ಸುರಿಯುತ್ತಿದ್ದ ಸೋನೆ ಮಳೆ, ಬಾನಲ್ಲಿ ಮಳೆಯ ನೀರನ್ನು ಹೊತ್ತು ತೇಲಾಡುತ್ತಿದ್ದ ಮೋಡಗಳು, ಭಾನುವಾರದ ಮುಂಜಾನೆ ಬೆಳಂಬೆಳಗ್ಗೆ ಬೀಳುತ್ತಿದ್ದ ಸಣ್ಣ ಮಳೆಹನಿಗಳ ನಡುವೆಯೇ ನಗರದ ಮಲ್ಲೇಶ್ವರಂನ ಸೇವಾ ಸದನವು ಕುಮಾರಿ ಅನುಷಾ ನಾಗರಾಜ್ ರವರ ರಂಗಪ್ರವೇಶದ ಕಾರ್ಯಕ್ರಮಕ್ಕೆ ಸರ್ವಸಿದ್ಧತೆಗಳನ್ನು ಮಾಡಿಕೊಂಡಿತ್ತು. ಇದು ನೃತ್ಯ ಭಾರತಿ ಅಕಾಡೆಮಿಯ ನಿರ್ದೇಶಕಿ ಗುರು ಶ್ರೀಮತಿ ಪದ್ಮಾ ಹೇಮಂತ್ ರವರ ಸಾರಥ್ಯದಲ್ಲಿ ಪ್ರಸ್ತುತಗೊಂಡ ರಂಗಪ್ರವೇಶ ಎಂಬುದು ಒಂದು ವಿಶೇಷವಾದರೆ ಆ ದಿನದ ಮತ್ತೊಂದು ವಿಶೇಷವೆಂದರೆ ಅದು ಅನುಷ ರವರ ಹುಟ್ಟುಹಬ್ಬವೂ ಆಗಿತ್ತು.
ಇನ್ನು ಮುಂದುವರೆದ ಭಾಗವಾಗಿ ಮೂಡಿ ಬಂದ ಶ್ರೀಯುತ ವೆಂಕಟಸುಬ್ಬಯ್ಯರ್ ರವರ ರಚನೆಯ ನೃತ್ತ ಮತ್ತು ಅಭಿನಯದ ವಿನೂತನ ಮೇಳದಂತಿತ್ತು ಗಣೇಶನ ಸ್ತುತಿ. ತಮ್ಮ ಎರಡನೆಯ ಪ್ರಸ್ತುತಿಯಾಗಿ ಅನುಷಾರವರು ಆರಿಸಿಕೊಂಡಿದ್ದದ್ದು ಶ್ರೀಯುತ ಟಿ. ವಿ. ಗೋಪಾಲಕೃಷ್ಣರವರ ರಚನೆ, ಮೋಹನ ರಾಗ ಮತ್ತು ಮಿಶ್ರ ಛಾಪು ತಾಳದ ಜತಿಸ್ವರ. ಸುಂದರ ಸ್ವರ ಜೋಡಣೆಗೆ ಅಷ್ಟೇ ಸುಂದರವಾಗಿ ಹೆಜ್ಜೆಗಳನ್ನ ಪೋಣಿಸಿದಂತೆ ಸೊಗಸಾಗಿ ಮೂಡಿ ಬಂತು ಜತಿಸ್ವರ. ಮುಂದಿನ ಭಾಗವಾಗಿ ಇಡೀ ರಾಮಾಯಣವನ್ನು ಒಂದು ಶ್ಲೋಕದಲ್ಲಿ ವಿವರಿಸುವಂಥ ಏಕಶ್ಲೋಕಿ ರಾಮಾಯಣವನ್ನು ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಕುಮಾರಿ ಅನುಷಾಳಿಗಾಗಿ ಸಂಯೋಜಿಸಿದ್ದರು. ಇದನ್ನು ರಾಗಮಾಲಿಕೆ ಮತ್ತು ಆದಿ ತಾಳಕ್ಕೆ ಸಂಯೋಜಿಸಲಾಗಿತ್ತು.
