ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಜಾಬ್ ಪ್ರಕರಣದಲ್ಲಿ ವಿದ್ಯಾರ್ಥಿನಿಯರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ತ್ರಿಸದಸ್ಯ ಪೀಠ ವಾದ-ಪ್ರತಿವಾದವನ್ನು ಆಲಿಸಿ ಮತ್ತೆ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.
ಉಡುಪಿ ಆರು ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವ ಕುರಿತಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಇಂದು ಮತ್ತೆ ಆರಂಭಿಸಿದ್ದು, ವಾದ-ಪ್ರತಿವಾದಗಳನ್ನು ಆಲಿಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.ಆರಂಭದಲ್ಲಿ ಅರ್ಜಿದಾರರ ಪರ ವಕೀಲರು ಮತ್ತಷ್ಟು ಅರ್ಜಿ ಸಲ್ಲಿಸಲು ಮುಂದಾದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾಯಪೀಠ, ಕೌಂಟರ್’ನಲ್ಲಿ ಅರ್ಜಿ ಸಲ್ಲಿಸಿ. ಇಲ್ಲ ಬೇಡ ಎಂದರು.
ಅನಂತರ ವಾದ ಮಂಡಿಸುತ್ತಿರುವ ಅರ್ಜಿದಾರರ ಪರ ವಕೀಲ ದೇವದತ್ ಕಾಮತ್, ರಾಜ್ಯ ಸರ್ಕಾರ ಹೊರಡಿಸಿರುವ ಸಮವಸ್ತ್ರ ಕಡ್ಡಾಯದ ಫೆ.5ರ ಆದೇಶ ಸಂವಿಧಾನ ಹಾಗೂ ಸುಪ್ರಿಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಸರ್ಕಾರದ ಆದೇಶ ವಿವೇಚನಾ ರಹಿತವಾಗಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಉಲ್ಲೇಖಿಸಿದ್ದಾರೆ.ನಿಗದಿತ ಸಮವಸ್ತ್ರದಲ್ಲಿ ಬದಲಾವಣೆ ಕಾಲೇಜು ಅಥವಾ ಶಾಲಾ ಆಡಳಿತ ಮಂಡಳಿಯ ಅಧಿಕಾರವಾಗಿದೆ. ಹೀಗಾಗಿ, ಸರ್ಕಾರದ ಆದೇಶ ವಿವೇಚನಾ ರಹಿತವಾಗಿದೆ. ಅಲ್ಲದೇ, ವಿದ್ಯಾರ್ಥಿನಿಯವರು ಹಿಜಾಬ್ ಧರಿಸಬೇಕೋ, ಬೇಡವೋ ಎಂಬುದನ್ನು ಯಾರೋ ಶಾಸಕರು ನೇತೃತ್ವ ವಹಿಸಿರುವ ಆಡಳಿತ ಮಂಡಳಿ ನಿರ್ಧರಿಸುವುದೂ ಸಹ ಕಾನೂನು ಬಾಹಿರವಾಗಿದೆ ಎಂದು ವಾದ ಮಂಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯ ವಿಷಯದಲ್ಲಷ್ಟೇ ಧಾರ್ಮಿಕ ಹಕ್ಕಿಗೆ ತಡೆ ಹಾಗೂ ಧಾರ್ಮಿಕ ಆಚರಣೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ತಡೆಯಬಹುದು. ಆದರೆ, ಇಂತಹ ಪ್ರಕರಣದಲ್ಲಿ ಅಲ್ಲ ಎಂದು ಕಾಮತ್ ವಾದ ಮಂಡಿಸಿದ್ದಾರೆ.ಇತ್ತೀಚೆಗೆ ಸಿನಿಮಾ ಸಂಬಂಧಿಸಿದ ಒಂದು ಪ್ರಕರಣ ಬಂದಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ದೃಶ್ಯಗಳು ಆ ಚಿತ್ರದಲ್ಲಿತ್ತು. ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಅರ್ಜಿದಾರರು ಮನವಿ ಮಾಡಿದ್ದರು. ದೃಶ್ಯಕ್ಕೆ ಕತ್ತರಿ ಹಾಕಿದರೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗುತ್ತದೆ ಎಂದು ಕೋರ್ಟ್ ಹೇಳಿತ್ತು ಎಂದು ಕಾಮತ್ ವಾದ ಮಂಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಆ ವಿಚಾರ ಬಿಡಿ. ಈಗ ಹಿಜಾಬ್ ವಿಚಾರಕ್ಕೆ ಬನ್ನಿ ಎಂದು ಸೂಚಿಸಿದರು.
ನೀಟ್ ಪರೀಕ್ಷೆಗೆ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದಳು. ಆಎರೆ, ವೈದ್ಯಕೀಯ ಮಂಡಳಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ, ಆಕೆ ಇದನ್ನು ಪ್ರಶ್ನಿಸಿ, ಧಾರ್ಮಿಕ ಹಕ್ಕು ಕೋರಿ ಆಕೆ ನ್ಯಾಯಾಲಯದ ಮೆಟ್ಟಿಲು ಏರಿದ್ದಳು. ನ್ಯಾಯಾಲಯ ಆಕೆಯ ಮನವಿಯನ್ನು ಎತ್ತಿ ಹಿಡಿದಿತ್ತು ಎಂದು ಉಲ್ಲೇಖಿಸಿದ್ದಾರೆ.
ಈ ವೇಳೆ ಮಾತನಾಡಿದ ನ್ಯಾಯಪೀಠ, ಧಾರ್ಮಿಕ ಹಕ್ಕು ಪ್ರಶ್ನಾತೀತವೇ? ಸರ್ಕಾರ ಇವುಗಳ ವಿಚಾರದಲ್ಲಿ ಮಧ್ಯ ಪ್ರವೇಶಿಸಬಹುದಾ ಎಂದು ಪ್ರಶ್ನಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post