ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಿತಿಮೀರಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆ ರಾತ್ರಿಯಿಂದ 14 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಾದ್ಯಂತ ಎರಡನೆಯ ಹಂತದ ಕೋವಿಡ್19 ವೈರಸ್ ವ್ಯಾಪಕವಾಗಿ ಹರಡುತ್ತಾ, ಸಾಲು ಸಾಲು ನೂರಾರು ಮಂದಿಯನ್ನು ಬಲಿ ಪಡೆಯುತ್ತಿದ್ದು, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನಕ್ಕೆ 20,000 ಸಾವಿರ ಗಡಿ ದಾಟಿರುವ ಹಿನ್ನೆಲೆಯಲ್ಲಿ ತಜ್ಞರ ವರದಿ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
ರಾಜ್ಯದಲ್ಲಿ ಕೋವಿಡ್- ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಮುತ್ತ ಜಾಸ್ತಿಯಾಗುತ್ತಿದೆ. ಸಚಿವ ಸಂಪುಟದ ಸಹೋದ್ಯೋಗಿಗಳು, ತಜ್ಞರೊಂದಿಗೆ ಸಮಾಲೋಚಿಸಿ ಕೆಲವು ನಿರ್ಧಾರಕ್ಕೆ ಬರಲಾಗಿದೆ. ಈಗ ಘೋಷಣೆ ಮಾಡಿರುವ ಲಾಕ್ ಡೌನ್ ಅವಧಿಯಲ್ಲಿ ಕೊರೋನಾ ಹರಡುವಿಕೆ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಮತ್ತೆ ವಿಸ್ತರಣೆ ಮಾಡಲಾಗುವುದು ಎಂದಿದ್ದಾರೆ.
ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯರೆಗೂ ಕರ್ಫ್ಯೂ ಮುಂದುವರೆಯಲಿದೆ. ತಾಲೂಕ್ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳಲಾಗಬೇಕು. ರಾಜ್ಯದಲ್ಲಿ ಆಕ್ಸಿಜನ್ 800 ಮೆಟ್ರಿಕ್ ಟನ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂದರ್ಭದಲ್ಲಿ ಸಾರಿಗೆ ಸಂಚಾರ ಇರುವುದಿಲ್ಲ. ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಗೃಹಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ ನಾರಾಯಣ, ಕೆ. ಗೋಪಾಲಯ್ಯ, ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಸಚಿವ ಸೋಮಣ್ಣ, ಕೆ. ಗೋಪಾಲಯ್ಯ, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಭಾಗವಹಿಸಿದ್ದರು.
ಮುಖ್ಯಾಂಶಗಳು:
- ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶವಿರುತ್ತದೆ
- ನಿಗದಿತ ಅವಧಿಯನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಸಾರ್ವಜನಿಕರು ಹೊರಗಡೆ ಓಡಾಡುವಂತಿಲ್ಲ
- 10 ಗಂಟೆ ನಂತರ ಯಾವುದೇ ರೀತಿಯ ವ್ಯವಹಾರಗಳಿಗೆ ಅವಕಾಶವಿರುವುದಿಲ್ಲ
- ತುರ್ತು ಸೇವೆಗೆ ಮಾತ್ರ ಅವಕಾಶ
- ಕಟ್ಟಡ ನಿರ್ಮಾಣ, ಕೃಷಿ ಕ್ಷೇತ್ರಕ್ಕೆ ವಿನಾಯಿತಿ
- ಸರ್ಕಾರಿ, ಖಾಸಗಿ, ಟ್ಯಾಕ್ಸಿ, ಕ್ಯಾಬ್, ಆಟೋ, ಮೆಟ್ರೋ ಸಂಚಾರ ಇರುವುದಿಲ್ಲ
- ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಶಾಪ್ ಸೇರಿದಂತೆ ತುರ್ತು ಸೇವೆಗಳು ಲಭ್ಯ
- 18ರಿಂದ 45 ವರ್ಷದೊಳಗಿನವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ಸಲಿಕೆ.
- ಕೆಎಸ್’ಆರ್’ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ
- ಹೊಟೇಲ್’ಗಳಲ್ಲಿ ಪಾರ್ಸಲ್’ಗೆ ಮಾತ್ರ ಅವಕಾಶ, ಸರ್ವಿಸ್ ಇರುವುದಿಲ್ಲ
- ಬಾರ್’ಗಳಿಂದ ಮದ್ಯ ಪಾರ್ಸಲ್ ಕೊಂಡೊಯ್ಯಲು ಅವಕಾಶ
- ಅಂತರ್ ರಾಜ್ಯ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ
- ಸರಕು- ಸಾಗಾಣಿಕೆ ವಾಹನಗಳಿಗೆ ಮಾತ್ರ ಈ ಅವಧಿಯಲ್ಲಿ ವಿನಾಯಿತಿ
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















