ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಬಿಬಿಎಂಪಿ ಕಟ್ಟಡದ ಹಿಂಭಾಗದಲ್ಲಿ ಇರುವ ಮೊದಲನೇ ಮಹಡಿಯಲ್ಲಿ ಇರುವ ಶೌಚಾಲಯ ಬಳಕೆಗೆ ಯಾರಾದರೂ ತೆರಳಿದರೆ ಮೂತ್ರ ವಿಸರ್ಜನೆಯಿರಲಿ, ಹೋದವರಿಗೆ ಸೋಂಕು ತಗುಲುವುದು ನಿಶ್ಚಿತ.
ಹೌದು… ಇಂತಹ ದುಸ್ಥಿತಿ ಇರುವುದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಜಯನಗರ 2ನೆಯ ಬ್ಲಾಕ್, 9ನೆಯ ಮೇನ್, 9ನೆಯ ಕ್ರಾಸ್’ನಲ್ಲಿ.
ಇಲ್ಲಿನ ಶೌಚಾಲಯದ ಕಾಮಾಡುಗಳನ್ನು ವೈಟ್ ಸಿಮೆಂಟ್’ನಿಂದ ತಾತ್ಕಾಲಿಕವಾಗಿ ಪ್ಲಾಸ್ಟರ್ ಮಾಡಲಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬೋಲ್ಟ್ ಮತ್ತು ನೆಟ್ ಹಾಕಿ ಗೋಡೆಯ ಒಳಭಾಗದಲ್ಲಿ ಜೋಡಿಸಲಾಗಿಲ್ಲ. ಮೇಲ್ಭಾಗದಲ್ಲಿ ಇರುವ ನೀರಿನ ಸಂಪರ್ಕ ಕಲ್ಪಿಸುವ ಪೈಪ್’ನಿಂದ ಕಾಮಾಡಿನ ಒಳಗೆ ನೀರು ಸರಿಯಾಗಿ ಬರುವುದಿಲ್ಲ . ಅಲ್ಲಿ ಬರುವ ಗಬ್ಬು ವಾಸನೆ ಮೂಗಿಗೆ ಬಡಿಯುವ ಜೊತೆ ಜೊತೆಗೆ ಮೂತ್ರ ವಿಸರ್ಜನೆ ಮಾಡುವಾಗ ಕೈ ಕಾಲಿನ ಮೇಲೆ ಕಾಮಾಡು ಯಾವಾಗ ಬೇಕಾದರೂ ಬೀಳಬಹುದು ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ಒಂದನೆಯ ಮಹಡಿಯಲ್ಲಿ ಇರುವ ಹೆಸರು ಹೇಳಲು ಇಚ್ಛಿಸದ ಬಾಡಿಗೆದಾರರು.
ಈ ಶೌಚಾಲಯದ ನಿರ್ವಹಣೆಯ ಜವಾಬ್ದಾರಿ ಬಿಬಿಎಂಪಿಗೇ ಸೇರಿದೆ. ಆದರೆ, ಸ್ವಚ್ಛತೆ ಮರೀಚಿಕೆ ಆಗಿದ್ದು ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಸೊಂಕು ತಗಲುವುದು ಖಚಿತ. ಅಲ್ಲದೇ, ಇಲ್ಲಿನ ಎಲ್ಲ ಭಾಗದ ಗೋಡೆ ಹಾಗೂ ಕೆಳಭಾಗದಲ್ಲಿ ಗುಟ್ಕಾ ತಿಂದು ಉಗಿದಿರುವ ಕಲೆ ಹಾಗೂ ಬೀಡಿ-ಸಿಗರೇಟು ತುಂಡುಗಳು ಇಲ್ಲಿನ ಅಸ್ವಚ್ಛತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಇದರೊಂದಿಗೆ ಮಲ ವಿಸರ್ಜನೆ ಮಾಡುವ ಕಮೋಡ್ ಸಹ ದುಸ್ಥಿತಿಗೆ ತಲುಪಿದ್ದು, ಹೊಲಸು ತುಂಬಿ ಹೇಸಿಗೆ ಹುಟ್ಟುತ್ತಿದೆ. ಮಲ ವಿಸರ್ಜನೆ ಮಾಡಲೂ ಸಹ ಇಲ್ಲಿ ಅಸಹ್ಯ ಮೂಡುತ್ತದೆ.
Also read: ಆ.11ರಂದು ಶಿವಮೊಗ್ಗಕ್ಕೆ ಮೊದಲ ವಿಮಾನ: ಹಾರಾಟದ ಸಮಯವೇನು? ಫಸ್ಟ್ ಯಾರು ಬರಲಿದ್ದಾರೆ?
ಇನ್ನು, ಯಾವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಅನಾಹುತದಿಂದ ತಪ್ಪಿಸಿಕೊಳ್ಳಲು ಇಲ್ಲೊಂದು ಬಾಗಿಲಿದೆ. ಆದರೆ, ಇದನ್ನೂ ಸಹ ಇಲ್ಲಿ ಮುಚ್ಚಿರುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ.
ದೇಶದಾದ್ಯಂತ ಕೇಂದ್ರ ಸರ್ಕಾರ ಸ್ವಚ್ಛ ಭಾರತದ ಅಭಿಯಾನ ನಡೆಸುತ್ತಿದೆ. ಆದರೆ, ಬಹುತೇಕ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಇದೇ ಆಗಿದೆ. ಸದ್ಯ, ದುಸ್ಥಿತಿಯಲ್ಲಿರುವ ಶೌಚಾಲಯವನ್ನು ಸರಿಪಡಿಸಿ, ಸಾರ್ವಜನಿಕರ ಉತ್ತಮ ಉಪಯೋಗಕ್ಕೆ ಅನುವುಮಾಡಿಕೊಡುವರೇ ಕಾದು ನೋಡಬೇಕಿದೆ.
ಚಿತ್ರ-ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post