ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನ ಶಾಂತಿಸಾಗರ ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪನವರ ವಿರುದ್ಧ ದಾಖಲಾಗಿರುವ ದೂರಿನ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕಿನ ಅಂತರಗಂಗೆಯ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅವರು ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ(ಮಾವಿನಕಟ್ಟೆ) ವಲಯ ಅರಣ್ಯಾಧಿಕಾರಿ ಮಾವಿನಹೊಳಿಯಪ್ಪ ಅವರ ವಿರುದ್ಧ ಅರಣ್ಯ ಭೂಮಿ ಒತ್ತುವರಿ, ಅಕ್ರಮವಾಗಿ ಕೆಮ್ಮಣ್ಣು ಸಾಗಾಣಿಕೆ ಸೇರಿದಂತೆ ಒಟ್ಟು ೭ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಆದರೆ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ದೂರಿನ ತನಿಖೆಯನ್ನು ಸರಿಯಾಗಿ ಕೈಗೊಳ್ಳದೆ ಕೇವಲ ಒಂದೆರಡು ಸಣ್ಣಪುಟ್ಟ ಪ್ರಕರಣ ದಾಖಲಿಸಿಕೊಂಡು ನಿರ್ಲಕ್ಷ್ಯತನ ವಹಿಸಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಶಿವಕುಮಾರ್ ಅವರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದಾರೆಂದು ಆರೋಪಿಸಿ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಬೆಳವಣಿಗೆಯಿಂದಾಗಿ ಇದೀಗ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post