ಶಿವಮೊಗ್ಗ: ಬೆಂಗಳೂರು ಗಾಯನ ಸಮಾಜ ಆಯೋಜಿಸಿದ್ದ 50ನೇ ವರ್ಷದ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಮತ್ತು ಗುರುಗುಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಶೃಂಗೇರಿ ಎಚ್.ಎಸ್. ನಾಗರಾಜ್ ಅವರಿಗೆ ಶ್ರೀ ಕಲಾ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾನ್ ನಾಗರಾಜ್ ಅವರು, ಕರ್ನಾಟಕ ಶಾಸೀಯ ಸಂಗೀತ ಎನ್ನುವುದು ಮೊದಲು ಉಪಾಸನಾ ವಿದ್ಯೆಯಾಗಬೇಕು. ಆನಂತರ ಅದು ಕಲೆಯಾಗಿ ಗುರುತಿಸಿಕೊಳ್ಳಲಿ ಎಂದು ಹೇಳಿದರು.
ಹೆಣ್ಣುಮಗು ಹುಟ್ಟಿದೆ ಎಂದರೆ ಅದು ಕೇವಲ ಮದುವೆಗೆ ಮಾತ್ರ ಅರ್ಹ ಎಂಬ ಮನೋಸ್ಥಿತಿಯಂತೆಯೇ ಶಾಸೀಯ ಸಂಗೀತ ಕಲಿಯುವುದು ಎಂದರೆ ಅದು ಕೇವಲ ಕಛೇರಿಗಳನ್ನು ನೀಡಲು ಮಾತ್ರ ಎಂಬ ಮನೋಸ್ಥಿತಿ ತೊಲಗಬೇಕು. ವೇದಿಕೆಯ ಭರಾಟೆಯಲ್ಲಿರುವ ಉದಯೋನ್ಮುಖ ಕಲಾವಿದರು ಮತ್ತು ಅವರ ಗುರುಗಳು ಇದನ್ನು ಗಮನಿಸಬೇಕು ಎಂದರು.
ಭಾರತೀಯ ಮೂಲದ ಕಲೆಗಳು ಸ್ವಾತಂತ್ರೋತ್ತರದಲ್ಲಿ ವ್ಯಾಪಾರೀಕರಣವಾಗಿವೆ ಎಂದು ವಿಷಾದಿಸಿದ ನಾಗರಾಜ್, ಕಲೆಯನ್ನು ನಂಬಿದ ಕಲಾವಿದ ಒಬ್ಬ ಡಾಕ್ಟರ್ ಮತ್ತು ಇಂಜಿನಿಯರ್ ರೀತಿ ಸ್ವಾವಲಂಬಿಯಾಗಿ ಬದುಕಲು ಅನುವಾಗಬೇಕು ಎಂದರು.
ಸಂಗೀತ ಸಮ್ಮೇಳನದ ಅಧ್ಯಕ್ಷೆ ವಿದುಷಿ ಸುಕನ್ಯಾ ಪ್ರಭಾಕರ್, ವಿದ್ವಾನ್ ಆರ್.ಕೆ. ಪದ್ಮನಾಭ, ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯರಾಜ್, ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ.ಪ್ರಸಾದ್, ಕಾರ್ಯದರ್ಶಿ ಅಚ್ಚುತರಾವ್ ಪದಕಿ ಅವರು ನಾಗರಾಜರಿಗೆ ವಿದ್ವತ್ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ನಾಡಿನ ಹಿರಿಯ ಸಂಗೀತ ತಜ್ಞರು ಮತ್ತು ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಬೆಂಗಳೂರಿನ 10 ಶಾಖೆಗಳ ವಿದುಷಿಯರು, ವಿದ್ಯಾರ್ಥಿಗಳು ಹಾಜರಿದ್ದರು.
Discussion about this post