ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯುವತಿಯನ್ನು ಅಪಹರಣ ಮಾಡಿ ಪರಾರಿಯಾಗುವ ವೇಳೆ ಅಪಹರಣಕಾರರು ಎದುರಿಗೆ ಸಿಕ್ಕ ಜಡ್ಜ್ ಹಾಗೂ ಪೊಲೀಸರ ಕಾರು ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು, 100ಕ್ಕೂ ಹೆಚ್ಚು ಬೈಕ್‌ಗಳಿಗೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೆ.ಪಿ ಅಗ್ರಹಾರ ದಾಸರಹಳ್ಳಿಯ ಮನೆಯಲ್ಲಿದ್ದ ಯುವತಿಯನ್ನು ಅಪಹರಣ ಮಾಡಿ ಪರಾರಿಯಾಗುವ ವೇಳೆ ಅಪಹರಣಕಾರರ ಕಾರನ್ನು ಸ್ಥಳೀಯರು ಚೇಸ್ ಮಾಡಿದ್ದಾರೆ. ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಡ್ಡದಿಡ್ಡಿ ಕಾರು ಚಾಲನೆ ಮಾಡಿ 35ಕ್ಕೂ ಹೆಚ್ಚು ಕಾರು, 100ಕ್ಕೂ ಹೆಚ್ಚು ಬೈಕ್‌ಗಳಿಗೆ ಡಿಕ್ಕಿ ಹೊಡೆಸಿದ್ದಾರೆ. 
ಸುಮಾರು 9 ಕಿಮೀ ಚೇಸ್ ಮಾಡಿ ಸಾರ್ವಜನಿಕರು ವಿಜಯನಗರ ಹೊಸಹಳ್ಳಿ 4ನೇ ಅಡ್ಡರಸ್ತೆಯಲ್ಲಿ ದುಷ್ಕರ್ಮಿಗಳ ಕಾರನ್ನು ಅಡ್ಡಗಟ್ಟಿ ಕಿಡ್ನಾಪರ್ಸ್ ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಜಖಂಗೊಳಿಸಿದ್ದಾರೆ. ಕಾರಿನಲ್ಲಿದ್ದ ಮೂವರನ್ನ ಥಳಿಸಿ ವಿಜಯ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
Also read>> ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಮೋಸ ನಡೆಯದಿರಲಿ: ಗಜೇಂದ್ರಸ್ವಾಮಿ
ರಾಜಸ್ಥಾನದಿಂದ ಬಂದ ಗ್ಯಾಂಗ್ ಹುಚ್ಚಾಟಕ್ಕೆ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೃಥ್ವಿರಾಜ್ (12), ಯಶಿಕಾ (9) ಅಮುಲ್ (35), ವರ್ಷ, ಮಣಿ (64) ಜಯಲಕ್ಷ್ಮೀ (57) ಗಾಯಗೊಂಡವರು. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದಂತೆ 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸಾರ್ವಜನಿಕರಿಂದ ಹಿಗ್ಗಾಮುಗ್ಗ ಥಳಿತಕ್ಕೆ ಒಳಗಾಗಿರುವ ಆರೋಪಿಗಳಾದ ರಾಕೇಶ್ (31) ಕರಣ್ (35) , ಆಯನ್ (18) ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಆರೋಪಿ ಸದ್ದಾಂ ಪರಾರಿ ಆಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಯುವತಿಯ ಸೋದರತ್ತೆಯೇ ಕಿಡ್ನ್ಯಾಪ್ ಮಾಡಿಕೊಂಡು ಬರಲು ಸುಪಾರಿ ಕೊಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ರಾಜಸ್ಥಾನದ ಪೂಜಾ ತಾನು ಪ್ರೀತಿಸಿದ್ದ ಯುವಕನನ್ನು ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಕಳೆದ 9 ತಿಂಗಳಿಂದ ಕೆ.ಪಿ.ಅಗ್ರಹಾರ ದಾಸರಹಳ್ಳಿಯಲ್ಲಿ ಈ ಜೋಡಿ ವಾಸವಾಗಿತ್ತು. ಮದುವೆಯಾದ ನಂತರ ಸೋದರತ್ತೆಯ ಜೊತೆ ಪೂಜಾ ಸಂಪರ್ಕದಲ್ಲಿದ್ದಳು. ಇತ್ತೀಚೆಗೆ ಯುವತಿಯ ಬಳಿ ಆಕೆಯ ಅತ್ತೆ ವಿಳಾಸ ಪಡೆದಿದ್ದಳು ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







