1983
ಆ ದಿನಗಳಲ್ಲಿ ಬೆಂಗಳೂರು ಮಹಾನಗರ ಸಂಚಾರ ದಟ್ಟಣೆ ಎಷ್ಟು ನಿರಾಳವಾಗಿತ್ತೆಂದರೆ, ಬೆರಳಣಿಕೆಯಷ್ಟು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿದ್ದರು. ಅಲ್ಲೊಂದು ಇಲ್ಲೊಂದು ಅಪಘಾತ ಪ್ರಕರಣಗಳಷ್ಟೇ ವರದಿಯಾಗುತ್ತಿದ್ದವು. ನಾನಾಗ ಚಾಮರಾಜಪೇಟೆ ಠಾಣೆಯಲ್ಲಿ ಟ್ರಾಫಿಕ್ ಎಸ್‌ಐ ಆಗಿದ್ದೆ. ನಾವು ಎಷ್ಟು ಆರಾಮವಾಗಿ ಇರುತ್ತಿದ್ದೆವೆಂದರೆ, ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ನಗರದ ಅಷ್ಟೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಊಟದ ವಿರಾಮ ತೆಗೆದುಕೊಳ್ಳುತ್ತಿದ್ದರು!
ಈ ಅವಧಿಯಲ್ಲಿ ಹೆಚ್ಚು ಕಡಿಮೆ ಸಂಚಾರ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಆದರೆ ಯಾವತ್ತೋ ಒಂದು ದಿನ ಈ ಅವಧಿಯಲ್ಲಿ ಅಪಘಾತವೊಂದು ನಡೆದು, ಪೊಲೀಸ್ ಅಧಿಕಾರಿಗಳ್ಯಾರೂ ತಕ್ಷಣ ಹೋಗಿರಲಿಲ್ಲ. ಎಂಬ ಕಾರಣಕ್ಕೆ ನಗರ ಪೊಲೀಸ್ ಆಯುಕ್ತರು ಹೊಸದೊಂದು ಪಾಳಿ ಶುರು (ಲೀನ್ ಅವರ್ ಡ್ಯೂಟಿ) ಮಾಡಿದರು. ಅಂದರೆ ಮಧ್ಯಾಹ್ನ 1 ರಿಂದ 4 ಗಂಟೆಯವರೆಗೆ ಇಡೀ ಬೆಂಗಳೂರಿನಲ್ಲಿ ಒಬ್ಬ ಟ್ರಾಫಿಕ್ ಎಸ್‌ಐ ಡ್ಯೂಟಿ ಮಾಡಬೇಕಿತ್ತು. ನಮಗೆ ತಿಂಗಳಲ್ಲಿ ಎರಡು ಬಾರಿ ಈ ಪಾಳಿ ಬರುತ್ತಿತ್ತು. ಆ ದಿನ ಸೆಪ್ಟೆಂಬರ್ 12, ನಾನು ಈ ಮಧ್ಯಾಹ್ನದ ಪಾಳಿಯಲ್ಲಿದ್ದೆ. 3.30ರ ಸುಮಾರಿಗೆ ನನ್ನ ಬುಲೆಟ್ ಮೋಟರ್ ಬೈಕ್ ಮೇಲೆ ಬಸವರಾಜ್ ಎಂಬ ಹೆಡ್ ಕಾನ್ಸ್ಟೇಬಲ್‌ನನ್ನು ಕೂರಿಸಿಕೊಂಡು ಸಿಟಿ ರೈಲು ನಿಲ್ದಾಣದಿಂದ ಆನಂದ ರಾವ್ ಸರ್ಕಲ್ ಕಡೆ ಹೋಗುತ್ತಿದ್ದೆ.
