ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಕೌಸಲ್ಯಾ ರಾಮ |
ಬೆಂಗಳೂರಿನ #Bengaluru ಉದ್ಯಮಿ ಜಿ.ಜಿ. ಉದಯ್ ಮತ್ತು ಧನಲಕ್ಷ್ಮೀ ಉದಯ್ ಅವರ ಸುಪುತ್ರಿ, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಕಲಾಶಾಲೆಯ ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ಅವರ ಹೆಮ್ಮೆಯ ಶಿಷ್ಯೆ ದಿಯಾ ಉದಯ್ ಭರತನಾಟ್ಯ #Bharatanatya ರಂಗಪ್ರವೇಶಕ್ಕೆ ಈಗ ಅಣಿಯಾಗಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಬಿಎ (ಬಿಜಿನೆಸ್ ಅನಾಲಿಟಿಕ್ಸ್) ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ದಿಯಾ, ನೃತ್ಯವನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿ, ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಕ್ರಮಿಸುತ್ತಿರುವುದು, ಸತತ ಸಾಧನೆಯಿಂದ ಮುನ್ನುಗ್ಗುತ್ತ, ಬದುಕಿನ ಸುವರ್ಣ ಪುಟಗಳಿಗೆ ವರ್ಣರಂಜಿತ ಅಧ್ಯಾಯಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಸಂಗತಿ.

ಹಿಮ್ಮೇಳದ ಸಾಥ್
ದಿಯಾ ಉದಯ್ ರಂಗಪ್ರವೇಶಕ್ಕೆ #Rangapravesha ಕಲಾ ರಂಗದ ವಿದ್ವನ್ಮಣಿಗಳು ಹಿಮ್ಮೇಳದಲ್ಲಿ ಸಾಥ್ ನೀಡಲಿದ್ದಾರೆ. ಗುರು ಮತ್ತು ಹಿರಿಯ ನೃತ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ನಟುವಾಂಗ, ವಿದ್ವಾನ್ ಬಾಲಸುಬ್ರಹ್ಮಣ್ಯ (ಗಾಯನ), ವಿದ್ವಾನ್ ಜಿ. ಗುರುಮೂರ್ತಿ (ಮೃದಂಗ), ವಿದ್ವಾನ್ ಪ್ರಾದೇಶ ಆಚಾರ್ (ಪಿಟೀಲು)ಮತ್ತು ಪ್ರಸನ್ನ ಕುಮಾರ (ರಿದಂ ಪ್ಯಾಡ್)ನಲ್ಲಿ ಸಹಕರಿಸಿ ನೃತ್ಯಾರಾಧನೆಗೆ ಮೆರಗು ನೀಡುತ್ತಿರುವುದು ಬಹು ವಿಶೇಷ.
ನರ್ತನ ಪ್ರತಿಭೆ
ಶೃಂಗೇರಿ #Sringeri ಸಮೀಪದ ಕಿಗ್ಗಾ ಮೂಲದ ಉದಯ್ ಮತ್ತು ಧನಲಕ್ಷ್ಮೀ ಅವರ ಪ್ರಥಮ ಪುತ್ರಿ ದಿಯಾ ನರ್ತನಕ್ಕಾಗಿಯೇ ಜನ್ಮ ತಾಳಿದ ಪ್ರತಿಭೆ. ಇದು ಅತಿಯಶಯೋಕ್ತಿ ಮಾತೇನೂ ಅಲ್ಲ. ದಿಯಾಳ ನೃತ್ಯದ #Dance ಓಘವನ್ನು ಗಮನಿಸಿದ ಯಾರಾದರೂ ಇದನ್ನು ಸಮ್ಮತಿಸಲೇ ಬೇಕು. ಆ ಮಟ್ಟಿಗಿನ ಕಲಾವಂತಿಕೆ ಈಕೆಯಲ್ಲಿ ಅಂತರ್ಗತವಾಗಿರುವುದು, ಪವಿತ್ರ ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಅದು ಅನಾವರಣಗೊಳ್ಳಲು ದೈವ ಕೃಪೆ ಈಕೆಗೆ ಒದಗಿಬಂದಿರುವುದು ಪೂರ್ವ ಜನ್ಮದ ಸುಕೃತವೇ ಆಗಿದೆ.

