ನಿಯಮ ಪ್ರಕಾರ ಆ ಮೈದಾನದಲ್ಲಿ ಸರ್ಕಸ್ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಮೈದಾನ ಸಾಕಷ್ಟು ವಿಶಾಲವಾಗಿರಲಿಲ್ಲ. ಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿತ್ತು. ಸುರಕ್ಷತೆಗೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಇಂಥ ಅಪಾಯಕಾರಿ ಸ್ಥಳದಲ್ಲಿ, ಸಾವಿರಾರು ಜನ ಸೇರುವ ಸರ್ಕಸ್‌ನಂಥ ಕಾರ್ಯಕ್ರಮಕ್ಕೆ ಪರ್ಮಿಶನ್ ನೀಡಿದ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳ ಕರ್ತವ್ಯಲೋಪ ಸ್ಪಷ್ಟವಾಗಿತ್ತು.
ಅಧಿಕಾರಿಗಳ ಲಂಚಕೋರತನದಿಂದಾಗಿ ಅಮಾಯಕ ಜನ ಬೆಂಕಿಯಲ್ಲಿ ಬೆಂದು ಹೋಗಬೇಕಾಯಿತು. ಹೈಟೆಕ್ಷನ್ ತಂತಿಯಿಂದಾಗಿ ಬೆಂಕಿ ಹರಡಿತು ಎಂದು ಕೆಲವರು ವಾದಿಸಿದರು. ಸರ್ಕಸ್ ಶೋನ ಕೊನೆಯಲ್ಲಿ ದೇವರಿಗೆ ಆರತಿ ಮಾಡುವಾಗ ಡೇರೆಗೆ ಬೆಂಕಿ ತಗುಲಿತು ಎಂದು ಶಂಕೆ ವ್ಯಕ್ತಪಡಿಸಲಾಯಿತು. ಡೇರೆಯ ಒಳಗೆ ಯಾರೋ ಸಿಗರೇಟ್ ಸೇದಿ ಎಸೆದಿದ್ದೇ ಈ ಅನಾಹುತಕ್ಕೆ ಮೂಲ ಎಂಬ ವಾದವೂ ಕೇಳಿ ಬಂತು. ಈ ದುರ್ಘಟನೆ ಕುರಿತು ಸಮಗ್ರ ತನಿಖೆಗೆ ಸರಕಾರ ಆದೇಶಿಸಿತು. ಆದರೆ ಬೆಂಕಿ ಬೀಳಲು ಮೂಲ ಏನು ಎನ್ನುವುದು ಕೊನೆಗೂ ನಿಗೂಢವಾಗಿಯೇ ಉಳಿಯಿತು. ಈ ಘಟನೆಯಲ್ಲಿ ತಪ್ಪಿತಸ್ಥರಾದ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ. ಯಾವ ಅಧಿಕಾರಿಯೂ ಕೆಲಸ ಕಳೆದುಕೊಳ್ಳಲಿಲ್ಲ!
ಈ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಆದೇ ವರ್ಷ (1981) ಇದಕ್ಕಿಂತ ಭೀಕರವಾದ ಮತ್ತೊಂದು ದುರಂತ ನಡೆದು ಹೋಯಿತು. ಅದು ಕಳ್ಳಬಟ್ಟಿ ದುರಂತ. ಅಕ್ರಮ ಸರಾಯಿ ಕುಡಿದು ಸುಮಾರು 300 ಜನ ನೊಣಗಳಂತೆ ಹೀನಾಯವಾಗಿ ಸತ್ತುಹೋದರು. ಬೆಂಗಳೂರಿನ ಲಿಂಗರಾಜಪುರ, ಸಗಾಯ್‌ಪುರ, ಮುನಿರೆಡ್ಡಿಪಾಳ್ಯ, ಟ್ಯಾನರಿ ರಸ್ತೆಯ ಸುತ್ತಮುತ್ತಲಿನ ಕೊಳಗೇರಿ ಪ್ರದೇಶಗಳ ಮನೆಮನೆಗಳಲ್ಲಿ ಅಂದು ಸೂತಕದ ಛಾಯೆ ಆವರಿಸಿತ್ತು. ಲಾರಿಗಳಲ್ಲಿ ಹೆಣಗಳನ್ನು ಮರಳಿನಂತೆ ತುಂಬಿ, ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಚಿಂದಿಯ ಮೂಟೆಗಳಂತೆ ಇಳಿಸಲಾಯಿತು.
