ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದೂರಲ್ಲಿ ಒಬ್ಬ ಸಾಮಾನ್ಯ ಹುಡುಗ ಇರ್ತಾನೆ. ಆತನ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಆತನಿಗೆ ಸಿನೆಮಾ ನೋಡುವ ಹುಚ್ಚು. ಟಿವಿ ಇದ್ದವರ ಮನೆಯ ಬಾಗಿಲಲ್ಲಿ ನಿಂತು ಟಿವಿ ನೋಡುತಿದ್ದ. ಆದರೆ ಆ ಮನೆಯ ಮಾಲಕರ ದರ್ಪ, ಸೊಕ್ಕಿನಿಂದ ಅವಮಾನಿತವಾಗಿ ವಾಪಾಸ್ಸು ತಮ್ಮ ಮನೆಗೆ ಬರುತಿದ್ದ. ತುಂಬಾ ಕನಸುಗಳನ್ನು ಕಟ್ಟಿಕೊಂಡವನ ಎದೆಗೆ ಜಾಡಿಸಿ ಒದ್ದಂತೆ ಆಗಿತ್ತು. ಮುಂದೊಂದು ದಿನ ಯಾವ ಮನೆಗಳಿಂದ ಹೊರಗೆ ನೂಕಲ್ಪಟ್ಟಿದ್ದನೋ ಅದೇ ಮನೆಯ ಮಾಲಕರು ಆತ ಟಿವಿಯಲ್ಲಿ ಬರುವುದನ್ನು ನೋಡುತ್ತಿದ್ದಾರೆ.
ಈತ ಕಲರ್ಸ್ ಸೂಪರ್ ಕನ್ನಡ ವಾಹಿನಿಯ ಮಜಾ ಭಾರತ, ಕಾಮಿಡಿ ಟಾಕೀಸ್’ ರಿಯಾಲಿಟಿ ಶೋನ ನಟ. ಆತನ ಹೆಸರು ಮಂಜುನಾಥ್ ಗುಡ್ಡದವರ. ಬಹುಶಃ ನಿಮಗೆ ನೆನಪಿಗೆ ಬರಲಿಕ್ಕಿಲ್ಲ. ಯಾಕೆಂದರೆ ಆತ ಕರ್ನಾಟಕಕ್ಕೆ ಪರಿಚಿತನಾಗಿರುವುದು ಬೇರೆ ಹೆಸರಿನಿಂದ.
ಅದುವೇ ಚಿಲ್ಲರ್ ಮಂಜ. ಇಟ್ಸ್ ಎ ಬ್ರ್ಯಾಂಡ್..
ಹೌದು, ಈ ಹೆಸರಿನಿಂದ ಮಂಜುನಾಥ ಗುಡ್ಡದವರ ಕರ್ನಾಟಕದ ಮನೆ ಮನೆಗಳಲ್ಲೂ ಪರಿಚಿತನಾಗಿದ್ದಾರೆ. ನಗಿಸೋಕೆ ಅಂತಾನೇ ಇರುವ ಈ ಶೋನಲ್ಲಿ ಕಾಮಿಡಿ ಮಹಾರಾಜ ಎಂದರೆ ತಪ್ಪಾಗಲಿಕ್ಕಿಲ್ಲ. ಇವರ ಪ್ರತಿಯೊಂದು ಪಂಚ್ ಡೈಲಾಗ್ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಅವರ ಬಾಡಿ ಲಾಂಗ್ವೇಜ್ ಹಾಸ್ಯಕ್ಕೊಂದು ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.
ಇದಷ್ಟೇ ಅಲ್ಲದೇ ಇವರು ತಮ್ಮ ಹಲವಾರು ಸ್ಕ್ರಿಪ್ಟ್ ತಾವೇ ರಚಿಸಿ ಅಭಿನಯಿಸಿದ್ದಾರೆ. ಮಜಾಭಾರತದಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಕೊಡಮಾಡುವ ವಾರದ ಉತ್ತಮ್ಮ ಹಾಸ್ಯನಟ ಕಿರೀಟ ಪ್ರಶಸ್ತಿಗೆ ಅತೀ ಹೆಚ್ಚು ಭಾರಿ ಭಾಜನರಾಗಿದ್ದಾರೆ.