ಮಗಳ ನೃತ್ಯದ ಹೆಜ್ಜೆಗಳನ್ನು ಎಳವೆಯಲ್ಲೇ ಗುರುತಿಸಿದ ಆಕೆಯ ತಂದೆ ಉದಯ್ ಅವರು, ಫ್ಯಾನ್ಸಿ ಡ್ರಸ್ ಹಾಕಿ ವೇದಿಕೆ ಪ್ರವೇಶ ಮಾಡಿಸಿದರು. ಹತ್ತಾರು ಕಡೆ ದಿಯಾಳನ್ನು ಕರೆದೊಯ್ದು, ಜಾನಪದ ಗೀತೆ, ಭಕ್ತಿ ಸಂಗೀತಕ್ಕೆ ನರ್ತನ ಮಾಡುವ ಬಾಲೆಯನ್ನು ಬೆಂಬಲಿಸಿದರು. ತಾವೇ ಸಮಯ ಮಾಡಿಕೊಂಡು ಹಲವು ಸಭೆ, ಸಮಾರಂಭ, ಉತ್ಸವ ಮತ್ತು ಸಮ್ಮೇಳನಗಳಲ್ಲಿ ದಿಯಾಗೆ ಡಾನ್ಸ್ ಮಾಡಲು ಬೆನ್ನೆಲುಬಾಗಿ ನಿಂತರು. ಬಹುಮಾನ ಬಂದಾಗ ಮೊದಲು ತಾವೇ ಸಂಭ್ರಮಿಸಿ, ದಿಯಾಗೆ ಇನ್ನಷ್ಟು ಉತ್ತೇಜನ ನೀಡಿದರು. ಶಾಲಾ ಶಿಕ್ಷಣದೊಂದಿಗೆ ದಿಯಾಗೆ ಶಾಸ್ತ್ರೀಯ ಭರತನಾಟ್ಯ #Bharatanatya ಕಲಿಸಬೇಕು ಎಂಬ ಉತ್ಕಟ ಹಂಬಲ ಅವರಲ್ಲಿ ಮೂಡಿತು.
ನೃತ್ಯ ಗುರು ಡಾ. ಸುಪರ್ಣಾ ವೆಂಕಟೇಶ್ ಅವರ ಮಡಿಲಿಗೆ 3 ವರ್ಷದ ಬಾಲಕಿ ದಿಯಾಳನ್ನು ನರ್ತನ ಅಭ್ಯಾಸಕ್ಕೆ ಸಮರ್ಪಣೆ ಮಾಡಿಬಿಟ್ಟರು. ಸಮರ್ಥ ಗುರುವೆಂದೇ ಖ್ಯಾತರಾಗಿರುವ ಸುಪರ್ಣಾ ಅವರು ಬಾಲ ಪ್ರತಿಭೆಯ ಕಲಾಸಕ್ತಿ ಗುರುತಿಸಿ, ವಿದ್ಯೆಯನ್ನು ಧಾರೆ ಎರೆಯಲು ಸಂಕಲ್ಪ ತೊಟ್ಟರು. ಗುರು-ಶಿಷ್ಯರ ಪವಿತ್ರ ಬಾಂಧವ್ಯ ಹಿಮಾಲಯದ ಎತ್ತರಕ್ಕೆ ಬೆಳೆಯಿತು. ದಿಯಾಳ ಶ್ರದ್ಧೆ, ಆಸಕ್ತಿ, ಉತ್ಸಾಹ ಮತ್ತು ಕಲಿತದ್ದನ್ನು ಸಮರ್ಥವಾಗಿ ಗುರುವಿಗೆ ಒಪ್ಪಿಸುವ ಬದ್ಧತೆಗಳೇ ಆಕೆಯನ್ನು ಒಬ್ಬ ಯುವ ಕಲಾವಿದೆಯನ್ನಾಗಿ ರೂಪಿಸಿದವು.

ಜ್ಯೂನಿಯರ್, ಸೀನಿಯರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಉತ್ತೀರ್ಣಳಾದ ದಿಯಾಗೆ ಹಲವು ವೇದಿಕೆಗಳು ಮುಕ್ತವಾದವು. ಪ್ರತಿ ಹಂತದಲ್ಲೂ ತನ್ನನ್ನು ಹೆತ್ತವರು ಮತ್ತು ಪಾಠ ಕಲಿಸಿದ ಗುರುಗಳನ್ನು ಧನ್ಯತೆಯಿಂದ ಸ್ಮರಿಸಿಕೊಂಡೇ ನೃತ್ಯ ಆರಂಭಿಸುವ ದಿಯಾ ಕಲಾ ರಂಗದಲ್ಲಿ ಹಿಂದಿರುಗಿ ನೋಡಲೇ ಇಲ್ಲ.