ಸುಬೇದಾರ್ ಛತ್ರಂ ರಸ್ತೆಯ ಕಪಾಲಿ ಟಾಕೀಸ್ ಪಕ್ಕದಲ್ಲಿ ಬಿಲ್ಡಿಂಗ್ ಕುಸಿದು ಬಿದ್ದಿದ್ದು, ಅಲ್ಲಿಗೆ ಧಾವಿಸಬೇಕೆಂಬ ವೈರ್‌ಲೆಸ್ ಮೆಸೇಜ್ ಬಂತು. ತತಕ್ಷಣ ನಾನು ಆ ಸ್ಥಳ ತಲುಪಿದೆ. ಅಲ್ಲಿಯ ದೃಶ್ಯ ನೋಡಿ ದಿಗಿಲುಗೊಂಡೆ. ಏಳು ಮಹಡಿಯ ಗಂಗಾರಾಮ್ ಕಟ್ಟಡ (ಬೆಂಗಳೂರು ಬುಕ್ ಬ್ಯೂರೋ) ಇಸ್ಪಿಟ್ ಎಲೆಗಳಂತೆ ಕುಸಿದು ಬಿದ್ದಿತ್ತು. ಜನರ ಆಕ್ರಂದನ ಮತ್ತು ಕುಸಿದ ಕಟ್ಟಡದ ಧೂಳು ಮುಗಿಲು ಮುಟ್ಟಿತ್ತು. ಜನ ದಿಕ್ಕಾಪಾಲಾಗಿ ಓಡುತ್ತಿದ್ದರು. ನಾನು ಕಂಟ್ರೋಲ್ ರೂಮ್ ಸಂಪರ್ಕಿಸಿ, ಸ್ಥಳದಲ್ಲಿನ ಪರಿಸ್ಥಿತಿಯನ್ನು ವಿವರಿಸಿದೆ. ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಮತ್ತು ಸಾಕಷ್ಟು ಅಗ್ನಿಶಾಮಕ ವಾಹನಗಳ ತುರ್ತು ಅಗತ್ಯವಿದೆ ಎಂದು ತಿಳಿಸಿದೆ.
ಆನಂದರಾವ್ ಸರ್ಕಲ್‌ನಿಂದ ಕಪಾಲಿ ಕಡೆ ಬರುವ ವಾಹನ ಸಂಚಾರವನ್ನು ಬಂದ್ ಮಾಡಿದೆ. ಬಳಿಕ ಸಾರ್ವಜನಿಕರ ನೆರವು ಪಡೆದು, ಕಟ್ಟಡದೊಳಗೆ ಸಿಲುಕಿದವರ ರಕ್ಷಣೆಗೆ ಧಾವಿಸಿದೆ. ಪುಸ್ತಕ ಖರೀದಿಸುತ್ತಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶುವಾಗಿದ್ದರು. ಆ ಸಂಕೀರ್ಣದಲ್ಲಿ ವಾಣಿಜ್ಯ ಮಳಿಗೆ ಮತ್ತು ರೆಸ್ಟೋರೆಂಟ್ ಕೂಡ ಇತ್ತು. ನಾವು ನಾಗರಿಕರನ್ನು ಸುಲಭವಾಗಿ ರಕ್ಷಿಸುವ ಹಾಗಿರಲಿಲ್ಲ. ಏಕೆಂದರೆ, ಎಲ್ಲ ಮಹಡಿಗಳ ಚಾವಣಿಗಳು ಒಂದರ ಮೇಲೊಂದು ಕುಸಿದು ಬಿದ್ದಿದ್ದವು. ಚಾವಣಿಯ ಕಬ್ಬಿಣದ ಸರಳುಗಳ ನೇಯ್ಗೆಯ ಬಲೆಯಲ್ಲಿ ಜನ ಸಿಲುಕಿದ್ದರು. ಪಿಲ್ಲರ್‌ಗಳ ಬದಿಯಲ್ಲಿ ಸಿಲುಕಿದ ಕೆಲವರನ್ನು ನಾವು ಹೊರಗೆಳೆದೆವು. ಒಳಗೆ ಒಟ್ಟು ಎಷ್ಟು ಜನರಿದ್ದರು ಎಂಬ ಲೆಕ್ಕಾಚಾರ ಯಾರಿಗೂ ಇರಲಿಲ್ಲ. ಕೆಲವೇ ನಿಮಿಷಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಗಿಳಿದರು.