ಲಾಯರ್, ಭಿಕ್ಷುಕ, ರಿಪೋರ್ಟರ್, ಜಡ್ಜ್, ಕ್ಯಾಮೆರಾಮ್ಯಾನ್, ಲವರ್ ಬಾಯ್, ಅಜ್ಜ, ಪೋಲಿ ಮುದುಕ, ಹೀಗೆ ಅನೇಕ ಪಾತ್ರಗಳಲ್ಲಿ ನಟಿಸಿ ವೀಕ್ಷಕರನ್ನು ನಗಿಸಿ ಸುಸ್ತು ಮಾಡಿದ್ದಾರೆ.
ಕಲೆಯ ನಂಟು ಅಂಟಿದ್ದು ಹೀಗೆ
ಚಿಲ್ಲರ್ ಮಂಜಾ ಅವರು ಶಿಕ್ಷಕರಾಗಬೇಕು ಎಂಬ ಕನಸಿನೊಂದಿಗೆ ಧಾರವಾಡದಲ್ಲಿ ಶಿಕ್ಷಕರ ತರಬೇತಿ ಪಡೆಯುತ್ತಾರೆ. ಧಾರವಾಡ ಸಾಹಿತಿಗಳ, ರಂಗಕರ್ಮಿಗಳ, ಜಾನಪದಗಾರರ ತವರೂರು. ಅಲ್ಲಿನ ವಿದ್ಯಾವರ್ಧಕ ಸಂಘ, ರಂಗಾಯಣದಲ್ಲಿ ಜರಗುವ ಸಾಂಸ್ಕೃತಿಕ ಕಾರ್ಯಕ್ರಮ ನಾಟಕಗಳಿಂದ ಪ್ರೇರಿತರಾಗಿ ತಾವು ಕಲಾವಿದರಾಗಬೇಕು ಎಂಬ ಆಸೆಗೆ ಮತ್ತಷ್ಟು ನೀರೆರೆಯುತ್ತಾರೆ.
ರಂಗಾಯಣದಲ್ಲಿ ಜರಗುವ ನಾಟಕ ಶಿಬಿರಗಳಿಗೆ ಭಾಗವಹಿಸಿ ತಮ್ಮೊಳಗಿನ ಕಲೆಯನ್ನು ಹೊರಹಾಕುವ ಪ್ರಯತ್ನ ಮಾಡುತ್ತಾರೆ. ಹಲವಾರು ಹವ್ಯಾಸಿ ರಂಗತಂಡಗಳಲ್ಲಿ ಭಾಗಿಯಾಗಿ ಅವರ ಜೊತೆ ನಾಟಕ, ಬೀದಿ ನಾಟಕ, ಜಾಣಪದ ಕುಣಿತ, ಗಾಯನ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
ಕೇವಲ ಹವ್ಯಾಸಕ್ಕಾಗಿ ಆರಂಭವಾದ ಈ ಕಲೆಯನ್ನು ವೃತ್ತಿಜೀವನವಾಗಿ ಪರಿಗಣಿಸಿ ಅಪರಿಮಿತ ತಾಳ್ಮೆ ಮತ್ತು ಪರಿಶ್ರಮದಿಂದ ಅಭಿನಯಿಸುವಲ್ಲಿ ಶ್ರಮಿಸುತ್ತಾರೆ. ಅಲ್ಲಿನ ಹವ್ಯಾಸಿ ರಂಗಭೂಮಿ ತಂಡಗಳಲ್ಲಿ, ರೆಪರ್ಟರಿ ತಂಡಗಳಲ್ಲಿ ಕಲಾವಿದನಾಗಿ ಕಾರ್ಯ ನಿರ್ವಹಿಸುತ್ತಾರೆ. ಧಾರವಾಡದ ಟೂರಿಂಗ ಟಾಕೀಸ್, ಆಟಮಾಟ, ಮುಂತಾದ ಕಲಾ ತಂಡಗಳಲ್ಲಿ ಭಾಗವಹಿಸಿ ಕರ್ನಾಟಕದ ತುಂಬಾ ಪ್ರದರ್ಶನ ನೀಡಿದ್ದಾರೆ.
