ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಂಗಾಂಗಗಳ ದಾನದಲ್ಲಿ ಅಮೆರಿಕ ಹಾಗೂ ಚೀನಾ ದೇಶಗಳ ಬಳಿಕ, ಭಾರತ ಮೂರನೇ ಸ್ಥಾನದಲ್ಲಿದೆ. 2012-13 ನೇ ಸಾಲಿಗೆ ಹೋಲಿಸಿದರೆ, ಅಂಗಾಂಗ ದಾನದ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ವಾರ್ಷಿಕ ಅಂಗಾಂಗ ದಾನಗಳ ಸಂಖ್ಯೆ 2013 ರಲ್ಲಿ 4,990 ಆಗಿದ್ದು, 2019 ರಲ್ಲಿ 12,746 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ಅಂಗಾಂಗ ದಾನದ ಪ್ರಮಾಣದಲ್ಲಿ ನಾಲ್ಕು ಪಟ್ಟು ಏರಿಕೆ ಕಂಡಿದ್ದರೂ, ಅಂಗಾಂಗಗಳ ಬೇಡಿಕೆಯನ್ನು ಪೂರೈಸಲು ಇನ್ನಷ್ಟು ಹಾದಿಯನ್ನು ಸವೆಸಬೇಕಾಗಿದೆ. ದೇಶದಲ್ಲಿ ಕೇವಲ ಶೇ. 3ರಷ್ಟು ಜನರು ಮಾತ್ರ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ 10 ಲಕ್ಷ ಜನರಲ್ಲಿ, 0.65 ಮಂದಿ ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ಸ್ಪೇನ್ ನಲ್ಲಿ ಈ ಪ್ರಮಾಣ 35 ಹಾಗೂ ಅಮೆರಿಕದಲ್ಲಿ 26 ರಷ್ಟಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಅಂಗಾಂಗ ದಾನದ ಪ್ರಮಾಣ ಇಳಿಕೆಯಾಗಿದೆ. ಆದರೂ ಸಾಂಕ್ರಾಮಿಕಕ್ಕಿಂತ ಹಿಂದೆಯೂ ಅಂಗಾಂಗ ದಾನ ಹೆಚ್ಚಿನ ಪ್ರಮಾಣದಲ್ಲೇನೂ ನಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಏಮ್ಸ್ ನ 2019 ರ ಅಂಕಿ ಅಂಶದ ಪ್ರಕಾರ, ವಾರ್ಷಿಕವಾಗಿ 1.5 ರಿಂದ 2 ಲಕ್ಷ ಜನರಿಗೆ ಮೂತ್ರಪಿಂಡ ಕಸಿಯ ಅಗತ್ಯವಿದೆ. ಆದರೆ ಈ ಪೈಕಿ 8,000 ಜನರು ಅಂದರೆ ಶೇ.4ರಷ್ಟು ರಷ್ಟು ಮಂದಿ ಮಾತ್ರ ಮೂತ್ರಪಿಂಡ ಪಡೆಯುತ್ತಿದ್ದಾರೆ. ಇದೇ ರೀತಿ ಪ್ರತಿ ವರ್ಷ 80,000 ರೋಗಿಗಳಿಗೆ ಯಕೃತ್ತು (ಲಿವರ್) ಕಸಿ ಅಗತ್ಯವಿದ್ದು, 1,800 ಮಂದಿ ಮಾತ್ರ ಕಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ವಾರ್ಷಿಕ ಸುಮಾರು 1 ಲಕ್ಷ ರೋಗಿಗಳಿಗೆ ಕಾರ್ನಿಯಾ ಅಥವಾ ಕಣ್ಣು ಸಂಬಂಧಿತ ಕಸಿ ಅಗತ್ಯವಿದ್ದು, ಅರ್ಧಕ್ಕಿಂತಲೂ ಕಡಿಮೆ ಮಂದಿಗೆ ಇದು ಲಭ್ಯವಾಗುತ್ತಿದೆ. ಹೃದಯ ಕಸಿ ಅಗತ್ಯವಿರುವ 10,000 ರೋಗಿಗಳಲ್ಲಿ 200 ಮಂದಿಗೆ ಮಾತ್ರ ಸರಿಯಾದ ಹೊಂದಾಣಿಕೆಯಾಗಿ ದಾನ ದೊರೆಯುತ್ತಿದೆ.