ಅಲ್ಲಿಯ ವೈದ್ಯರಂತೂ ಪೋಸ್‌ಟ್ಮಾರ್ಟ್‌ಂ ಮಾಡಿ ಮಾಡಿ ಸುಸ್ತಾಗಿ ಕೊನೆಗೆ ಹೆಣ ಕೊಯ್ಯದೆ ಸುಮ್ಮನೆ ಶವಗಳ ಹಣೆಗೊಂದು ಪ್ಲಾಸ್ಟರ್ ಅಂಚಿಸಿ ಯುಡಿಆರ್ ಕೇಸ್ ನಂಬರ್ ಬರೆದು ಕೈತೊಳೆದುಕೊಳ್ಳ ತೊಡಗಿದರು! ಆ ಶವಗಳನ್ನು ವಾರಸುದಾರರಿಗೆ ಒಪ್ಪಿಸುವಾಗಿನ ದೃಶ್ಯನೆನಪಾದರೆ ಇಂದಿಗೂ ನಾನು ದುಃಖಿತನಾಗುತ್ತೇನೆ. ಕೆಲವು ಮನೆಗಳಲ್ಲಿ ಅಪ್ಪ-ಅಮ್ಮ ಇಬ್ಬರೂ ಕಳ್ಳಬಟ್ಟಿ ಕುಡಿದು ಸತ್ತಿದ್ದರು. ಅವರ ಪುಟ್ಟ ಮಕ್ಕಳು ಶವಾಗಾರದ ಬಳಿ ಮುಗ್ಧವಾಗಿ ಕೈಕೈ ಹಿಡಿದುಕೊಂಡು ನಿಂತಿರುತ್ತಿದ್ದರು. ಶವವನ್ನು ಸಂಬಂಧಿಕರಿಗೆ ಒಪ್ಪಿಸುತ್ತಿದ್ದಂತೆ ಆ ಮಕ್ಕಳು ಮೌನವಾಗಿ ರೋದಿಸುತ್ತ ಅವರನ್ನು ಹಿಂಬಾಲಿಸುತ್ತಿದ್ದರು.
ಆ ದಿನಗಳಲ್ಲಿ ಕಳ್ಳಬಟ್ಟಿ ದಂಧೆ ಜೋರಾಗಿತ್ತು. ಇದರಲ್ಲಿ ಕೆಲವು ರಾಜಕಾರಣಿಗಳು ಮತ್ತು ಪೊಲೀಸರೂ ಶಾಮೀಲಾಗಿದ್ದರು. ಇಂಡಸ್ಟ್ರಿಯಲ್ ಸ್ಪರಿಟ್, ಪೇಂಟ್ ಮತ್ತು ವಾರ್ನಿಶ್‌ಅನ್ನು ಸರಾಯಿಯಲ್ಲಿ ಸೇರಿಸುತ್ತಿದ್ದರು. ರಾಸಾಯನಿಕ ಗೊಬ್ಬರವನ್ನೂ ಬೆರೆಸುತ್ತಿದ್ದರು. ಇವೆಲ್ಲವುಗಳ ಮಿಶ್ರಣದಿಂದಾಗಿ ಸರಾಯಿ ಹೆಚ್ಚು ಕಿಕ್ ಕೊಡುತ್ತಿತ್ತು. ಆದರೆ ಮಿಶ್ರಣ ಸ್ವಲ್ಪ ಹದ ತಪ್ಪಿದರೂ ಕುಡುಕರಿಗೆ ಮಾರಣಾಂತಿಕವಾಗುತ್ತಿತ್ತು. ಅಂದು ಆಗಿದ್ದೂ ಇದೇ. ಒಬ್ಬ ಮಹಿಳೆ ಈ ದಂಧೆಯಲ್ಲಿ ಮುಂಚೂಣಿಯಲ್ಲಿದ್ದಳು ಅಮೀರ್ ಸುಲ್ತಾನ್ ಎಂಬಾತ ಕಳ್ಳಬಟ್ಟಿ ಸರಬರಾಜು ಮಾಡುವಲ್ಲಿ ಎಕ್‌ಸ್ಪರ್ಟ್ ಆಗಿದ್ದ. ಆತ ಮುಂದೆ ನನ್ನ ಕೊಲೆಗೆ ಯತ್ನಿಸಿ ಜೈಲು ಸೇರಿದ್ದ. ಆತನ ಇಡೀ ಕುಟುಂಬ ಅಪಘಾತದಲ್ಲಿ ಸತ್ತಿದ್ದು, ಬಳಿಕ ಆತ ಮುಲ್ಲಾ ಆಗಿ ಸಮಾಜ ಸೇವೆಯಲ್ಲಿ ತೊಡಗಿದ್ದನ್ನು ಹಿಂದಿನ ಭಾಗದಲ್ಲಿ ನಾನು ಬರೆದಿದ್ದೆ. ಈ ಪ್ರಕರಣದಲ್ಲಿ ಒಟ್ಟು 63 ಮಂದಿಯನ್ನು ಬಂಧಿಸಲಾಗಿತ್ತು. ಅಕ್ರಮ ಸರಾಯಿ ದಂಧೆ ವಿರುದ್ಧ ಭಾರೀ ಪ್ರತಿಭಟನೆ ನಡೆದವು. ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದವು.