ಬದುಕಿಗೆ ತಿರುವು ನೀಡಿದ ಡಾಕ್ಟರ್
ಮಂಜುನಾಥ್ ಅವರ ಬದುಕಿನಲ್ಲಿ ಮತ್ತೊಂದು ಮಜಲು ಹುಟ್ಟಿಕೊಂಡಿದ್ದು ಡಾಕ್ಟರ್’ನಿಂದ. ಆದರೆ ಈ ಡಾಕ್ಟರ್ ನೀವು ಅಂದುಕೊಂಡಂತೆ ಮಾನವರಲ್ಲ. ಅದು ನಾಟಕದ ಹೆಸರು www.ಡಾಕ್ಟರ್.com.
ಈ ನಾಟಕವು ಅಪ್ಪಟ ನಗೆನಾಟಕವಾಗಿದ್ದು, ಪ್ರತಿಯೊಂದು ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಈ ನಾಟಕ ಶುದ್ಧ ಕೌಂಟುಂಬಿಕ ಪ್ರಧಾನವಾಗಿದ್ದು, ಇಲ್ಲಿ ಯಾವುದೇ ಬಗೆಯ ಅಶ್ಲೀಲತೆಯಿಂದ ಕೂಡಿದ ಡಬಲ್ ಮೀನಿಂಗ್ ವಾಕ್ಯ ಇಲ್ಲ. ಈ ನಾಟಕದ ಪಾತ್ರಧಾರಿಗಳ ಸಂಖ್ಯೆ ಕೇವಲ ಆರು ಜನ. ಸತತ ಎರಡು ಗಂಟೆಯ ನಾಟಕದಲ್ಲಿ ನಗುವಿಗೆ ಬರವಿಲ್ಲ. ಈ ನಾಟಕವನ್ನು ಅವರು ಅಮೋಘವಾಗಿ ಕಟ್ಟಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯಿಂದ ಸನ್ಮಾನ
www.ಡಾಕ್ಟರ್.com ನಾಟಕವನ್ನು ಕರ್ನಾಟಕ ನಾಟಕ ಅಕಾಡೆಮಿ ಪುಸ್ತಕವನ್ನಾಗಿ ಪ್ರಕಟಿಸಿದೆ. ಅಕಾಡೆಮಿ ವತಿಯಿಂದ ನಡೆದ ನಾಟಕ ಶಿಬಿರದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಅಕಾಡೆಮಿ ಮಂಜುನಾಥ್ ಗುಡ್ಡದವರ ಅವರನ್ನು ನಾಟಕ ರಚನೆ ಮಾಡಿದ್ದಕ್ಕೆ ಸನ್ಮಾನಿಸಿ ಪ್ರೋತ್ಸಾಹ ನೀಡಿದೆ.
ಕಿರುತೆರೆ ಪ್ರವೇಶ
ಚಿಲ್ಲರ್ ಮಂಜಾ ಅವರು ಕಲರ್ಸ್ ಸೂಪರ್ ವಾಹಿನಿ ಮಜಾಭಾರತ ಕಾರ್ಯಕ್ರಮಕ್ಕೆ ನಡೆಸಿದ್ದ ಆಡಿಶನ್’ನಲ್ಲಿ ಭಾಗವಹಿಸಿ ಆಯ್ಕೆಯಾದರು. ಅಲ್ಲಿ ಉತ್ತಮ ಪ್ರದರ್ಶನ ನೀಡಿ ಜನರ ಮನ ಗೆಲ್ಲುವಲ್ಲಿ ಯಶಸ್ವಿ ಯಾದರು.
