ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ಶಿವಮೊಗ್ಗ–ಬೆಂಗಳೂರು ವಿಮಾನ ಮಾರ್ಗವನ್ನು ಸೇರಿಸಿ, ವಿಮಾನ ಸೇವೆಯನ್ನು ಶೀಘ್ರದಲ್ಲೇ ಮರುಪ್ರಾರಂಭಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ವಿನೋಬನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದುದೇ ವಿಮಾನ ಸೇವೆ ಸ್ಥಗಿತಗೊಳ್ಳಲು ಪ್ರಮುಖ ಕಾರಣ ಎಂದು ಹೇಳಿದರು. ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ VGF (ವಯಬಿಲಿಟಿ ಗ್ಯಾಪ್ ಫಂಡ್) ಮೂಲಕ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿರುವುದು ಸೇವೆಗೆ ಅಡ್ಡಿಯಾಗಿದೆ ಎಂದು ಆರೋಪಿಸಿದರು.
Also Read>> ವಿಶ್ವ ಪರಿಸರ ದಿನ | ಯುವಕರಲ್ಲಿ ಗಿಡ ನೆಡುವ ಮನೋಭಾವ ಬೆಳೆಸಬೇಕು | ಹರತಾಳು ಹಾಲಪ್ಪ
ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಿಗೆ ₹20–25 ಕೋಟಿ ಸಬ್ಸಿಡಿ ನೀಡಿರುವ ರಾಜ್ಯ ಸರ್ಕಾರ, ಶಿವಮೊಗ್ಗಕ್ಕೆ ಮಾತ್ರ ತಾರತಮ್ಯ ತೋರಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇಂಡಿಗೋ ಮತ್ತು ಸ್ಪೈಸ್‌ಜೆಟ್ ವಿಮಾನ ಸೇವೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರವೂ ಅರ್ಜಿ ಸಲ್ಲಿಸಿರುವುದಾಗಿ ಅವರು ಹೇಳಿದರು.
ರಾಜ್ಯ ರಾಜಕೀಯದ ಬಗ್ಗೆ ಪ್ರತಿಕ್ರಿಯೆ
ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರದ ಬಗ್ಗೆ ಆರಂಭದಲ್ಲಿ ನಿರೀಕ್ಷೆ ಇದ್ದರೂ, ಅದು ಈಡೇರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
“ಈಗಷ್ಟೇ ಸರ್ಕಾರ ರಚನೆಯಾಗಿದೆ. ತಕ್ಷಣ ಟೀಕೆ ಮಾಡುವುದಿಲ್ಲ. ಆದರೆ ಸರ್ಕಾರ ಜನರಲ್ಲಿ ವಿಶ್ವಾಸ ಮೂಡಿಸುವ ಆಡಳಿತ ನೀಡಬೇಕು. ಕೆಲವು ಬೆಳವಣಿಗೆಗಳು ವಿಶ್ವಾಸದ ಕೊರತೆಯನ್ನು ತೋರಿಸುತ್ತಿವೆ” ಎಂದು ಅವರು ಅಭಿಪ್ರಾಯಪಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news




















