ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶರನ್ನವರಾತ್ರಿ ಅಂಗವಾಗಿ ಬೆಂಗಳೂರಿನ ಗಾಂಧಿ ಬಜಾರಿನ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿರುವ ಶ್ರೀ ಸೋಸಲೆ #Sosale ವ್ಯಾಸರಾಜರ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿರುವ ಸಂಗೀತೋತ್ಸವದಲ್ಲಿ ಅ. 6ರ ಸಂಜೆ 6ಕ್ಕೆ ಮೈಸೂರಿನ #Mysore ಯುವ ಪ್ರತಿಭೆ ಎ.ಆರ್. ಅಪ್ರಮೇಯ ಅವರ ಗಾಯನ ಆಯೋಜನೆಗೊಂಡಿದೆ.
ಈ ಸಂದರ್ಭದಲ್ಲಿ ಅವರು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಪಕ್ಕವಾದ್ಯದಲ್ಲಿ ಎಚ್.ಎನ್. ರಘುನಂದನ (ವಯೋಲಿನ್) ಮತ್ತು ಕುಮಾರಿ ಜ್ಯೋತ್ಸ್ನಾ ಹೆಬ್ಬಾರ್ (ಮೃದಂಗ) ಸಹಕಾರ ನೀಡಲಿದ್ದಾರೆ.
ಯುವ-ನವ ಕಲಾವಿದರ ಪರಿಚಯ
ನಾಡಿನ ಮಹತ್ವದ ಗಾಯಕರಲ್ಲಿ ಅಗ್ರಪಂಕ್ತಿಯಲ್ಲಿರುವ ಶಿವಮೊಗ್ಗದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರ ವಿದ್ಯಾರ್ಥಿ ಅಪ್ರಮೇಯ.
ಹಾಡುಗಾರಿಕೆಯನ್ನು ಅನನ್ಯ ಭಾವದಿಂದ ಸ್ವೀಕರಿಸಿದ ಯುವಕ. ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದಲ್ಲಿ ಶಾಸ್ತ್ರೀಯ ಸಂಗೀತ ಸೀನಿಯರ್ ಹಂತದ ಕಲಿಕೆಯಲ್ಲಿ ಇದ್ದಾರೆ. ಶೃಂಗೇರಿ #Sringeri ಎಚ್.ಎಸ್. ನಾಗರಾಜ್‌ರ ಗರಡಿಯಲ್ಲಿ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ರಜನಿ ರಾಮಧ್ಯಾನಿ ಅವರ ಮಾರ್ಗದರ್ಶನವೂ ಇವರಿಗೆ ಪ್ರಾಪ್ತವಾಗಿದೆ.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ಗಾಯನ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳು ದೊರೆಕಿವೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಕೇಂದ್ರೀಯ ವಿದ್ಯಾಲಯ ಸಂಘಟನ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ‘ಕಲಾ ಉತ್ಸವ್’ ಸ್ಪರ್ಧೆಯಲ್ಲಿ ಎರಡು ಬಾರಿ ದಕ್ಷಿಣ ಭಾರತವನ್ನು (ಕರ್ನಾಟಕ ಶಾಸ್ತ್ರೀಯ ಸಂಗೀತ) #CarnaticMusic ಗಾಯನದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಇದೆ.
ಶಿವಮೊಗ್ಗ ಮೂಲದ, ಸದ್ಯ ಮೈಸೂರಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ರಘುರಾಮ-ವಾರುಣಿ ಅವರ ಪುತ್ರ. ದಾಸರ ಕೀರ್ತನೆಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈತ ಸೋಸಲೆ ಮಠಾಧೀಶರಾದ ಶ್ರೀವಿದ್ಯಾಶ್ರೀಶ ತೀರ್ಥರ ಕೃಪೆಗೆ ಪಾತ್ರನಾಗಿ, ಶರನ್ನವರಾತ್ರಿ ಸರಣಿ ಸಂಗೀತೋತ್ಸವದಲ್ಲಿ ಹಾಡುತ್ತಿರುವುದು ಧನ್ಯತೆಯ ಪ್ರತೀಕವಾಗಿದೆ.