ಒಂದು ರಂಗಪ್ರವೇಶದ ಕಾರ್ಯಕ್ರಮದ ಹೃದಯಭಾಗವೆಂದೇ ಹೆಸರಾದ ಪದವರ್ಣದ ಆಯ್ಕೆ ಇಲ್ಲಿ ಬಹಳ ಸಮಂಜಸವಾಗಿತ್ತು. ಶ್ರೀ ಮಧುರೈ ಮುರಳೀಧರನ್ ರವರ ಸಿಂಹೇಂದ್ರ ಮಧ್ಯಮ ರಾಗ ಮತ್ತು ಆದಿತಾಳದ, ‘ಮಾಯೆ ಮನಂ ಕನಿಂದರುಳ ….’ಎಂಬ ದೇವಿಯ ಕುರಿತಾದ ಒಂದು ಸುಂದರ ಪ್ರಸ್ತುತಿಯನ್ನು ಅಷ್ಟೇ ಸುಂದರವಾಗಿ ಕುಮಾರಿ ಅನುಷಾಳಿಗೆ ಹಸ್ತಾಂತರಿಸಿದ್ದರು ಗುರು ಶ್ರೀಮತಿ ಪದ್ಮ. ತನ್ನ ಖಚಿತವಾದ ನಡಿಗೆಗಳಿಂದ, ಸ್ಪಷ್ಟವಾದ ಕೈ ಚಲನೆಗಳಿಂದ ಸಾಹಿತ್ಯ ಮತ್ತು ಸಂಚಾರಿಯಲ್ಲಿನ ಭಾವಕ್ಕೆ ಚುತಿ ಬಾರದಂತೆ ತಮ್ಮ ಸೊಗಸಾದ ಭಾವ ಭಂಗಿಗಳು, ನೃತ್ತ ಮತ್ತು ಅಭಿನಯಗಳಿಂದ ನೆರೆದಿದ್ದ ರಸಿಕರನ್ನು ಮೆಚ್ಚಿಸಿದರು ಅನುಷಾ.
ಸಭಾ ಕಾರ್ಯಕ್ರಮದಲ್ಲಿ ಲಲಿತ ಶ್ರೀ ಅಕಾಡೆಮಿಯ ಸಂಸ್ಥಾಪಕಿ, ನೃತ್ಯ ಗುರು ಶ್ರೀಮತಿ ಸುಮಾ ಕೃಷ್ಣಮೂರ್ತಿಯವರು ಮಾತನಾಡಿ ತುಂಬು ಮನಸ್ಸಿನಿಂದ ಅನುಷಾಳ ನೃತ್ಯವನ್ನು, ಅವಳ ನೃತ್ಯದ ಹಿಂದಿನ ಶಕ್ತಿಯಾಗಿದ್ದ ಗುರುಗಳನ್ನು ಅಪಾರವಾಗಿ ಶ್ಲಾಘಿಸಿ ಮಾತನಾಡಿದರು. ಮುಂದೆ ಮಾತನಾಡಿದ ಶಿಕ್ಷಣತಜ್ಞ ವೈ. ಸಿ. ದೊಡ್ಡಯ್ಯನವರು ಕಲಾವಿದೆಯನ್ನು ಬಹುವಾಗಿ ಮೆಚ್ಚಿಕೊಂಡರು.