ದಾಸರು ಹೇಳುವಂತೆ ಸಂಪೂರ್ಣವಾಗಿ ‘ಗುರುವಿನ ಗುಲಾಮ’ ರಾಗಿ ನೃತ್ಯದ ಹೆಜ್ಜೆಗಳನ್ನು ಕರಗತ ಮಾಡಿಕೊಂಡ ದಿಯಾಗೆ ಶಾಲೆಯುಲ್ಲಿ ಪ್ರತಿಭಾ ಕಾರಂಜಿ, ಅಂತರ ಶಾಲೆ, ಕಾಲೇಜು ನೃತ್ಯ ಸ್ಪರ್ಧೆ, ವಾರ್ಷಿಕೋತ್ಸವ ಸೇರಿದಂತೆ ಹತ್ತಾರು ವೇದಿಕೆಗಳಲ್ಲಿ ಸೈ ಎನಿಸಿಕೊಂಡು ಚಪ್ಪಾಳೆ, ಪ್ರಶಸ್ತಿ, ಬಹುಮಾನ, ಟ್ರೋಫಿಗಳು ಗರಿ ಮೂಡಿಸಿದವು. ಕರುನಾಡಿನ ವೇದಿಕೆ ಮಾತ್ರವಲ್ಲ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರದ ಪ್ರತಿಷ್ಠಿತ ಸಂಘ- ಸಂಸ್ಥೆಗಳಲ್ಲೂ ನೃತ್ಯ ಪ್ರಸ್ತುತಿ ಮಾಡುವ ಅವಕಾಶ ಒದಗಿಬಂದಿತು. ಯೋಗ ಮತ್ತು ಕಲಾ ಪ್ರಸ್ತುತಿ ಯೋಗ್ಯತೆಗಳು ಒಂದೆಡೆ ಮಿಲನಗೊಳ್ಳುವದು ಬಹು ಅಪರೂಪ. ಅಂಥ ಅನುರೂಪ ಮತ್ತು ಅವಕಾಶ ದಿಯಾ ಪಾಲಿಗೆ ದೊರಕಿದ್ದು ಮಹತ್ವದ ಸಂಗತಿಯೇ ಸರಿ.
ಸಾಲು ಸಾಲು ಪ್ರಶಸ್ತಿ- ಪುರಸ್ಕಾರ
ಭರತನಾಟ್ಯ ಎಂಬುದು ಬಹು ಆಕರ್ಷಕ ಪ್ರದರ್ಶನ ಕಲೆ. ಅದನ್ನು ಸಿದ್ಧಿ ಮಾಡಿಕೊಳ್ಳಲು ಸತತ ಪರಿಶ್ರಮ ಮತ್ತು ಸಮಯದ ತ್ಯಾಗವೂ ಬೇಕು. ಅದಕ್ಕೆ ಬದ್ಧವಾಗಿ ದೇಹ ಮತ್ತು ಮನಸ್ಸುಗಳನ್ನು ನರ್ತನಕ್ಕೆ ಅಣಿಗೊಳಿಸಿಕೊಂಡ ದಿಯಾಗೆ ಗುರುವಿನ ಕರುಣಾ, ಕೃಪಾ ಕಟಾಕ್ಷವೂ ವರವಾಗಿ ಪ್ರಾಪ್ತವಾಯಿತು. ಅದರ ಫಲವಾಗಿ ನೃತ್ಯಾರಾಧನೆಗೆ ಹಲವು ಸಂಘ- ಸಂಸ್ಥೆಗಳು ಗೌರವ, ಮಾನ್ಯತೆ, ಬಿರುದು ಮತ್ತು ಸನ್ಮಾನಗಳನ್ನು ವಿಶೇಷ ಸಂದರ್ಭದಲ್ಲಿ ಪ್ರದಾನ ಮಾಡಿದವು ಎಂಬುದಿಲ್ಲಿ ಉಲ್ಲೇಖನೀಯ.

ಕಥಕ್‌ನಲ್ಲೂ ವಿಶೇಷ ಆಸಕ್ತಿ
ಭರತನಾಟ್ಯದೊಂದಿಗೆ ಕಥಕ್ #Kathak ನೃತ್ಯವನ್ನೂ ದಿಯಾ ಕಲಿಯುತ್ತಿರುವುದು ಗಮನಾರ್ಹ ಸಂಗತಿ. ಮೊದಲಿಗೆ ಗುರು ಮೈಸೂರು #Mysore ನಾಗರಾಜರಲ್ಲಿ ಕಥಕ್ ಪಾಠ ಹೇಳಿಸಿಕೊಂಡ ಈಕೆ ಈಗ ಶ್ವೇತಾ ವೆಂಕಟೇಶ್ ಬಳಿ ಕಥಕ್ ಅಭ್ಯಾಸ ಮುಂದುವರಿಸಿದ್ದಾರೆ. ಕಲೆಯ ಒಂದು ಲಹರಿಯನ್ನು ಸಮರ್ಥವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಒಗ್ಗಿಕೊಂಡರೆ, ಬದುಕನ್ನು ಸಮರ್ಪಿಸಿಕೊಂಡರೆ ಪೂರಕ ಕಲಾ ಪ್ರಕಾರಗಳೂ ಸಿದ್ಧಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಯುವ ಚೇತನ ದಿಯಾ ಒಂದು ದಿಟ್ಟ ಉದಾಹರಣೆಯಾಗಿ ಕಲಾ ಲೋಕದಲ್ಲಿ ಪ್ರತಿಭಾಶಾಲಿಯಾಗಿ ಮಿಂಚುತ್ತಿದ್ದಾಳೆ.

