ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ರಾಜ್ಯದಲ್ಲಿ ಕುರುಬ ಸಮುದಾಯವನ್ನು ಒಡೆಯಲು ಆರ್‌ಎಸ್‌ಎಸ್ ಹೊಂಚು ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸಮಂಜಸವಲ್ಲ. ಸಿದ್ದರಾಮಯ್ಯ ಅವರಿಗೆ ಆರ್‌ಎಸ್‌ಎಸ್ ಕನಸಲ್ಲಿ ಬರುತ್ತಿದೆ. ಅವರ ಕನಸಿನ ಭಯಕ್ಕೆ ಏನೆಲ್ಲಾ ಮಾತನಾಡಿದರೆ ನಮಗೆ ಸಂಬಂದವಿಲ್ಲ ಎಂದು ಕುರುಬ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ಜಿಲ್ಲೆಯ ಕುಷ್ಟಗಿ ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಕುರುಬ ಸಮಾಜಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಮುದಾಯದ ಮುಖ್ಯ ಬೇಡಿಕೆ ಎಸ್ಟಿ ಮೀಸಲಾತಿ ಪಡೆಯುವುದಾಗಿದೆ. ನಮ್ಮ ಬೇಡಿಕೆಯನ್ನು ಆರ್‌ಎಸ್‌ಎಸ್ ಈಡೇರಿಸಲಿ ಅಥವಾ ಯಾವುದೇ ಪಕ್ಷ ಈಡೇರಿಸಲಿ. ಆದರೆ, ಮೀಸಲಾತಿ ಹೋರಾಟದಲ್ಲಿ ಯಾವುದೇ ರಾಜಕೀಯವಿಲ್ಲ. ಎಲ್ಲರೂ ಪಕ್ಷ, ಭೇದ ಬಿಟ್ಟು ಪಕ್ಷಾತೀತವಾಗಿ ಭಾಗವಹಿಸುತ್ತಿದ್ದಾರೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ನಮ್ಮ ಹೋರಾಟಕ್ಕೆ ಸ್ಪಂದಿಸುತ್ತಿದ್ದು, ಬೇಡಿಕೆ ಈಡೇರಿಸುತ್ತಾರೆ ಎಂಬ ಆಶಾಭಾವನೆ ಇದೆ. ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟ ನಿರಂತರ ನಡೆಯಲಿದೆ ಎಂದರು.
ಎಸ್ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ಅವರು ವಿರೋಧವಿಲ್ಲ. ಹೋರಾಟ ಪ್ರಾರಂಭಕ್ಕೂ ಮುನ್ನ ಸಿದ್ದರಾಮಯ್ಯ ಅವರು ಬೆಂಬಲಿಸಿದ್ದಾರೆ. ಆದರೆ, ಹೋರಾಟದಲ್ಲಿ ಭಾಗವಹಿಸುವುದಿಲ್ಲ. ನಾನು ಮೌನವಾಗಿರುತ್ತೇನೆ ಎಂದು ದೂರವಾಣಿ ಕರೆಯಲ್ಲಿ ಹೇಳಿದ್ದಾರೆ.
ಜನವರಿ 15 ಮಕರ ಸಂಕ್ರಾಂತಿ ದಿನದಂದು ಕಾಗಿನೆಲೆ ಪೀಠದಿಂದ ಬೆಂಗಳೂರು ಕಡೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆ 21ದಿನಗಳ ಕಾಲ ನಡೆಯಲಿದೆ. ಕಾಗಿನೆಲೆ ಪೀಠದ ನಾಲ್ವರು ಸಾಮೀಜಿಗಳು ನೇತೃತ್ವದಲ್ಲಿ ನಡೆಯುತ್ತಿದ್ದು, ಪ್ರತಿಯೊಂದು ಜಿಲ್ಲೆಯವರು ಪಾದಯಾತ್ರೆಯಲ್ಲಿ ಭಾಗವಹಿಸಲು ತೀರ್ಮಾನಿಸಲಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ಮಾತನಾಡಿ, ಡಿ.31 ರಂದು ಕುರುಬ ಸಮಾಜದ ಎಲ್ಲ ಒಡೆಯರುಗಳ ಸಮಾವೇಶ ಹರಿಹರ ಬೆಳ್ಳೋಡಿ ಮಠದಲ್ಲಿ ನಡೆಯಲಿದೆ. ನಿರಂಜನಾನಂದ ಸ್ವಾಮೀಜಿಗಳು ನೇತೃತ್ವ ವಹಿಸಲಿದ್ದಾರೆ. ಈ ಸಭೆಯಲ್ಲಿ ಒಡೆಯರಿಗೆ, ಪೂಜಾರಿಗಳಿಗೆ ಸಂಸ್ಕೃತ, ವೇದ ಅಧ್ಯಾಯನ ಸೇರಿದಂತೆ ಅನೇಕ ಯೋಜನೆಗಳ ಕುರಿತು ಎಸ್ಟಿ ಹೋರಾಟ ಸಮಿತಿಯ ಮೂಲಕ ನಡೆಸಲು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಹಾಗಾಗಿ ಕುರುಬ ಸಮಾಜದ ಒಡೆಯರು ಹಾಗೂ ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಫಕೀರಪ್ಪ ಚಳಗೇರಿ, ಜಿಪಂ ಮಾಜಿ ಸದಸ್ಯ ಪರಸಪ್ಪ ಕತ್ತಿ, ಕುರುಬ ಎಸ್ಟಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕಲ್ಲೇಶ ತಾಳದ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಹನುಮಂತಪ್ಪ ಚೌಡಕಿ, ಚಂದ್ರಕಾಂತ್ ವಡಿಗೇರಿ, ತೇಜಯ್ಯ ಗುರುವಿನ್, ಶಿವಾನಂದಯ್ಯ, ಶರಣು ಚೂರಿ ಸಮುದಾಯದ ಮತ್ತಿತರೆ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post