ವಂದನಾರ್ಪಣೆಯನ್ನು ಸಲ್ಲಿಸಿದ ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಮಾತನಾಡುತ್ತಾ, ‘ದಿಟ್ಟ ಗುರಿ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಇದ್ದಾಗಲಷ್ಟೆ ಯಾವುದೇ ರಂಗದಲ್ಲಿ ಯಶಸ್ಸು ಸಾಧ್ಯ’ ಎಂದು ನುಡಿದರು. ಕಾರ್ಯಕ್ರಮದ ಕೊನೆಯ ಭಾಗವಾಗಿ ವಿದುಷಿ ದ್ವಾರಕಿ ಕೃಷ್ಣ ಸ್ವಾಮಿಯವರು ರಚಿಸಿದ್ದ ವಲಚಿ ರಾಗದ ತಿಲ್ಲಾನವನ್ನು ಆರಿಸಿಕೊಂಡಿದ್ದರು. ಗುರು ಶ್ರೀಮತಿ ಪದ್ಮಾ ಹೇಮಂತ್ ಹಾಗೂ ಮೃದಂಗ ವಿದ್ವಾನ್ ಶ್ರೀ ವಿನೋದ್ ಶಾಮ ಆನೂರ್ ರವರ ಜುಗಲ್ಬಂದಿಯಂತಿದ್ದ ಗೆತ್ತಿನ ಭಾಗದಲ್ಲಿ ತಾಳದ ಮೇಲಿನ ತಮ್ಮ ಹಿಡಿತವನ್ನು ಬಹಳ ಪ್ರಬುದ್ಧತೆಯಿಂದ ಮೆರೆದರು ಅನುಷ. ಸರಳವಾದ ಮಂಗಳದೊಂದಿಗೆ ತಮ್ಮ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು ಕುಮಾರಿ ಅನುಷಾ. ತುಂಬಿದ ಸಭೆಯ ನಿರಂತರ ಕರತಾಡನವೇ ಅವರ ನೃತ್ಯ ಪ್ರದರ್ಶನದ ಶ್ರೇಷ್ಠತೆಯನ್ನು ಬಿಂಬಿಸುತ್ತಿತ್ತು.
ಶ್ರೀ ಸುಗ್ಗನಹಳ್ಳಿ ಷಡಕ್ಷರಿಯವರ ಅದ್ಭುತ ನಿರೂಪಣೆ ಒಂದೆಡೆಯಾದರೆ ಗಂಧರ್ವ ಕಲಾವಿದರ ಸಮೂಹವೇ ಸಭೆಯ ಬಲ ಭಾಗದಲ್ಲಿ ಸೇರಿತ್ತು . ನಟುವಾಂಗದಲ್ಲಿ ಗುರು ಶ್ರೀಮತಿ ಪದ್ಮಾ ಹೇಮಂತ್ ರವರು ಮತ್ತು ಅವರ ಜೊತೆಯಲ್ಲಿ ಅವರ ಪುತ್ರಿ ಶೀತಲ್ ಹೇಮಂತ್, ಶ್ರೀ ವಿನೋದ್ ಶ್ಯಾಮ್ ಆನೂರ್, ಕೊಳಲಿನಲ್ಲಿ ಶ್ರೀ ವೇಣು ಗೋಪಾಲ್ ಹೆಮ್ಮಿಗೆ, ವೈಲಿನ್ ನಲ್ಲಿ ಶ್ರೀ ಹೇಮಂತ್ ಕುಮಾರ್, ರಿದಮ್ ಪಾಡ್ಸ್ ನಲ್ಲಿ ಶ್ರೀ ಪ್ರಣವ್ ದತ್ತ ಬಹಳ ಸಮರ್ಥವಾಗಿ ಕಲಾವಿದೆಗೆ ಸಹಕರಿಸುತ್ತಾ ಕಾರ್ಯಕ್ರಮದ ಗುಣಮಟ್ಟವನ್ನು ಶ್ರೇಷ್ಠತೆಯ ಕಡೆಗೆ ಕೊಂಡೊಯ್ದರು. ಒಟ್ಟಾರೆಯಾಗಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ವೀಕ್ಷಿಸಿ ಭಾನುವಾರದ ಬೆಳಗನ್ನು ಸೂಕ್ತ ರೀತಿಯಲ್ಲಿ ಕಳೆದೆವೆಂಬ ಭಾವ ಅಲ್ಲಿದ್ದ ರಸಿಕರ ಮುಖಗಳಲ್ಲಿ ಬಿಂಬಿತವಾಗಿತ್ತು.










Discussion about this post