ರನ ಶಿರದ(ಬ್ರಹ್ಮರಂದ್ರ) ಮೇಲೆ ತನ್ನ ಪಾದವನ್ನಿಟ್ಟು ಸ್ವಾಮಿ ವಿವೇಕಾನಂದರನ್ನಾಗಿಸಿ ಅಖಂಡ ಬ್ರಹ್ಮಜ್ಞಾನ ನೀಡಿ ಜಗತ್ತೇ ಮರೆಯಲಾರದ ವ್ಯಕ್ತಿಯನ್ನಾಗಿಸಿದರು.
ರಾಜಕಾರಣವೇ ಬೇಡ ಅನ್ನುತ್ತಿದ್ದ ನರೇಂದ್ರ ದಾಮೋದರ ದಾಸನನ್ನು ಮತ್ತೆ ಗುಜರಾತ್ ಮುಖ್ಯಮಂತ್ರಿಯನ್ನಾಗಿಸಿ ಇಡೀ ಭಾರತ ದೇಶದ ಮರೆಯಲಾಗದ ಪ್ರಧಾನ ಮಂತ್ರಿಯಾಗಿಸುವಂತೆ, ವಿಶ್ವಕ್ಕೇ ಮಹಾನಾಯಕನನ್ನಾಗುವಂತ ನರೇಂದ್ರ ಮೋದಿಯನ್ನಾಗಿಸಿದ ಕೀರ್ತಿ ಅಟಲ್ ಜೀಗೆ ಸೇರುತ್ತದೆ. ಹಿಂದೆ ಗುರು ಮುಂದೆ ಗುರಿ ಎನ್ನುವ ಚಿಂತನೆಯು ಈ ಗುರುಗಳಿಗಿದೆ.
ವೃಶ್ಚಿಕ ಲಗ್ನದಲ್ಲಿ ಜನನ
ವೃಶ್ಚಿಕ ಲಗ್ನವಾಗಿ, ವೃಶ್ಚಿಕ ರಾಶಿಯಲ್ಲಿ ಜನಿಸಿ ಪ್ರಧಾನಿಯಾದ ಅಟಲ್ ಜೀ ಪರಮಹಂಸರ ಪುನರಾವತಾರವಾದರೆ, ವೃಶ್ಚಿಕ ಲಗ್ನವಾಗಿ ವೃಶ್ಚಿಕ ರಾಶಿಯಲ್ಲಿ ಜನಿಸಿದ ನರೇಂದ್ರ ದಾಮೋದರ ದಾಸ ಮೋದಿಯವರು ನರೇಂದ್ರ ವಿಶ್ವನಾಥ ಸ್ವಾಮಿ ವಿವೇಕಾನಂದರ ಪುನರಾವತಾರ.
ರಾಮಕೃಷ್ಣ ಪರಮಹಂಸರು ಮಹಾತಪೋನಿಧಿಯಾಗಿ ತನಗಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ಶಿಷ್ಯನನ್ನು ಬೆಳೆಸಿ ಕೃತಾರ್ಥರಾದರು.
ಅಟಲ್ ಬಿಹಾರಿ ವಾಜಪೇಯಿ ಕೂಡಾ ತನ್ನಲ್ಲಿಲ್ಲದ ಅಖಂಡ ಸಾವ್ರಾಜ್ಯ ಯೋಗವನ್ನು ಅಖಂಡ ಸಾವ್ರಾಜ್ಯಯೋಗದ ನರೇಂದ್ರ ಮೋದಿಯವರನ್ನು ಬೆಳೆಸಿ ಕೃತಾರ್ಥರಾದರು.
ಅಂದು-ಇಂದೂ ನರೇಂದ್ರ
ಈ ಇಬ್ಬರು ಗುರುಗಳಿಗೂ ಈ ಅಖಂಡ ಸಾವ್ರಾಜ್ಯ ಯೋಗವೇ ಇರಲಿಲ್ಲ. ಇಬ್ಬರೂ ಗುರುಗಳಿಗೂ ಈ ಯೋಗವು ನವಾಂಶದಲ್ಲಿತ್ತು. ಅದನ್ನೇ ಶಿಷ್ಯರಿಗೆ ಧಾರೆಯೆರೆದರು. ಒಂದುವೇಳೆ ಇದ್ದುದೇ ಆಗಿದ್ದರೆ ಶಿಷ್ಯರು ಗುರುವನ್ನು ಮೀರಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನೇ ದೈವಪ್ರೇರಣೆ ಎನ್ನುವುದು.
ಅತ್ಯಂತ ಪ್ರಭಾವಿ ಗುರುಗಳು ಅತ್ಯಂತ ಶ್ರೀಮಂತ ಕುಟುಂಬದ ಶಿಷ್ಯರನ್ನು ಆರಿಸಬಹುದಿತ್ತು. ಪರಮ ಹಂಸರು ಬಡತನದಲ್ಲಿ ಬೆಳೆದ ನರೇಂದ್ರನನ್ನೂ, ಅಟಲ್ ಜೀ ಚಹಾಮಾರುವ ನರೇಂದ್ರನನ್ನೂ ಆರಿಸಿದ್ದೇ ಗುರುವಿನ ಜ್ಞಾನಕ್ಕೆ ಸರಿಸಮಾನವಾದುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.
ಗುರುವೇ ಸರ್ವಸ್ವ ಎಂದ ಇಬ್ಬರೂ ಜಗತ್ತಿಗೇ ಮಾದರಿಯಾದರು. ವಂಶದ ಸಿರಿತನವೇ ಸರ್ವ ಸಂಪತ್ತು ಎಂದವರು ಧಾರುಣ ಮೃತ್ಯವಿಗೂ, ಅತ್ಯಂತ ಹೆಡ್ಡತನದ ವ್ಯಕ್ತಿತ್ವಕ್ಕೂ ಸಾಕ್ಷಿಯಾದದ್ದು ನಮ್ಮ ಕಣ್ಣಮುಂದೆ ಇದೆ. ಅಂದರೆ ಶ್ರೀಮಂತರಿಗೆ ಧನಬಲವೇ ಗುರುವಾದರೆ, ಬಡವನಿಗೆ ಜ್ಞಾನ ಬಲವೇ ಗುರುವಾಗುತ್ತದೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post