ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡಿನ ಜತೆ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡಿರುವುದರಿಂದಲೇ ರಾಜ್ಯಕ್ಕೆ ಕಾವೇರಿ ವಿಷಯದಲ್ಲಿ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ HDKumaraswamy ಗಂಭೀರ ಆರೋಪ ಮಾಡಿದ್ದಾರೆ.
ಕಾವೇರಿ ನೀರು ಹರಿಸುವ ಬಗ್ಗೆ ಸುಪ್ರೀಂ ಕೋರ್ಟ್ Supreme Court ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮಾಧ್ಯಮ ಹೇಳಿಕೆ ನೀಡಿರುವ ಅವರು; ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ. ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ. ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ರಾಜ್ಯ ಸರಕಾರ. ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರಕಾರಕ್ಕೆ ಇರಲೇ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಸರಕಾರ ಹಾಗೆ ಮಾಡಲೇ ಇಲ್ಲ. ಸುಪ್ರೀಂಕೋರ್ಟ್ ಕಡೆ ಮುಖ ಮಾಡದೆ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಪ್ರಾಧಿಕಾರದ ಆದೇಶವನ್ನೇ ನೆಪ ಮಾಡಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿತು. ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಎಳೆದುಬಿಟ್ಟಿತು ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಸರಕಾರ ಎಸಗಿದ ತಪ್ಪು ಇಷ್ಟೇ ಅಲ್ಲ, ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಬಹಳ ಲಘುವಾಗಿ ಪರಿಗಣಿಸಿತು. ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಕೊಟ್ಟ ಸಲಹೆಗಳನ್ನೂ ಗಾಳಿಗೆ ತೂರಿತು. ನಮ್ಮ ಸಲಹೆಗೆ ಕವಡೆಕಾಸಿನ ಕಿಮ್ಮತ್ತೂ ಕೊಡದೆ ಕನ್ನಡಿಗರ ಹಿತವನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಲಿ ಮಾಡಿತು ಎಂದಿದ್ದಾರೆ ಅವರು.
ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ:
ಕಾವೇರಿ ವಿಷಯ ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂದು ನಾನು ಹೇಳಿದ್ದೆ. ಈಗ ತಮಿಳುನಾಡಿಗೆ ಅನುಕೂಲವಾಗಿದೆ. ನಮಗೆ ಅನ್ಯಾಯವಾಗಿದೆ. ಈ ತಿಕ್ಕಾಟ ಸಾಗುತ್ತಿರುವ ದಿಕ್ಕು ನೋಡಿದರೆ ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ. ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು Devegowda ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು. ಮಾನ್ಯ ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ, ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿದ್ದರು! ಅವರ ಮೌನ ನನಗೆ ಅಚ್ಚರಿ ಉಂಟು ಮಾಡಿದೆ. ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೌದು. ಆದರೆ, ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು? ಎಂದು ಮಾಜಿ ಮುಖ್ಯಮಂತ್ರಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಮರು ಪರಿಶೀಲನಾ ಅರ್ಜಿ ಸಲ್ಲಿಸಿ:
