ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗಲೂ ಶಿಲ್ಪಾ ಫೌಂಡೇಷನ್ ವತಿಯಿಂದ ಸ್ಕೂಲ್ ಕಿಟ್ ಮತ್ತು ಸ್ಪೋರ್ಟ್ಸ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹಲವಾರು ವರ್ಷಗಳಿಂದ ಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಒದಗಿಸಿ ಅಳಿವಿನಂಚಿನಲ್ಲಿರುವ ಶಾಲೆಗಳ ಮೇಲೆ ಬೆಳಕನ್ನು ಚೆಲ್ಲುತ್ತಾ ಬಂದಿದೆ. ಇದೇ ಉದ್ದೇಶದೊಂದಿಗೆ ಮಂಡಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಕೂಲ್ ಕಿಟ್ ಮತ್ತು ಸ್ಪೋರ್ಟ್ಸ್ ಕಿಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ, ಶಿಲ್ಪಾ ಫೌಂಡೇಷನ್‌ನ ಮುಖ್ಯ ಖಜಾಂಜಿ ಅಚ್ಚುತ್ ಗೌಡ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೈದಾನದಲ್ಲಿ ಕೇವಲ ಪ್ರೇಕ್ಷಕರಾಗಿ ಇರದೇ ತನ್ನಲ್ಲಿರುವ ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಂಡು ಒಬ್ಬ ಆಟಗಾರನಾಗಿ ಬೆಳೆಯಬೇಕಾಗಿದೆ ಎಂದರು.
ಗ್ರಾಮೀಣ ಶಾಲೆಗಳಲ್ಲಿ ಕೋಕೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್‌ಗೆ ಮಾತ್ರ ಸೀಮಿತವಾದೇ ಕ್ರಿಕೆಟ್, ಟೆನ್ನಿಸ್, ಪುಟ್’ಬಾಲ್, ಈಜುಗಾರಿಕೆ, ಸ್ಕಾಷ್, ಬ್ಯಾಡ್ಮಿಂಟನ್’ಗಳಲ್ಲೂ ಕೂಡ ಆಸಕ್ತಿ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂಬುದೇ ನಮ್ಮ ಹಂಬಲ. ಓಟಗಾರ್ತಿ ಹಿಮ ದಾಸ್, ಕ್ರಿಕೆಟ್ ಪಟು ಹಾರ್ದಿಕ್ ಪಾಂಡ್ಯ, ಕುಸ್ತಿ ಪಟು ಸುಜೇಂದರ್ ಸಿಂಗ್ ಹೀಗೆ ಇನ್ನೂ ಅನೇಕ ಗ್ರಾಮೀಣ ಪ್ರತಿಭೆಗಳನ್ನು ನಾವು ಕ್ರೀಡಾ ಕ್ಷೇತ್ರದಲ್ಲಿ ಕಾಣಬಹುದು ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಶಿಲ್ಪಾ ಫೌಂಡೇಷನ್ ನಿರ್ದೇಶಕರಾದ ವಿನಯ್ ಕೋಣಂದೂರು, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಮಧು ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುನಿಲ್ ಶೆಟ್ಟಿ ಹಾಗೂ ಮಹೇಶ್ ಗೌಡ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯ ನಾಯಕ್, ಉಪಾಧ್ಯಕ್ಷರಾದ ಸುಮಾ ಸುಬ್ರಮಣ್ಯ, ಶಾಲೆಯ ಮುಖ್ಯೋಪಾಧ್ಯಾಯರಾದ ಜೆ. ನಾಗರಾಜ ಹಾಗೂ ಶಿಲ್ಪಾ ಫೌಂಡೇಷನ್ ತಂಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post