ತಾಯಿಯೇ ಗುರು
ಈ ಸಾಧನೆಯ ಹಿಂದೆ ಅಮ್ಮನೇ ಗುರು. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ಇಲ್ಲಿ ಅಕ್ಷರಶಃ ಸತ್ಯ. ಅಮ್ಮನ ಹೆಸರು ಗಂಗಮ್ಮ. ಹೆಸರಿನಂತೆ ಅವರು ಹರಿಯುವ ಸ್ವಚ್ಛ ಜಲಧಾರೆ. ಅವರು ಜಾನಪದೀಯ ಹಾಡುಗಳನ್ನು ಸುಶ್ರ್ಯಾವ್ಯವಾಗಿ ಹಾಡುತ್ತಾರೆ. ಊರಲ್ಲಿ ಮನೆ, ದೇವಸ್ಥಾನದಲ್ಲಿ, ಪೂಜೆಗಳಲ್ಲಿ ಇವರ ಹಾಡುವಿಕೆ ಇದ್ದಿದ್ದೆ. ಅಮ್ಮನ ಹಾಡುವಿಕೆ ಮತ್ತು ಲವಲವಿಕೆ ಜೀವನ ಇವರ ಸ್ಫೂರ್ತಿ.
ಬಡತನ ಎರಡನೇ ಗುರು
ಪ್ರತಿಭೆ ಎನ್ನುವುದು ಸಿರಿವಂತರ ಸ್ವತ್ತಲ್ಲ ಅದು ಸಾಧಕನ ಸ್ವತ್ತು ಎಂಬುದು ಮಂಜುನಾಥ್ ಅವರು ಸಾಧಿಸಿ ತೋರಿಸಿದ್ದಾರೆ. ಒಂದು ರೂಮಿನ ಪುಟ್ಟ ಮನೆ ಇವರದು. ಅಪ್ಪ ಬಸವಂತಪ್ಪ, ಅಮ್ಮ ಗಂಗಮ್ಮ, ಅರುಣ, ಗಣಪತಿ ಇಬ್ಬರು ತಮ್ಮಂದಿರು ತಂಗಿ ಗುತ್ತೆಮ್ಮ ಇದು ಪುಟ್ಟ ಕುಟುಂಬ. ಕುಟುಂಬದ ಒಬ್ಬರಿಗೊಬ್ಬರ ಪ್ರೋತ್ಸಾಹ, ಪರಸ್ಪರ ವಿಚಾರ ವಿನಿಮಯ ಇವರ ಕುಟುಂಬದ ಆಸ್ತಿ.
ಕಲರ್ಸ್ ಸುಪರ್ ವಾಹಿನಿಯಿಂದ ಟಿವಿ ಉಡುಗೊರೆ
ಹೌದು, ಈ ಮೇಲೆ ಹೇಳಿದಂತೆ ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಮಂಜುನಾಥ್ ಮಜಾಭಾರತ ಶೋದಲ್ಲಿ ಅಭಿನಯಿಸುವುದು ಅವರ ಕುಟುಂಬದವರು ಇನ್ನೊಬ್ಬರ ಮನೆಯಲ್ಲಿ ವೀಕ್ಷಿಸುತ್ತಿದ್ದರು. ಟಿವಿ ಸ್ಟಾರ್ ಆದವನ ಮನೆಯಲ್ಲಿ ಟಿವಿ ಇರಲಿಲ್ಲ ಎಂಬುದು ಕಲರ್ಸ್ ಸೂಪರ್ ವಾಹಿನಿಗೆ ಗೊತ್ತಾಗಿ ಅವರ ಕುಟುಂಬದವರನ್ನು ಕಾರ್ಯಕ್ರಮಕ್ಕೆ ನೇರವಾಗಿ ಆಹ್ವಾನಿಸಿ ಟಿವಿ ಉಡುಗೊರೆಯಾಗಿ ನೀಡಿದರು.