ಸೆ. 13ರಿಂದ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ. ಅದನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಕೋರ್ಟ್ ಆದೇಶಕ್ಕೂ ಮೊದಲು ಪ್ರಾಧಿಕಾರ ಹೇಳಿತು ಎಂದು ವಿದ್ಯುತ್ ವೇಗದಲ್ಲಿ ನೀರು ಬಿಟ್ಟ ಸರಕಾರವು; ಈಗ ಸುಪ್ರೀಂಕೋರ್ಟ್ ಹೇಳಿದೆ, ಇನ್ನೇನು ಮಾಡುವುದು ಎಂದು ಕೈ ಚೆಲ್ಲಿದೆ. ಮರು ಪರಿಶೀಲನಾ ಅರ್ಜಿಯನ್ನು ಕೋರ್ಟಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

Also read: ಅರಣ್ಯ ವರ್ಕಿಂಗ್ ಪ್ಲಾನ್ ತಯಾರಿ ಮಾನದಂಡದಲ್ಲಿ ಬದಲಾವಣೆ ಅಗತ್ಯ: ಅನಂತ ಹೆಗಡೆ ಅಶೀಸರ
ಸರಕಾರ ವಕೀಲರು ಹೇಳಿದರಂತೆ ಕೇಳಿ ಜನರ ಹಿತ ಕಡೆಗಣಿಸಿದೆ. ಯಾವ ಕಾರಣಕ್ಕೂ ನೀರು ಬಿಡಬಾರದಿತ್ತು. ಕೋರ್ಟ್ ಆದೇಶಕ್ಕೆ ಕಾದು ಕ್ರಮ ಜರುಗಿಸಬೇಕಿತ್ತು. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ವರ್ತಿಸಿದೆ ಸರಕಾರ. ವಕೀಲರ ಮಾತುಗಳನ್ನು ಕೇಳಿಕೊಂಡು ನೀರು ಬಿಡುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ. ಹಾಗಾದರೆ ಸರಕಾರ ಅನ್ನೊದು ಯಾಕೆ? ವಿಷಯ ಎಲ್ಲಿ ಶುರುವಾಯಿತೋ ಮತ್ತೆ ಅಲ್ಲಿಗೆ ಬಂದು ನಿಂತಿರುವುದಕ್ಕೆ ಯಾರು ಹೊಣೆ? ಎಂದು ಅವರು ಕೇಳಿದ್ದಾರೆ.

ಪ್ರಾಧಿಕಾರದ ಆದೇಶ ಬಂದೊಡನೆ ಮಧ್ಯರಾತ್ರಿಯೇ ಸುಪ್ರೀಂ ಕೋರ್ಟ್ ಗೆ ಹೋಗಿ, ನಮ್ಮ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ರಾತ್ರೋರಾತ್ರಿ ಪಿಟಿಷನ್ ಹಾಕಬೇಕಿತ್ತು. ಅದನ್ನು ಮಾಡದೇ ನೀರು ಬಿಡುತ್ತಾ ಕೂತಿತು ಸರಕಾರ. ನೀರು ಇಲ್ಲ ಎನ್ನುತ್ತಿದ್ದವರೂ ಈವರೆಗೆ ಹೇಗೆ ಬಿಟ್ಟಿರಿ ಎಂದು ಕೋರ್ಟ್ ಪ್ರಶ್ನೆ ಮಾಡುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೆಆರ್ ಎಸ್ ನಲ್ಲಿ ಈಗ ಇರುವುದೇ 20 ಟಿಎಂಸಿಗೂ ಕಡಿಮೆ ನೀರು. 3 ದಿನಕ್ಕೆ ಒಂದು ಟಿಎಂಸಿ ಹರಿದು ಹೋಗುತ್ತದೆ. ದಿನಕ್ಕೆ 5,000 ಕ್ಯೂಸೆಕ್ ಹರಿದರೆ 15 ದಿನಕ್ಕೆ 7 ಟಿಎಂಸಿ ಖಾಲಿ! ಆಗ ಉಳಿಯುವುದು 13 ಟಿಎಂಸಿ!! ಇದರಲ್ಲಿ ಡೆಡ್ ಸ್ಟೋರೇಜ್ 7 ಟಿಎಂಸಿ ಇರಬೇಕು. ಇನ್ನು ಉಳಿಯೋದು ಎಷ್ಟು? ಬೆಂಗಳೂರಿಗೆ ಇನ್ನೂ 9 ತಿಂಗಳಿಗೆ ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ಬೇಕು. ಎಲ್ಲಿಂದ ಬರುತ್ತೆ ಆ ನೀರು? ರೈತರ ಬೆಳೆಗಳ ಕಥೆ ಏನು? ಆದೇಶ ಪಾಲಿಸಲು ಕರ್ನಾಟಕ, ಅನುಭವಿಸಲು ತಮಿಳುನಾಡು ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆಲ್ಲ ಸರಕಾರವೇ ನೇರ ಕಾರಣ ಎಂದು ದೂರಿದ್ದಾರೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post