ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಹೆಣ್ಣಿನ ವಿಷಯದಲ್ಲಿ ನಾನೂ ಸೇರಿದಂತೆ ಯಾರೂ ಸತ್ಯಹರಿಶ್ಚಂದ್ರರಲ್ಲ. ಆದರೆ ನೀವು ಮಾಡಿಕೊಂಡಿರುವ ರಾಡಿಗೆ ಎಲ್ಲರನ್ನೂ ಎಳೆಯುವ ಬದಲು, ಜನ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಸಚಿವ ಸುಧಾಕರ್ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಕೆಂಡ ಕಾರಿದ್ದಾರೆ.
ಅನೈತಿಕ ಸಂಬಂಧಗಳ ಹಿನ್ನೆಲೆಯಲ್ಲಿ ಎಲ್ಲ ಶಾಸಕರ ಬಗ್ಗೆ ತನಿಖೆಯಾಗಲಿ ಎಂದು ಸುಧಾಕರ್ ಹೇಳಿದ್ದಾರೆ. ನನ್ನ ಹೆಸರನ್ನೂ ಎಳೆದುಕೊಂಡು ಬಂದಿದ್ದಾರೆ. ಈ ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗಳಿಗೂ ಈ ವಿಷಯದಲ್ಲಿ ತಮ್ಮದೇ ಆಯ್ಕೆಗಳಿವೆ. ಇದು ಸಹಜ ಎಂದು ಅವರು ಹೇಳಿದರು.
ಇದರ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಸಿಡಿ ಪ್ರಕರಣದ ಬಗ್ಗೆಯೂ ನಾನು ಹೆಚ್ಚು ಚರ್ಚೆಗೆ ಹೋಗುತ್ತಿಲ್ಲ. ಹೆಣ್ಣಿನ ವಿಷಯದಲ್ಲಿ ಸತ್ಯ ಹರಿಶ್ಚಂದ್ರರು ಯಾರೂ ಇಲ್ಲ. ನಾನೂ ಜೀವನದಲ್ಲಿ ಒಂದು ಬಾರಿ ಎಡವಿದ್ದೇನೆ. ಹಾಗಂತ ಅ ಕುರಿತು ಮಾತನಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಇವತ್ತು ಸತ್ಯ ಹರಿಶ್ಚಂದ್ರರ ಬಗ್ಗೆ ಮಾತನಾಡುವುದಕ್ಕಿಂತ ಈ ನಾಡಿನ ಜನ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದರು.
ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ಲೂಟಿ ಮಾಡುತ್ತಿದೆ. ಜನ ಜೀವನ ಮಾಡುವುದು ಕಷ್ಟವಾಗುತ್ತಿದೆ. ಆ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಸತ್ಯ ಹರಿಶ್ಚಂದ್ರರನ್ನು ಹುಡುಕುತ್ತಾ ಕೂರುವುದು ಅರ್ಥಹೀನ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