Also read: ಆರ್‌ಸಿಬಿ ರಚನೆ ಹಿನ್ನೆಲೆ ಅ.7ರಂದು ಪೂರ್ವಭಾವಿ ಸಭೆ: ರಾಷ್ಟ್ರಭಕ್ತ ಬಳಗ ಸಂಚಾಲಕ ಈಶ್ವರಪ್ಪ
ಜ್ಯೋತ್ಸ್ನಾ ಹೆಬ್ಬಾರ್
ಚೇತನ್ ರಾಘವೇಂದ್ರ ಮತ್ತು ಜ್ಯೋತಿ ಚೇತನ್ ಅವರ ಪುತ್ರಿ. ಬಿ ಇ (ಆರ್ಕಿಟೆಕ್ಚರ್) ಪದವಿ ಪೂರ್ಣಗೊಳಿಸಿದ್ದು, ಸದ್ಯ ಕಲಾ ಚಟುವಟಿಕೆಗಳಿಗೆ ಪೂರ್ಣಾವಧಿ ಸಮಯ ನೀಡುತ್ತಿದ್ದಾರೆ. ಕಲಾವಿದರ ಕುಟುಂಬದಲ್ಲೇ ಜನಿಸಿದ್ದರಿಂದ ಬಾಲ್ಯದಿಂದಲೇ ವೀಣೆ ಮತ್ತು ಮೃದಂಗದತ್ತ ಆಕರ್ಷಣೆ. ತಾಯಿ ಮತ್ತು ಕಲಾವಿದೆ ಜ್ಯೋತಿ ಚೇತನ್ ಅವರಲ್ಲೇ ವೀಣೆ ಅಭ್ಯಾಸ ಮಾಡಿ ಸೀನಿಯರ್ ಹಂತದ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ನಾಡಿನ ಹಿರಿಯ, ಪ್ರಖ್ಯಾತ ವಿದ್ವಾಂಸ ಎಚ್.ಎಸ್. ಸುಧೀಂದ್ರ ಅವರಲ್ಲಿ ಮೃದಂಗ ಪಾಠ ಕಲಿಯುತ್ತಿದ್ದಾರೆ. ಸಿಸಿಆರ್‌ಟಿ ಸ್ಕಾಲರ್‌ಶಿಪ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಶಿಷ್ಯವೇತನಕ್ಕೆ ಈಕೆ ಭಾಜನರಾಗಿರುವುದು ವಿಶೇಷ. ಬೆಂಗಳೂರಿನ ಗಾಯನ ಸಮಾಜ, ಮದ್ರಾಸ್ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಘ-ಸಂಸ್ಥೆಗಳು ಆಯೋಜಿಸಿದ್ದ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಪಡೆದ ಉದಯೋನ್ಮುಖ ಕಲಾ ಸಾಧಕಿ ಆಗಿದ್ದಾರೆ.
ಲಕ್ಷಾಂತರ ರೂಪಾಯಿ ವೇತನ ದೊರಕಿಸಿಕೊಡಬಲ್ಲ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ, ವೃತ್ತಿ ನಿರ್ವಹಣೆಗೆ ಅನೇಕ ಅವಕಾಶಗಳು ಇದ್ದರೂ ಈಕೆ ತನ್ನ ಕಲಾ ಪ್ರವೃತ್ತಿಗೆ ಮನ್ನಣೆ ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಮೃದಂಗ ಮತ್ತು ವೀಣಾ ವಾದನಕ್ಕೆ ಜ್ಯೋತ್ಸ್ನಾನೀಡಿರುವ ಮಹತ್ವ ಮತ್ತು ಮಾನ್ಯತೆ ದೊಡ್ಡದು. ಭಾರತೀಯ ಸನಾತನ ಸಂಗೀತ ಕಲಾ ಪರಂಪರೆಗೆ ಇಂಥವರೇ ಭರವಸೆಯ ಬೆಳಕಾಗಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ.
ಅವರಿಗೆ ದೊರೆತಿರುವ ಖ್ಯಾತ ಗುರು ವಿದ್ವಾನ್ ಸುಧೀಂದ್ರ ಅವರ ಕನಸು ಮತ್ತು ಕಲ್ಪನೆಗಳನ್ನು ಸಾಕಾರಗೊಳಿಸುವತ್ತ ಜ್ಯೋತ್ಸ್ನಾ ಮುನ್ನುಗ್ಗುತ್ತಿರುವುದು ‘ವಾದನ’ ಲೋಕಕ್ಕೆ ನಾಳೆ ಮಹೋನ್ನತ ಕೊಡುಗೆಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಎಂಬುದೇ ಸಂಭ್ರಮದ ಸಂಗತಿಯಾಗಿದೆ.