ಹಲವು ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆಯಿತಾದರೂ, ಒಬ್ಬನೇ ಒಬ್ಬ ಆರೋಪಿಗೂ ಶಿಕ್ಷೆಯಾಗಲಿಲ್ಲ! ನೂರಾರು ಜನರ ಸಾವಿಗೆ ಕಾರಣರಾದವರು ಕಾನೂನಿನ ಬಲೆಯಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ಓಡಾಡಿದರು. ಸತ್ತವರಿಗೆ ಸರಕಾರ ಕೊಟ್ಟಿದ್ದು ಕೇವಲ 1 ಸಾವಿರ ರೂ. ಪರಿಹಾರ! ಆ ದುರಂತದಲ್ಲಿ ಮುಖ್ಯ ಆರೋಪಿಯಾಗಿದ್ದ ಮಹಿಳೆಯೊಬ್ಬಳು ಮುಂದೆ ಕಾರ್ಪೊರೇಟರ್ ಕೂಡ ಆದಳು. ಪ್ರಮುಖ ಪಕ್ಷವೊಂದನ್ನು ಸೇರಿ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದಳು. ಆಕೆ ಮಹಾನ್ ಸಮಾಜೋದ್ಧಾರಕಳಂತೆ ಭಾಷಣ ಮಾಡುತ್ತಿರುವುದು ಕೇಳಿ ಮೈ ಉರಿದುಹೋಗುತ್ತಿತ್ತು. ಆ ಸಂದರ್ಭದಲ್ಲಿ ಎಸಿಪಿಯಾಗಿದ್ದ ನಾನೇ ಆಕೆಯ ಪ್ರಚಾರ ಸಭೆಯ ಬಂದೋಬಸ್‌ತ್ಗೆ ನಿಲ್ಲಬೇಕಾಯಿತು! ಹೇಗಿದೆ ನಮ್ಮ ವ್ಯವಸ್ಥೆ?
ಸರ್ಕಸ್ ಅಗ್ನಿ ಅನಾಹುತ, ಕಳ್ಳಬಟ್ಟಿ ದುರಂತ, ಗಂಗಾರಾಮ್ ಕಟ್ಟಡ ಕುಸಿತ… 1981ರಿಂದ 83ರ ಅವಧಿಯಲ್ಲಿ ನಡೆದಿದ್ದ ಈ ಅವಘಡಗಳು ಬೆಂಗಳೂರನ್ನು ನಡುಗಿಸಿದ್ದವು. ಈ ಮೂರು ದುರ್ಘಟನೆಯ ವೇಳೆ ಪರಿಹಾರ ಕಾರ್ಯಾಚರಣೆಯಲ್ಲಿ ನಾನು ಭಾಗಿಯಾಗಿದ್ದೆ. ಆ ಕರಾಳ ಘಟನೆಗಳು ನೆನಪಾದರೆ ಇಂದಿಗೂ ದುಃಖವಾಗುತ್ತದೆ. ಬೇಸರದ ಸಂಗತಿಯೆಂದರೆ, ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಲಿಲ್ಲ.
Discussion about this post