ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸನಾತನ ಧರ್ಮ ಗುರುವನ್ನೇ ಅವಲಂಭಿತವಾಗಿದೆ. ದೇವತೆಗಳು ಕೂಡ ಗುರುವಿನ ಮಾರ್ಗದರ್ಶನ ಪಡೆಯುವ ದಿನವೇ “ಗುರುಪೂರ್ಣಿಮೆ”ಯಾಗಿದೆ. `ಗು’ ಎಂದರೆ ಕತ್ತಲು `ರು’ ಎಂದು ಕಳೆಯುವವ ಎಂದರ್ಥ. ಕತ್ತಲಿನಿಂದ ಬೆಳಕಿಗೆ ತರುವವರೇ `ಗುರು’ ಎಂದು ಶ್ರೀ ಅಖಿಲಾಂಡ ಕೋಟಿ ಶ್ರೀ ನಾಗಕಾಳಿಕ ದುರ್ಗಾ ಚಾಮುಂಡೇಶ್ವರಿ ಮಹಾಸಂಸ್ಥಾನ ಪೀಠದ ಸದ್ಗುರು ಶ್ರೀ ಶಿವಾನಾಗಪಾರ್ಥ ಅವಧೂತ ಗುರು ಮಹಾರಾಜರು ತಿಳಿಸಿದ್ದಾರೆ.
ಅವರು ಇಂದು ಶ್ರೀ ಕೋಟೆ ಮಾರಿಕಾಂಬ ದೇವಾಲಯದ ಆವರಣದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಮೃತ್ಯುಂಜಯ ಹೋಮ ಹಾಗೂ ವಿಶೇಷ ಪೂಜಾನುಷ್ಠಾನ, ಪೂರ್ಣಾಹುತಿ, ಅವಧೂತರಿಗೆ ತುಲಾಭಾರ, ಗುರುಗಳಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಭಗವಂತ ಮತ್ತು ಗುರು ನಡೆದುಕೊಂಡು ಬರುತ್ತಿದ್ದರೆ ಮೊದಲು ಗುರುವಿಗೆ ನಮಿಸಿ ನಂತರ ದೇವರಿಗೆ ನಮಸ್ಕರಿಸುತ್ತಾರೆ. ಕಾರಣ ಹರ ಮುನಿದರೆ ಗುರು ಕಾಯುತ್ತಾನೆ. ಗುರು ಮುನಿದರೆ ಭಗವಂತನೂ ನೆರವಿಗೆ ಬರುವುದಿಲ್ಲ. ಗುರುವಿನ ಮಾರ್ಗದರ್ಶನ ಪಡೆಯುವಾಗ ಗುರುವಿನ ಗುಲಾಮನಾಗಲೇಬೇಕು ಎಂದರು.
Also read>> ಗೃಹಜ್ಯೋತಿ ಮರು ಪರಿಷ್ಕರಣೆಗೆ ಹೆಚ್ಚಿನ ಕಾಲಾವಕಾಶ ನೀಡಿ: ಕರವೇ ಸಿಂಹಸೇನೆ ಮನವಿ
ಭಗವಂತನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಅದರಂತೆ ನಾನೂ ಕೂಡ ಈ ಸ್ಥಾನ ತಲುಪಿದ್ದೇನೆ. ಇತ್ತೀಚಿನ ದಿನಗಳಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಹೊಡೆಯುವ, ಬೈಯ್ಯುವ ಹಾಗಿಲ್ಲ ಆದರೆ ಹಿಂದೆ ಗುರು-ಶಿಷ್ಯರ ಸಂಬಂಧ ಆತ್ಮೀಯತೆಯ ಸಂಬಂಧವಾಗಿತ್ತು. ಗುರುಗಳು ಬಡಿದು ಹೇಳುವುದು ಜೀವನ ಪರಿವರ್ತನೆಗೆ ಎಂದು ತಿಳಿಯುತ್ತಿದ್ದರು. ಆದರೆ ಈಗ ಹಾಗಿಲ್ಲ. ಮನುಷ್ಯನ ಜೀವನ ಪರಿವರ್ತನೆಯಾಗಬೇಕಾದರೆ ಗುರು-ಹಿರಿಯರಿಂದ ಕಲಿಯುವುದು ತುಂಬಾ ಇದೆ. ಅವರ ಆಶೀರ್ವಾದ ಬೇಕೇ ಬೇಕು. ಶ್ರೀಕೃಷ್ಣ ಪರಮಾತ್ಮ ಗೀತೆಯನ್ನು ಬರೀ ಪಾರ್ಥನಿಗಷ್ಟೇ ಭೋದಿಸಿಲ್ಲ. ಪರೋಕ್ಷವಾಗಿ ಇಡೀ ಲೋಕಕ್ಕೆ ಉಪದೇಶಿಸಿದ್ದಾರೆ. ಆದ್ದರಿಂದ ಇವತ್ತಿನ ಮಕ್ಕಳಿಗೆ ಭಗವದ್ಗೀತೆಯ ಸಾರ ತಿಳಿಸಬೇಕು. ಗುರುಗಳ ಮೌಲ್ಯವನ್ನು ಹೇಳಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಮೋದ್, ಶಿಲ್ಪ, ಪರಮೇಶ್, ನಂದನ್, ಶೃತಿ, ಗೀತಾಸತೀಶ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









