ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡು ಬಿಎಂಟಿಸಿ ಬಸ್ ಹೊತ್ತಿ ಉರಿದಿದ್ದು, ಇದರಲ್ಲಿ ಸಿಲುಕಿದ ಕಂಡಕ್ಟರ್ ಸಜೀವ ದಹನಗೊಂಡಿರುವ ದುರ್ಘಟನೆ ಇಂದು ಮುಂಜಾನೆ ನಡೆದಿದೆ.
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬಸ್’ನಲ್ಲೇ ಮಲಗಿದ್ದ ಕಂಡಕ್ಟರ್ ಸುಟ್ಟು ಕರಕಲಾಗಿದ್ದಾರೆ. ಅದೃಷ್ಟವಶಾತ್ ಬಸ್ ಚಾಲಕ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
45 ವರ್ಷದ ಮುತ್ತಯ್ಯಸ್ವಾಮಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಬಸ್’ನಲ್ಲಿ ಮುತ್ತಯ್ಯಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಲಿಂಗದೀರನಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್’ನಲ್ಲೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಚಾಲಕ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಿರ್ವಾಹಕ ಮುತ್ತಯ್ಯ ಸ್ವಾಮಿ ಮೂಲತಃ ಗದಗ ಜಿಲ್ಲೆಯ ಹಾಲೂರಿನವರು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಿಎಂಟಿಸಿ ದುರಂತ ಘಟನೆಗೆ ತೀವ್ರ ಸಂತಾಪವನ್ನು ಸೂಚಿಸಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಿರ್ವಾಹಕರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post