ಎಚ್.ಎನ್. ರಘುನಂದನ
ಗುರು ಎಚ್.ಕೆ. ಸುಬ್ಬರಾವ್ ಮತ್ತು ವಿದ್ವಾನ್ ಹೊಸಹಳ್ಳಿ ವಿ. ರಘುರಾಮ್ ಅವರ ಶಿಷ್ಯ ಎಚ್.ಎನ್. ರಘುನಂದನ ಅವರು ವಯೋಲಿನ್ ಕ್ಷೇತ್ರದ ಭರವಸೆಯ ಯುವತಾರೆ. 12 ವರ್ಷದಿಂದ ಕಲಿಕೆಯಲ್ಲಿ ಪಳಗಿದ ಇವರು ಕಳೆದ ಒಂದೂವರೆ ವರ್ಷದಿಂದ ಕಛೇರಿಗಳಿಗೆ ಒಗ್ಗಿಕೊಂಡು ಸಾಧನೆಯ ಹಾದಿಯಲ್ಲಿದ್ದಾರೆ. ಗಾನಕಲಾ ಪರಿಷತ್, ಗಾಯನ ಸಮಾಜ ಸೇರಿದಂತೆ ಶಿವಮೊಗ್ಗ, ಬೆಂಗಳೂರು ಮತ್ತು ಹಾಸನದ ವಿವಿಧ ವೇದಿಕೆಗಳಲ್ಲಿ ಇವರ ಕಲಾಭಿವ್ಯಕ್ತಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈತ ಬೆಂಗಳೂರಿನ ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ (ಸಿಎಸ್ ಆ್ಯಂಡ್ ಡಿಸೈನ್) ವಿದ್ಯಾರ್ಥಿ.
ಸಂಸ್ಕೃತ ಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗ ಜಿಲ್ಲೆ ಹೊಸಹಳ್ಳಿ ಮೂಲದ ಎಚ್.ಎಸ್. ರಾಮಮೂರ್ತಿ ಅವರ ಮೊಮ್ಮಗ, ಕರ್ನಾಟಕ ಬ್ಯಾಂಕ್ ಮೇನೇಜರ್ ನಿಧಿ ಭಾರದ್ವಾಜ್ ಮತ್ತು ಎಚ್.ಆರ್. ನಳಿನಿ ಅವರ ಪುತ್ರ ರಘುನಂದನ ಅವರು ವಯೋಲಿನ್ ನುಡಿಸಾಣಿಕೆಯಲ್ಲಿ ತನ್ಮಯತೆ, ಸಂಭ್ರಮ ಕಾಣುತ್ತಿರುವುದು ಕಲಾರಂಗದ ಹೊಸ ಕನಸುಗಳನ್ನು ನನಸಾಗಿಸುತ್ತಿದೆ.
ತ್ರಿವೇಣಿ ಕಲಾ ಸಂಗಮವಾಗಲಿ
ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ವಿಶ್ವಖ್ಯಾತಿಯ ಗುರುಗಳನ್ನು ಅನುಸರಿಸಿ, ಕಲೆಗೆ ಬದ್ಧರಾಗಿ, ಗಾಯನ ಮತ್ತು ವಾದನಗಳನ್ನು ಭಕ್ತಿಭರಿತ ಪೂಜೆಯಾಗಿ ಸ್ವೀಕರಿಸಿರುವ ಈ ಮೂವರು ಯುವ ತಾರೆಗಳು ಸೋಸಲೆ ಶ್ರೀ ವ್ಯಾಸರಾಜರ ಮಹಾಸಂಸ್ಥಾನದ ವೇದಿಕೆಯಲ್ಲಿ ಕಲಾ ಪ್ರೌಢಿಮೆ ಪ್ರಸ್ತುತ ಪಡಿಸುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿದೆ. ಶರನ್ನವರಾತ್ರಿ ಸಂಗೀತೋತ್ಸವದ ಶುಭ ಸಂದರ್ಭದಲ್ಲಿ ಈ ಮೂವರ ಅಭಿವ್ಯಕ್ತಿ ತ್ರಿವೇಣಿ ಸಂಗಮದಂತಾಗಲಿ. ಎಂದು ಆಶಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post