ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಹಾವಳಿಯಿಂದ ಸ್ಥಗಿತಗೊಳಿಸಲಾಗಿದ್ದ ಶಾಲಾ-ಕಾಲೇಜು ಆರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಗೊಂಡಿದ್ದು, ಜನವರಿ 1ರಿಂದ 10ನೆಯ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ವಿಚಾರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ.
ಶಾಲೆ-ಕಾಲೇಜುಗಳ ಪ್ರಾರಂಭ ಕುರಿತು ಪರಿಸ್ಥಿತಿ ಅವಲೋಕಿಸಲು, ನಿರ್ಧಾರ ಕೈಗೊಳ್ಳಲು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅದರಲ್ಲಿ ಜನವರಿ 1ರಂದು 10 ಮತ್ತು ಪಿಯುಸಿ ತರಗತಿ ಪ್ರಾರಂಭಿಸಿ 15 ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಇನ್ನು, ಹೈಕೋರ್ಟ್ ಅನುಮತಿ ಪಡೆದುಕೊಂಡು 6ರಿಂದ 9ನೆಯ ತರಗತಿಯವರೆಗೆ ವಿದ್ಯಾಗಮ ತರಗತಿ ಪ್ರಾರಂಭ ಮಾಡಲಾಗುವುದು ಎಂದಿದ್ದಾರೆ.
ತರಗತಿ ಆವರಣದಲ್ಲಿ ಮಾತ್ರ ವಿದ್ಯಾಗಮ ಈ ಬಾರಿ ಇರುತ್ತದೆ. ವಾರಕ್ಕೆ ಮೂರು ದಿನ ಮಾತ್ರ ಶಾಲೆಗೆ ವಿದ್ಯಾಗಮಕ್ಕೆ ಬರುವ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇವೆ. ವಿದ್ಯಾಗಮಕ್ಕೆ ಬರುವ ಮಕ್ಕಳು ತಮ್ಮ ಪೋಷಕರ ಒಪ್ಪಿಗೆ ಪತ್ರ ತರಬೇಕು. ವಿದ್ಯಾರ್ಥಿಗೆ ಯಾವ ಆರೋಗ್ಯ ಸಮಸ್ಯೆಯೂ ಇಲ್ಲ ಎಂದು ಪೋಷಕರಿಂದ ಬರೆಸಿಕೊಂಡು ಬರಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post