ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇಶದಾದ್ಯಂತ ಕೊರೋನಾ ವೈರಸ್ ಲಾಕ್’ಡೌನ್ ಪರಿಣಾಮವಾಗಿ ಎಲ್ಲ ರೀತಿಯ ಹಬ್ಬ ಹರಿದಿನಗಳಿಗೆ ಬ್ರೇಕ್ ಬಿದ್ದಿದ್ದು, ನಮ್ಮ ಮನೆಗಳಲ್ಲಿಯೇ ಎಲ್ಲ ಆಚರಣೆ ಮಾಡಬೇಕಿದೆ.
ಅದರಂತೆಯೇ ಮೇ 2ರಂದು ವಾಸವಿ ಜಯಂತಿ ಆಚರಣೆಯಿದ್ದು, ಈ ಬಾರಿ ಆಚರಣೆ ಹೇಗೆ ಎಂದು ಚಿಂತಿಸುತ್ತಿರುವ ಆರ್ಯವೈಶ್ಯ ಸಮುದಾಯದ ಬಾಂಧವರಿಗೆ ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ (ಬಡಾವಣೆ) ವತಿಯಿಂದ ಕೆಲವೊಂದು ಸೂಚನೆಗಳನ್ನು ನೀಡಲಾಗಿದೆ. ಈ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ವರ್ಷದ ವಾಸವಿ ಜಯಂತೋತ್ಸವ ಸಮಾರಂಭವು ಶ್ರೀ ಶಾರ್ವರಿ ನಾಮದ ವೈಶಾಖ ಶುದ್ದ ದಶಮಿಯ 2 ನೆಯ ಮೇ 2020 ನೆಯ ಶನಿವಾರದಂದು ಆಚರಿಸಲಾಗುವುದೆಂದು ತಿಳಿಸಲು ಸಂತೋಷವೆನಿಸುತ್ತಿದೆ. ಆದರೆ ಪ್ರಸ್ತುತ ದೇಶದಾದ್ಯಂತ ಮಹಾಮಾರಿಯಾಗಿ ಹರಡುತ್ತಿರುವ ಕೊರೋನಾದ ಅವಸ್ಥೆಯಿಂದ ಹೊರ ಬರಲು ಆರೋಗ್ಯದ ಅನೇಕ ಚಿಕಿತ್ಸಕ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ವಾಸವಿ ಜಯಂತಿಯನ್ನು ಶ್ರದ್ದಾಪೂರ್ವಕವಾಗಿ ನಿಮ್ಮ ನಿಮ್ಮ ಮನೆಗಳಲ್ಲಿ ವಿಶೇಷ ವಿಧಾನದ ರೀತಿಯಲ್ಲಿ ಆಚರಿಸಿ, ಇಡೀ ಮಾನವ ಸಂಕುಲ ಈ ಮಹಾಮಾರಿ ಸಂಕಟದಿಂದ ಪಾರಾಗುವಂತೆ ಶ್ರೀ ಮಾತೆ ವಾಸವಿ ದೇವಿಯ ಪ್ರಾರ್ಥನೆ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಕೆಳಗೆ ಸೂಚಿಸಿರುವ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಲು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ (ಬಡಾವಣೆ) ಮನವಿ ಮಾಡುತ್ತಿದೆ.
1) ಮೇ 2ರ ಶನಿವಾರದಂದು ಪ್ರಾತಃ ಕಾಲ ಮುಂಚೆ ಎದ್ದು ಮನೆಯಲ್ಲಿ ಎಲ್ಲರು ಅಭ್ಯಂಜನ ಸ್ನಾನ ಮಾಡಿ.
2) ಪೂಜಾ ಕೋಣೆಯಲ್ಲಿ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಿಯ ಭಾವಚಿತ್ರ ಅಥವಾ ವಿಗ್ರಹ ಹಾಗೂ ಕಳಸ ಪ್ರತಿಷ್ಠಾಪನೆ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚಿ ವಿಶೇಷ ಪೂಜಾ ಅಲಂಕಾರ ಮಾಡಿ. ಪೂಜೆಗೆ ಮುಂಚೆ ವಿನಾಯಕನನ್ನು ಸಾಂಕೇತಿಕವಾಗಿ ಪೂಜಿಸಿ.
3) ಶ್ರೀ ಮಾತೆ ವಾಸವಿ ದೇವಿಯ ವಿಗ್ರಹಕ್ಕೆ ಪಂಚಾಮೃತಗಳಿಂದ ಅಭೀಷೇಕ ಮಾಡಿ.
4) ನಿಮ್ಮ ಮನೆಯಲ್ಲಿ ಇರುವ ಶ್ರೀ ವಾಸವಿ ದೇವಿಯ ಅಷ್ಟೋತ್ತರ ನಾಮಾವಳಿ ಹಾಗೂ ಸಹಸ್ರನಾಮಾವಳಿ ಪುಸ್ತಕವನ್ನು ಪಠಿಸುತ್ತ ಕುಂಕುಮಾರ್ಚನೆ ಹಾಗೂ ಪುಷ್ಪಾರ್ಚನೆ ಮಾಡಿ.
5) ವಿಶೇಷವಾಗಿ ಧೂಪದಾರತಿ ಅಥವಾ ಊದಿನಕಡ್ಡಿ ಮಂಗಳಾರತಿ ಮಾಡಿ.
6) ಫಲ ತಾಂಬೂಲ ಹಾಗೂ ನೈವೇದ್ಯ ಸೇವೆ ಮಾಡಿರಿ. ನೈವೇದ್ಯಕ್ಕಾಗಿ ಖಾರ ಪೊಂಗಲ್ ಮತ್ತು ಸಿಹಿ ಪೊಂಗಲ್ (ಉಪಹಾರಕ್ಕೆ ಸೇರಿ) ಮಾಡಬಹುದು.