ಸಿನಿಮಾದಲ್ಲಿ ಮಿಂಚು
ಇವರು ಹಿರಿತೆರೆಯಲ್ಲೂ ತಮ್ಮ ಅಭಿನಯ ನೀಡಿದ್ದಾರೆ. ಸಿಂಗ ಪ್ರದರ್ಶನ ಕಂಡ ಚಿತ್ರ. ಪ್ರೇಮನ್, ಹೈ ಸ್ಕೂಲ್ ಗ್ಯಾಂಗ್, ಚೇಕ್ಮೆಟ್, ಶ್ರೀನಿವಾಸ ಪೂರ, ಇವುಗಳ ಚಿತ್ರಿಕರಣದಲ್ಲಿ ತೊಡಗಿದ್ದಾರೆ.
ಚಿಲ್ಲರ್ ಮಂಜಾ ಅವರು ಮುಂದೆ ದೊಡ್ಡ ನಟರಾಗಿ ಬೆಳೆದು, ಅವರ ಪಂಚ್ ಮಾತುಗಳಿಂದ ಪ್ರೇಕ್ಷಕರ ಮನ ತಣಿಸಲಿ ಎಂದು ಹಾರೈಸೋಣ..
ಕುಟುಂಬ ಸದಸ್ಯರು ಏನೆನ್ನುತ್ತಾರೆ?
ಪ್ರೇಮ ಎಂಬುದೇ ಜೀವನ. ಅವ್ವನಲ್ಲಿ ಸದಾ ಬದುಕಿನ ಬಗ್ಗೆ ಉತ್ಸಾಹ ಕಾಣುತಿತ್ತು. ಬಡತನದ ಬೇಗೆಯಲ್ಲಿ ನಮಗೆ ಯಾವ ಕಷ್ಟದ ಅನುಭವ ನೀಡದೇ ನಮ್ಮನ್ನು ಬೆಳೆಸಿದಳು. ಅವಳ ಬೀಕ್ಷೇಯೇ ನಾನೀಗ ಈ ಮಟ್ಟಕ್ಕೆ ಬಂದಿರುವುದು. ನಾ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಗೆಳೆಯರು, ಮಹಾಭಾರತದ ಎಲ್ಲಾ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ಚಿಲ್ಲರ್ ಮಂಜಾ…
ನನ್ನ ಮಗ ನನ್ನ ಹೆಮ್ಮೆ
-ಬಸವಂತಪ್ಪ, ಅಪ್ಪಅಣ್ಣ ನನಗೆ ಬರೀ ಅಣ್ಣನಲ್ಲ ಉತ್ತಮ ಗೆಳೆಯ. ನನ್ನ ಪ್ರತಿಯೊಂದು ಅನಿಸಿಕೆಗಳನ್ನು ಆತನೊಂದಿಗೆ ಯಾವುದೇ ಭಯವಿಲ್ಲದೆ ಹಂಚಿಕೊಳ್ಳುತ್ತೇನೆ – ಗುತ್ತೆಮ್ಮ (ಚಿಲ್ಲರ್ ಮಂಜಾ ಸಹೋದರಿ)
ಮಂಜಣ್ಣ ಮಗು ಮನಸಿನವನು. ನಮ್ಮೊಂದಿಗೆ ಆತ ಅಣ್ಣನೆಂಬ ಅಧಿಕಾರ ಚಲಾಯಿಸಿದ್ದೇ ಇಲ್ಲ. ಎಲ್ಲರನ್ನೂ ಸ್ನೇಹದಿಂದ ನೋಡುತ್ತಾನೆ.
-ಗಣಪತಿ (ಚಿಲ್ಲರ್ ಮಂಜಾ ಸಹೋದರ)ನನಗೆ ಮಂಜಣ್ಣ ಇಷ್ಟ ಆಗೋದು ಅವನ ಸಿಂಪಲ್ಸಿಟಿಯಿಂದ. ಮುಕ್ತ ಮನಸ್ಸಿನಿಂದ ನಮ್ಮ ಜೊತೆ ಬೆರೆಯುತ್ತಾರೆ.
-ಅರುಣ (ಚಿಲ್ಲರ್ ಮಂಜಾ ಸಹೋದರ)
ಲೇಖನ, ಚಿತ್ರ, ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Get in Touch With Us info@kalpa.news Whatsapp: 9481252093
Discussion about this post