ಈ ಪ್ರಕರಣ ಅಂದು ಬೆಂಗಳೂರಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಕಟ್ಟಡ ಕುಸಿತ ಪ್ರಕರಣ ಬೆಂಗಳೂರಿಗೆ ಆಗ ಹೊಸದು. ಅಷ್ಟೊಂದು ಭಾರದ ಛಾವಣೆಯನ್ನು ಮೇಲೆತ್ತಿ ಜನರನ್ನು ಹೊರ ತೆಗೆಯುವುದು ಹೇಗೆಂಬ ಬಗ್ಗೆ ಯಾರಿಗೂ ಐಡಿಯಾ ಇರಲಿಲ್ಲ. ಇಂಥ ಸನ್ನಿವೇಶ ಎದುರಾದಾಗ ಉಪಯೋಗಿಸುವ ಕ್ರೇನ್ ಇತ್ಯಾದಿ ಅತ್ಯಾಧುನಿಕ ಸಾಧನಗಳು ಅಗ್ನಿಶಾಮಕ ದಳದಲ್ಲಿ ಇರಲಿಲ್ಲ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸಾರ್ವಜನಿಕರು ಜೀವದ ಹಂಗು ತೊರೆದು ಪರಿಹಾರ ಕಾರ್ಯಕ್ಕಿಳಿದರಾದರೂ, ಒಳಗೆ ನರಳುತ್ತ ಬಿದ್ದವರನ್ನು ಹೊರಗೆ ತೆಗೆಯಲಾಗದೆ ಹತಾಶರಾದರು. ಕೊನೆಗೆ, ಕೆಜಿಎಫ್ ಚಿನ್ನದ ಗಣಿಯಲ್ಲಿ ಕೆಲಸ ಮಾಡುವ 30 ಮಂದಿ ಪರಿಣತರ ತಂಡವನ್ನು ಕರೆಸಲಾಯಿತು.
ಮುಂಬಯಿ, ಕೋಲ್ಕತಾ, ಮದ್ರಾಸ್ ಮತ್ತು ದಿಲ್ಲಿಗಳಿಂದ ನುರಿತ ಎಂಜಿನೀಯರ್‌ಗಳು ಧಾವಿಸಿ ಬಂದರು. ಸೇನಾ ಪಡೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ)ನ ನೂರು ಸಿಬ್ಬಂದಿ ಬ್ರಿಗೇಡಿಯರ್ ರಾಮಸ್ವಾಮಿ ನೇತೃತ್ವದಲ್ಲಿ ರಕ್ಷಣಾ ಕಾರ್ಯಕ್ಕಿಳಿದರು. ರಷ್ಯಾದಿಂದ ಹೈಟೆಕ್ ತಂತ್ರಜ್ಞಾನ ಸಾಧನಗಳ ಸಮೇತ ರಕ್ಷಣಾ ತಂಡವನ್ನು ಕರೆಸಲಾಯಿತು. ರಷ್ಯಾದ ಎಂಜಿನಿಯರುಗಳು ಅವಶೇಷಗಳ ಸಂಧಿಯಲ್ಲಿ ಸೆನ್ಸರ್ ವೈರ್‌ಗಳನ್ನು ಬಿಟ್ಟು (ತುದಿಯಲ್ಲಿ ಕೆಂಪು ಲೈಟ್ ಇರುವ ಕಪ್ಪು ಬಣ್ಣದ ರಬ್ಬರ್ ಹಗ್ಗ) ಮನುಷ್ಯನ ಇರುವಿಕೆಯನ್ನು ಸೂಕ್ಷ್ಮವಾಗಿ ದಾಖಲಿಸಿಕೊಳ್ಳುತ್ತಿದ್ದರು. ನಿರ್ದಿಷ್ಟ ವ್ಯಾಪ್ತಿಯೊಳಗೆ ಮನುಷ್ಯ ಉಸಿರಾಡುತ್ತಿದ್ದರೆ, ಕೂಗಿಕೊಳ್ಳುತ್ತಿದ್ದರೆ ಅಥವಾ ಸಣ್ಣದಾಗಿ ಎದೆಯ ಬಡಿತ ಕೇಳಿಬರುತ್ತಿದ್ದರೂ ಆ ಸೆನ್ಸರ್ ಅದನ್ನು ದಾಖಲಿಸಿಕೊಂಡು ಬೀಪ್ ಸೌಂಡ್ ಮೂಲಕ ಮೇಲೆ ಸೂಚನೆ ಕಳಿಸುತ್ತಿತ್ತು. ತಕ್ಷಣ ಆ ಸ್ಥಳದಲ್ಲಿನ ಅವಶೇಷ ತೆರವು ಮಾಡಿ ಒಳಗಿದ್ದವರ ರಕ್ಷಣೆಗೆ ಮುಂದಾಗುತ್ತಿದ್ದರು. ಹೀಗೆ 34 ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆ ಮುಂದುವರಿಯಿತು. ಆದರೆ ತ್ವರಿತವಾಗಿ ತೆರವು ಮಾಡಲು ಸಾಧ್ಯವಾಗದೇ ಹೋಗಿದ್ದರಿಂದ ಸಾವು-ನೋವಿನ ಪ್ರಮಾಣ ಏರುತ್ತ ಹೋಯಿತು.
(ಮುಂದುವರೆಯುವುದು)
Discussion about this post