7) ಮಹಾಮಂಗಳಾರತಿ ಜೊತೆಗೆ ಐದು ರೀತಿಯ ಆರತಿಯನ್ನು ಶ್ರೀಮಾತೆ ವಾಸವಿ ದೇವಿಗೆ ಬೆಳಗಿ. ಈ ಸಂದರ್ಭದಲ್ಲಿ ಧ್ವನಿ ಮುದ್ರಿತ ವಾಗಿರುವ ಆರತಿ ಹಾಡನ್ನು ಹಾಕಿ ಕೊಂಡರೆ ಸಮಯ ಸ್ಪೂರ್ತಿಯಾಗುತ್ತದೆ. ಈ ಕೆಳಗಿನ ಲಿಂಕ್’ನಲ್ಲಿ ಶ್ರೀ ವಾಸವಿ ದೇವಿಯ ಆರತಿ ಹಾಡು ಲಭ್ಯವಿರುತ್ತದೆ. https://youtu.be/yaA_Hf9BeM4
8) ಕುಂಟುಂಬದವರೆಲ್ಲರೂ ಜೊತೆಗೂಡಿ ಮಹಾ ಮಂಗಳಾರತಿ ತೆಗೆದುಕೊಂಡು, ಅಕ್ಷತೆ ಪುಷ್ಪ ಕೈಯಲ್ಲಿ ಹಿಡಿದುಕೊಂಡು ಸರ್ವೇ ಜನಃ ಸುಖಿನೊ ಭವಂತು ಎಂದು ಮಂತ್ರವನ್ನು ಪಠಿಸುತ್ತ ದೀರ್ಘ ನಮಸ್ಕಾರ ಮಾಡಿ. ಈ ಸಮಯದಲ್ಲಿ ವಿಶೇಷವಾಗಿ ದೇಶಕ್ಕೆ ಕೊರೋನಾ ಮಹಾಮಾರಿ ಸಂಕಟದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿರಿ. ಪಾನಕ ಹಾಗೂ ಕೊಸಂಬರಿ ಪ್ರಸಾದ ಸ್ವೀಕರಿಸಿ.
9) ನಂತರ ವಾಸವಿ ದೇವಿಯ ಬಗ್ಗೆ ಹಾಡು ಹೇಳುವುದಿದ್ದರೆ ಹೇಳಿ ಆರತಿ ಮಾಡಿ. ಪೂಜಾ ಕೈಂಕರ್ಯವನ್ನು ಸಲ್ಲಿಸಬಹುದು.
10) ನಿಮ್ಮ ಮನೆಯಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳಿದ್ದರೆ ಕನ್ನಿಕ ಪೂಜೆ ನೆರವೇರಿಸಿ ತಾಂಬೂಲ ಉಡುಗೊರೆ ನೀಡಬಹುದು.
11) ಮಧ್ಯಾಹ್ನದ ಭೋಜನದ ಸಮಯದಲ್ಲಿ ಹೋಳಿಗೆ ಅಥವಾ ಬೆಲ್ಲದ ಒಂದು ಸಿಹಿ ಅಡಿಗೆ ಮಾಡಬಹುದು.
12) ಸಂಜೆ ದೀಪ ಹಚ್ಚಿದ ನಂತರ ಶ್ರೀಮಾತೆ ವಾಸವಿ ದೇವಿಯ ಪಾರಾಯಣ ಓದಿ ವಿಶೇಷ ಆರತಿ ಮತ್ತು ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಿ.
ಈ ರೀತಿ ಮೇಲೆ ತಿಳಿಸಿದ ಕೆಲವು ಸೂಚನೆಗಳನ್ನು ಪರಾಮರ್ಶಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದವರೊಂದಿಗೆ ವಾಸವಿ ಜಯಂತಿಯನ್ನು ವಿಜೃಂಭಣೆಯಿಂದ, ಸಾರ್ಥಕತೆಯಿಂದ ಆಚರಿಸಿ ಎಂದು ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ (ಬಡಾವಣೆ) ವತಿಯಿಂದ ಸಮಾಜ ಬಾಂದವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಶ್ರೀ ಮಾತೆ ವಾಸವಿ ಜಯಂತೋತ್ಸವದ ವಿಶೇಷ ಅಲಂಕಾರದ ಭಾವಚಿತ್ರವನ್ನು ವಾಟ್ಸಪ್ ಮುಖಾಂತರ 05-05-2020 ರೊಳಗಾಗಿ ಕಳುಹಿಸಿರಿ ಮತ್ತು ವಿಶೇಷ ಮೂರು ಬಹುಮಾನಗಳನ್ನು ಪಡೆಯಿರಿ. ಭಾವಚಿತ್ರ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ: 9945776583
ನಿಮ್ಮ ಅನಿಸಿಕೆಗಳಿಗೆ ಸಂಪರ್ಕಿಸಿ
1. ಶ್ರೀ ಟಿ.ಎಸ್. ವೆಂಕಟಸುಬ್ಬಯ್ಯ ಶೆಟ್ಟಿ
9844026593
2. ಶ್ರೀ ಎಚ್.ಎಸ್. ಮಂಜುನಾಥ್
9448244214
3. ಶ್ರೀ ಎಸ್.ವಿ. ನಾಗೇಂದ್ರ
9845670388
4. ಶ್ರೀ ಡಿ.ಎಲ್. ಮಂಜುನಾಥ್
9945776583
5. ಶ್ರೀ ಸಿ.ಎನ್. ಶ್ರೀನಿವಾಸ್
9844082326
Get in Touch With Us info@kalpa.news Whatsapp: 9481252093
Discussion about this post