ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ನಡೆಯುವ ಸರ್ಕಾರದ ವಿವಿಧ ಕಾರ್ಯಕ್ರಮಗಳು, ಗಣ್ಯರ ಆಹ್ವಾನ ಮುಂತಾದ ಸಂದರ್ಭಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶಿಷ್ಠಾಚಾರ ಉಲ್ಲಂಘಿಸದಂತೆ ಕಾರ್ಯಕ್ರಮಗಳನ್ನು ಆಯೋಜಿಸಿ, ಸಕಾಲದಲ್ಲಿ ಪೂರ್ಣಗೊಳಿಸುವಲ್ಲಿ ಗಮನಹರಿಸುವಂತೆ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಡಳಿತ ಸಭಾಂಗಣದಲ್ಲಿ ಶಿಷ್ಠಾಚಾರ ಪಾಲನೆ ಹಾಗೂ ನ್ಯಾಯಾಲಯಗಳಲ್ಲಿ ವಿವಿಧ ಹಂತದಲ್ಲಿರುವ ಪ್ರಕರಣಗಳ ಪ್ರತಿ ಹಂತದ ಬೆಳವಣಿಗೆಯನ್ನು ತಿಳಿಯುವ ಹಾಗೂ ಕೈಗೊಳ್ಳಬಹುದಾದ ಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹೊಸದಾದ ತಂತ್ರಾಂಶವನ್ನು ರೂಪಿಸಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿರುವ ಕುರಿತು ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಿಷ್ಟಾಚಾರ ಪಾಲನೆ ಕುರಿತು ಸರ್ಕಾರದ ಸ್ಪಷ್ಠ ಮಾರ್ಗಸೂಚಿಗಳಿದ್ದಾಗ್ಯೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿಷ್ಠಾಚಾರ ಉಲ್ಲಂಘನೆ ಪ್ರಕರಣಗಳು ಆಗಾಗ್ಗೆ ದಾಖಲಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂತಹ ಪ್ರಕರಣಗಳು ಘಟಿಸದಂತೆ ಹಾಗೂ ಕಾರ್ಯಕ್ರಮಗಳ ಆಯೋಜನೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದಂತೆ ಅವರು ಸೂಚಿಸಿದರು.
ಕಾರ್ಯಕ್ರಮಗಳನ್ನು ಆಯೋಜಿಸುವ ಇಲಾಖೆಗಳ ಮುಖ್ಯ ಅಧಿಕಾರಿಗಳು ಆಹ್ವಾನ ಪತ್ರಿಕೆಗಳನ್ನು ಮುದ್ರಿಸುವ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಕ್ಷಮ ಅಧಿಕಾರಿಗಳನ್ನು ಸಂಪರ್ಕಿಸಿ, ಶಿಷ್ಟಾಚಾರ ಕ್ರಮವಾಗಿರುವುದರ ಕುರಿತು ಖಚಿತಪಡಿಸಿಕೊಳ್ಳಬೇಕು. ಅಂತೆಯೆ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರನ್ನು ನಿಯಮಾನುಸಾರ ಆಹ್ವಾನಿಸಿ, ಬೀಳ್ಕೊಡಲು ಅಧಿಕಾರಿಯೊಬ್ಬರಿಗೆ ನಿಯೋಜಿಸುವುದು ಉತ್ತಮ ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಮೊಕದ್ದಮೆಗಳನ್ನು ಕಾಲಮಿತಿಯಲ್ಲಿ ದಾಖಲಿಸಬೇಕು. ನ್ಯಾಯಾಲಯದ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸಬೇಕು ಅಥವಾ ಮೇಲ್ಮನವಿ ಸಲ್ಲಿಸುವಲ್ಲಿ ಗಮನಹರಿಸಬೇಕು. ಈ ಸಂಬಂಧ ಉಚ್ಛ ನ್ಯಾಯಾಲಯದ ಮಾರ್ಗದರ್ಶನದಂತೆ ಸರ್ಕಾರವು ಇಲಾಖೆಗಳ ಪ್ರಕರಣಗಳಲ್ಲಿ ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಅಥವಾ ಸಕಾಲಿಕವಾಗಿ ನ್ಯಾಯಾಲಯಕ್ಕೆ ಮಾಹಿತಿ ಒದಗಿಸುವಲ್ಲಿ ಆಗಿರಬಹುದಾದ ವಿಳಂಬದಿಂದಾಗಿ ಇಲಾಖೆಯ ಪರವಾಗಿ ಬರಬೇಕಾದ ತೀರ್ಪುಗಳು ಕೆಲವೊಮ್ಮೆ ಇಲಾಖೆಗೆ, ಇಲಾಖೆಯ ಅಧಿಕಾರಿಗಳಿಗೆ ವಿರುದ್ಧವಾಗಿ ಬಂದಿವೆ ಮಾತ್ರವಲ್ಲ ಇಲಾಖೆಯ ಅಧಿಕಾರಿಗಳಿಗೆ ಛೀಮಾರಿ ಹಾಕಿರುವ ಪ್ರಕರಣಗಳೂ ಇಲ್ಲದಿಲ್ಲ. ಆದ್ದರಿಂದ ಇವುಗಳನ್ನು ಗಂಭೀರವಾಗಿ ಪರಿಗಣಿಸಿ, ನ್ಯಾಯಾಲಯವು ನೀಡಿರುವ ಸೂಚನೆಯನ್ವಯ ಸರ್ಕಾರವು ಹೊಸ ತಂತ್ರಾಂಶ(Court case monitoring System CCMS)ವನ್ನು ಅಭಿವೃದ್ದಿಪಡಿಸಿದ್ದು, ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಿದೆ ಎಂದರು.
ಈ ತಂತ್ರಾಂಶದ ಅನುಷ್ಠಾನದ ನಂತರ ಎಲ್ಲಾ ಇಲಾಖೆಗಳ ಅಧಿಕಾರಿಗಳು ನ್ಯಾಯಾಲಯಕ್ಕೆ ಸಂಬಂಧಿಸಿದ ಪತ್ರಗಳನ್ನು ನಿಯಮಾನುಸಾರ ದಾಖಲಿಸಿಕೊಂಡು 48 ಗಂಟೆಯೊಳಗಾಗಿ ಸ್ವೀಕೃತಿಗೊಂಡು ಸಂಬಂಧಿತ ಅಧಿಕಾರಿಗಳಿಗೆ ರವಾನಿಸಿ ಕ್ರಮಕ್ಕೆ ಸೂಚಿಸಬೇಕೆಂದ ಅವರು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರಿಸುವ ಅಗತ್ಯವಿದ್ದಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಕಂಡಿಕೆವಾರು ಉತ್ತರ ತಯಾರಿಸಿ ನೀಡಲು ತಯಾರಾಗಿರುವಂತೆ ಸೂಚಿಸಿದ ಅವರು, ಇಲಾಖೆಯ ಹಿರಿಯ ಅಧಿಕಾರಿಗಳು ನ್ಯಾಯಾಲಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಅಡಿಷನಲ್ ಎಸ್ಪಿ ಡಾ. ಶೇಖರ್ ಎಚ್. ತೆಕ್ಕಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post