ಭದ್ರಾವತಿ: ಇಲ್ಲಿನ ಸೌತ್ ಇಂಡಿಯನ್ ಬ್ಯಾಂಕ್’ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದರೂ, ಗ್ರಾಹಕರ ಹಣ, ಒಡವೆಯಿರುವ ಲಾಕರ್’ಗಳು ಹಾಗೂ ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿವೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಬ್ರಾಂಚ್ ಮ್ಯಾನೇಜರ್ ಆಲ್ವಿನ್ ಲೋಬೋ ಅವರು, ಸ್ಟ್ರಾಂಗ್ ರೂಂ ಸುರಕ್ಷಿತವಾಗಿದೆ. ಬ್ಯಾಂಕ್’ನ ದಾಖಲೆಗಳು, ಗ್ರಾಹಕರ ಹಣ, ಒಡವೆಯಿರುವ ಲಾಕರ್’ಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಅವಘಡದ ಹಿನ್ನೆಲೆಯಲ್ಲಿ ನಮ್ಮ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದರು.
ಸದ್ಯ ಮೇಲ್ನೋಟಕ್ಕೆ ಸುಮಾರು 20 ರಿಂದ 30 ಲಕ್ಷ ರೂ.ಗಳಷ್ಟು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದ್ದು, ವಿಮಾ ವಿಭಾಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವಷ್ಟೇ ನಿಖರವಾಗಿ ನಷ್ಟದ ಮೊತ್ತ ತಿಳಿಯಲಿದೆ. ಘಟನೆಯಲ್ಲಿ ಆರು ಕಂಪ್ಯೂಟರ್, ಪೀಠೋಕರಣ ಸೇರಿದಂತೆ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದಿದ್ದಾರೆ.
ಮುಂದಿನ ವ್ಯವಹಾರ ಹೇಗೆ?
ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಶಿವಮೊಗ್ಗ ಬ್ರಾಂಚ್’ನಲ್ಲಿ ವ್ಯವಹಾರ ನಡೆಸಲು ತತಕ್ಷಣದ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ, ಆಗಿರುವ ಹಾನಿಯನ್ನು ಸರಿಪಡಿಸಿ, ಮರುಸ್ಥಾಪಿಸಿ, ಶಾಖೆಯಲ್ಲಿ ವ್ಯವಹಾರವನ್ನು ಮುಂದುವರೆಸಲಾಗುವುದು. ಅಲ್ಲಿಯವರೆಗೂ ಗ್ರಾಹಕರು ಆತಂಕಕ್ಕೆ ಒಳಗಾಗದೇ, ಸಹಕಾರ ನೀಡಬೇಕಾಗಿ ಮ್ಯಾನೇಜರ್ ಕೋರಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಘಟನೆಯ ಪ್ರತ್ಯಕ್ಷದರ್ಶಿ ಬ್ಯಾಂಕ್’ನಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಛಾಯಮ್ಮ ಅವರು ಹೇಳಿಕೆ ನೀಡಿದ್ದು, ಇಂದು ಮುಂಜಾನೆ 8.30ಕ್ಕೆ ಎಂದಿನಂತೆ ಬ್ಯಾಂಕ್ ತೆರೆದಾಗ ಯಾವುದೇ ತೊಂದರೆಯಿರಲಿಲ್ಲ. ಆದರೆ, ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲಿ ಬೆಂಕಿ ದೊಡ್ಡದಾಯಿತು. ತತಕ್ಷಣ ಅಕ್ಕಪಕ್ಕದವರ ಸಹಾಯ ಪಡೆದು ಅಗ್ನಿಶಾಮಕ ದಳಕ್ಕೆ ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದಿದ್ದಾರೆ.
Discussion about this post