ಮಕ್ಕಳು ಪ್ರತಿಭಾಶಾಲಿಗಳಾಗಬೇಕು ಎಂದರೆ ಪಾಲಕರು ನೂರಕ್ಕೆ ನೂರು ಉತ್ಸಾಹಶೀಲರಾಗಿರಬೇಕು. ಇದಕ್ಕೆ ಉದಯ್ ಅನ್ವರ್ಥ.
ಶೃಂಗೇರಿ ಸಮೀಪದ ಕಿಗ್ಗಾದಿಂದ ಆರಂಭವಾದ ಅವರ ಕ್ರಿಯಾಶೀಲತೆ ರಾಜಧಾನಿಯಲ್ಲೂ ಪ್ರಕಾಶಮಾನವಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಭಾಷಣ, ಗಾಯನ, ಜಾನಪದ ನೃತ್ಯದ ಪ್ರತಿಭೆಯಾಗಿದ್ದ ಉದಯ್, ಯುವಜನ ಮೇಳ, ಶಾಲಾ- ಕಾಲೇಜು ವಾರ್ಷಿಕೋತ್ಸವ ಇತ್ಯಾದಿಗಳಲ್ಲಿ ಪಾರಮ್ಯ ಮೆರೆದವರು.

ಶೃಂಗೇರಿ ಬಿಸಿಎಂ ಕಾಲೇಜಿನಲ್ಲಿ ಹೆಮ್ಮೆಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡವರು. ಮಲೆನಾಡಿನ ಹತ್ತಾರು ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡವರು. ಬೆಂಗಳೂರಿಗೆ ಬಂದು ನೆಲಸಿದ ನಂತರವೂ ಅವರ ಉತ್ಸಾಹ ಕುಗ್ಗಲಿಲ್ಲ. ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲ ಮಿತ್ರರ ತಂಡವನ್ನೇ ಅವರು ಹೊಂದಿದ್ದಾರೆ. ಅವರ ಈ ಉತ್ಸಾಹ- ಹುಮ್ಮಸ್ಸು ಮತ್ತು ಚೇತೋಹಾರಿತನವೇ ಮಗಳು ದಿಯಾಗೆ ಮಾದರಿ.
ಮಗಳ ಪ್ರತಿಯೊಂದು ಸಾಧನಾ ಹೆಜ್ಜೆಯಲ್ಲೂ ಅಪ್ಪನಾದ ಉದಯ ಅವರು ಭರವಸೆಯ ಬೆಳಕಾಗಿದ್ದಾರೆ. ಮಗಳು ಬೆಳಗಲಿ ಎಂದು ಬೆವರು ಹರಿಸಿದ್ದಾರೆ. ಬದುಕಿನ ಸ್ವಂತ-ಸುಖ ಘಳಿಗೆಗಳನ್ನು ತ್ಯಾಗ ಮಾಡಿದ್ದಾರೆ. ಕಲಾ ಗುರು ಪರಂಪರೆಗೆ ವಿಧೇಯರಾಗಿದ್ದಾರೆ. ಕುಟುಂಬದಲ್ಲಿ ಪತ್ನಿಯ ಸಮಗ್ರ ಸಹಕಾರ ಪಡೆದು ಇಬ್ಬರು ಪುತ್ರಿಯರನ್ನು ಕಲಾ ಲೋಕದ ಸಾಧಕಿಯರನ್ನಾಗಿ ಮಾಡುವಲ್ಲಿ, ವಿದ್ವಜ್ಜನರ ಮೆಚ್ಚುಗೆಗೆ ಪಾತ್ರರನ್ನಾಗಿಸುವಲ್ಲಿ ‘ಪಥಿ ಪಥಿ ಗುಣಸಾಂದ್ರ’ ರಂತೆ ಇದ್ದಾರೆ. ಇಂಥ ತಂದೆಯನ್ನು ಪಡೆಯುವ ಭಾಗ್ಯ ದಿಯಾಗೆ ದೊರೆತಿರುವುದೂ ಒಂದು ಯೋಗವೇ ಆಗಿದೆ ಎನ್ನಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post