ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಶ್ರೀನಾಟ್ಯಂ ಕಲಾ ಕೇಂದ್ರವು ಡಿ. 29ರಂದು ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ನೃತ್ಯ ಸಂಕಲ್ಪ- 2024 ಆಯೋಜಿಸಿದೆ. ಬೆಳಗ್ಗೆ 10.30ರಿಂದ ರಾತ್ರಿ 8ರವರೆಗೆ ವೈವಿಧ್ಯಮಯ ನೃತೋತ್ಸವ ನಡೆಯಲಿದೆ. ಹಿರಿಯ ಮೃದಂಗ ವಿದ್ವಾಂಸ ಎಸ್.ವಿ. ಗಿರಿಧರ, ಪತ್ರಕರ್ತ, ಲೇಖಕ ಎ.ಆರ್. ರಘುರಾಮ, ಬಿಇಎಲ್ ನಿವೃತ್ತ ಡೆಪ್ಯೂಟಿ ಮೇನೇಜರ್ ನರಸಿಂಹಯ್ಯ, ಖ್ಯಾತ ಯಕ್ಷ ಕಲಾವಿದೆ ಗೌರಿ ಶ್ರೀನಿವಾಸ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆಂದು ವಿದುಷಿ ಪುಷ್ಪಲತಾ ಮಂಜುನಾಥ ತಿಳಿಸಿದ್ದಾರೆ. ಇದೇ ಸಂದರ್ಭ ವಿಮಲಾ ನರಸಿಂಹ ಮತ್ತು ಭಾಸ್ಕರ ರೆಡ್ಡಿ ಅವರಿಗೆ ಸನ್ಮಾನಿಸಲಾಗುವುದು.
ಬೆಳಗ್ಗೆ 11ಕ್ಕೆ ಹಿರಿಯ ವಿದ್ವಾಂಸ ಎಸ್.ವಿ. ಗಿರಿಧರ ನಿರ್ದೇಶನದಲ್ಲಿ ತಾಳವಾದ್ಯ, ಕಲಾವಿದ ಸಿ.ಎಂ. ಶ್ರೀಪಾದ ತಂಡದಿಂದ ಯಕ್ಷಗಾನ, ಶ್ರೀನಾಟ್ಯಂ- ಕಲಾವಿದೆಯರಿಂದ ಭರತನಾಟ್ಯ (ನೇರ ಹಿಮ್ಮೇಳದೊಂದಿಗೆ) ನೆರವೇರಲಿದೆ.
ವಿದುಷಿ ಸಂಹಿತಾ ವಿನಯ್ ಹಾಡುಗಾರಿಕೆಗೆ ವಿದುಷಿ, ಗುರು ಪುಷ್ಪಲತಾ ನಟುವಾಂಗ ನೀಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಶ್ರೀನಾಟ್ಯಂ- ಕಲಾವಿದೆಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದೆ. (ವಿದುಷಿ ಸ್ವರ್ಣಾ ಭಟ್ ಶಿಷ್ಯವೃಂದ). ಸಂಜೆ 6.30ಕ್ಕೆ ಹಿರಿಯ ನೃತ್ಯ ವಿದುಷಿ ಲತಾ ಲಕ್ಷ್ಮೀಶ ಹೆಗಡೆ ತಂಡದಿಂದ‘ ಶ್ರೀನಿವಾಸ ಕಲ್ಯಾಣ’ ನೃತ್ಯ ರೂಪಕ ( ವಿದ್ವಾನ್ ಕಬ್ಬಿನಾಲೆ ವಸಂತ ಭಾರದ್ವಾಜ್ ರಚನೆ) ಪ್ರಸ್ತುತಿ ಇದೆ. ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಶ್ರೀನಾಟ್ಯಂ ನಿರ್ದೇಶಕಿ, ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.
ಶ್ರೀ ನಾಟ್ಯಂ – ಹಿರಿಮೆ:
ಬೆಂಗಳೂರಿನ ಕೊಣನಕುಂಟೆಯಲ್ಲಿ 2009ರಲ್ಲಿ ಶಿವಮೊಗ್ಗ ಮೂಲದ ವಿದುಷಿ ಪುಷ್ಪಲತಾ ಮಂಜುನಾಥ ಅವರಿಂದ ಚಾಲನೆಗೊಂಡ ಶ್ರೀ ನಾಟ್ಯಂ ಕಲಾ ಕೇಂದ್ರವು ಈವರೆಗೆ ಸಾವಿರಾರು ಮಕ್ಕಳಿಗೆ ಭರತನಾಟ್ಯ, ಸಂಗೀತ , ಕೀ ಬೋರ್ಡ್ ಕಲೆಯನ್ನು ಕಲಿಸುವಲ್ಲಿ ಮಹತ್ವದ ಸೇವೆಯನ್ನು ಮಾಡಿದೆ. ರಾಜ್ಯದ ಪ್ರತಿಷ್ಠಿತ ಕರಾವಳಿ ಉತ್ಸವ , ಹಂಪಿ ಉತ್ಸವ, ಪಟ್ಟದಕಲ್ಲು ಉತ್ಸವ ಮತ್ತು ಮೈಸೂರು ದಸರಾ ಸೇರಿದಂತೆ ನೂರಾರು ಕಾರ್ಯಕ್ರಮಗಳಲ್ಲಿ ಶ್ರೀ ನಾಟ್ಯಂ ತನ್ನ ಛಾಪನ್ನು ಒತ್ತಿದೆ.
ವಿದುಷಿ ಪುಷ್ಪಲತಾ ನೇತೃತ್ವದ ಈ ತಂಡ ಕಳೆದ ವರ್ಷ ಪಾಂಡಿಚೇರಿ ಮತ್ತು ಚಿದಂಬರಂ ನಲ್ಲಿ ಹಮ್ಮಿಕೊಂಡಿದ್ದ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಯ ಬೃಹತ್ ನೃತ್ಯ ಪ್ರಸ್ತುತಿಗಳಲ್ಲಿ ತನ್ನ ವಿಶೇಷತೆಯನ್ನು ಪ್ರದರ್ಶಿಸಿರುವುದು ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿದೆ. ಮುಂಬರುವ ಜನವರಿಯಲ್ಲಿ ಮಲೇಷ್ಯಾದಲ್ಲಿ ಹಮ್ಮಿಕೊಂಡಿರುವ ವಿಶೇಷ ಸಂಕ್ರಾಂತಿ ಸಂಭ್ರಮಕ್ಕೆ ಶ್ರೀನಾಟ್ಯಂ ತಂಡ ವಿಶೇಷ ಮೆರುಗು ನೀಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post