ಜನರಲ್ಲಿ ಜಾಗೃತಿಯ ಕೊರತೆಯಿಂದಾಗಿ ಅಂಗಾಂಗ ದಾನ ಕಡಿಮೆಯಾಗಿದೆ. ಅಂಗಾಂಗ ದಾನ ಹೆಚ್ಚಿಸಲು ಇಡೀ ಸಮಾಜ, ಜಾಗೃತ ನಾಗರಿಕರು, ವೈದ್ಯರು ಹಾಗೂ ಮಾಧ್ಯಮಗಳು ತಮ್ಮ ಪಾತ್ರ ವಹಿಸಬೇಕಿದೆ. ಈ ಮೂಲಕ ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಬೇಕಿದೆ.
ಬೆವರು ಸುರಿಸಿ ಸಂಪಾದಿಸಿದ ಆಸ್ತಿ, ಹಣವನ್ನು ಚಾರಿಟಿಗೆ ದಾನ ಮಾಡುವ ವ್ಯಕ್ತಿಗಳನ್ನು ಗೌರವಿಸುವ ರೀತಿಯಲ್ಲಿ ಅಂಗಾಂಗ ದಾನಿಗಳನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಅಂಗಾಂಗ ದಾನವನ್ನು ವೈದ್ಯಕೀಯ ಪ್ರಕ್ರಿಯೆಯಂತೆ ನೋಡುವ ಬದಲು, ಅಂಗಾಂಗ ಪಡೆಯುವವರಿಗೆ ದಾನಿಯು ಜೀವದ ಕೊಡುಗೆಯನ್ನು ನೀಡುವ ಮಹತ್ಕಾರ್ಯವಾಗಿ ಪರಿಗಣಿಸಬೇಕಿದೆ.
ಕೋಲಾರ ಜಿಲ್ಲೆಯ 26 ವರ್ಷ ವಯಸ್ಸಿನ ಚೈತ್ರ ಅವರ ಅಂಗಾಂಗಗಳನ್ನು ದಾನ ಮಾಡಿರುವುದು ಬಹಳ ಸ್ಪೂರ್ತಿ ನೀಡುವ ಘಟನೆಯಾಗಿದ್ದು, ಇದು ಇಡೀ ಸಮಾಜಕ್ಕೆ ಉತ್ತಮ ನಿದರ್ಶನ. ಆಕೆಯು ವೈವಾಹಿಕ ಜೀವನದ ಸಂಭ್ರಮದ ಹೊಸ ಹೆಜ್ಜೆಯನ್ನು ಇರಿಸುವ ವೇಳೆಯಲ್ಲೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿರುವುದು ವಿಧಿಯ ಅನ್ಯಾಯ ಹಾಗೂ ಕ್ರೂರತನ. ಇಂತಹ ಹೃದಯವಿದ್ರಾವಕ ಘಟನೆ ನಡೆದು ಕುಟುಂಬದವರು ಸಹಿಸಲಾರದ ಅಪಾರ ನೋವಿನಲ್ಲಿದ್ದರೂ, ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿರುವುದಕ್ಕೆ ಅವರಿಗೆ ಧನ್ಯವಾದ ಸಮರ್ಪಿಸುತ್ತೇನೆ. ಮರಣದ ನಂತರ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುವ ಅಂಗಾಂಗ ದಾನವನ್ನು ಮಾಡಲು ಎಲ್ಲರೂ ಪ್ರತಿಜ್ಞೆ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೋರುತ್ತೇನೆ.
ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಜೀವಸಾರ್ಥಕತೆ’ ತಂಡವು ಅಂಗಾಂಗ ದಾನಕ್ಕೆ ಉತ್ತೇಜನ ಮತ್ತು ದಾನದ ಪ್ರಕ್ರಿಯೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಇದಕ್ಕಾಗಿ ಇಡೀ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post