ಕನ್ನಡ ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಅನನ್ಯ. ಐದು ಶತಮಾನಗಳ ಹಿಂದೆಯೇ ವೈದಿಕ ವಿದ್ವನ್ಮಣಿಗಳಿಗೆ ಕನ್ನಡವೆಂದರೆ ಮೈಲಿಗೆಯೆಂದು ಮೂಗುಮುರಿಯುತ್ತಿದ್ದ ಕಾಲದಲ್ಲಿ, ಪೀಠಾಧಿಪತಿಗಳು ಸಂಸ್ಕೃತ ಬಿಟ್ಟು ಬೇರೆ ಭಾಷೆಯನ್ನು ಉಪಯೋಗಿಸುವುದು ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಶ್ರೀಪಾದರಾಜರು ಕನ್ನಡಕ್ಕೆ ಅಗ್ರಪಟ್ಟಿ ಕಟ್ಟಿ ಸಿದ್ಧಾಂತವನ್ನು ಸಾಹಿತ್ಯವನ್ನು ಬದುಕಿನ ಮೌಲ್ಯವನ್ನು ಕನ್ನಡದಲ್ಲೇ ಪ್ರಕಟಿಸಿದರು. ತಮ್ಮ ಗಂಡುಧೈರ್ಯದಿಂದ ಕನ್ನಡತನ ಮಹತ್ವವನ್ನು ನಾಡು ನಾಡೇ ಮೊಳಗಿ ರೋಮಾಂಚನಗೊಳ್ಳುವಂತೆ ಪದ ಪದ್ಯ ಸುಳಾದಿ ಉಗಾಭೋಗಗಳನ್ನು ಮೂಲಕ ಸಾರಿ ಹರಿದಾಸ ಸಾಹಿತ್ಯದ ಹರಿಕಾರರಾದರು.
ಶ್ರೀಪಾದರಾಜರು ಸಂಭ್ರಮ ಸಡಗರಗಳ ಸಮಾರಂಭಗಳಲ್ಲಿ ಪೂಜೆ ಉತ್ಸವಗಳ ವೈಭವ ವಿಜೃಂಭಣೆಗಳಲ್ಲಿ ಕನ್ನಡದಲ್ಲಿ ಕೀರ್ತನೆಯನ್ನು ಹಾಡುವ ನರ್ತನಮಾಡುವ ಗಾಯಕರ ಭಾಗವೋತ್ತಮರ ತಂಡವೊಂದನ್ನು ಸಂಘಟಿಸಿ ಹರಿದಾಸ ಸಂಸ್ಕೃತಿಯನ್ನು ನಿರ್ಮಾಣಮಾಡಿದರು.
ಕನ್ನಡ ಭಾಷೆಯಲ್ಲಿ ಹರಿದಾಸ ಸಾಹಿತ್ಯ ಕುಸುಮ ಮಾಲೆ ಮಾಲೆಯಾಗಿ ಹಬ್ಬುವಂತೆ ಮಾಡಿದ ಮಹಾನ್ ತಪಸ್ವಿ ಶ್ರೀ ಶ್ರೀಪಾದರಾಜರು.ವೈದಿಕ ಪರಂಪರೆ ಹಿನ್ನೆಲೆಯಲ್ಲಿ ಬೆಳೆದು ಬಂದ ದಾಸ ಸಾಹಿತ್ಯವು ತನ್ನ ದೇದೀಪ್ಯ ಪ್ರತಿಭೆಯಿಂದಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಹಾಗೂ ನೀಡುತ್ತಲಿದೆ. ಉದಾತ್ತ ವಿಚಾರಗಳನ್ನು ಹೊಂದಿದ ಈ ದಾಸ ಸಾಹಿತ್ಯ ಪ್ರಕಾರವು ವ್ಯಕ್ತಿಯ ದಿನ ನಿತ್ಯದ ಜೀವನಕ್ಕೆ ಪ್ರೇರಣೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಪಾದರಾಜರು ದಾಸ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಅವಲೋಕಿಸೋಣ.
ಗಾನದಲ್ಲಿ ಕಲಿಯುಗದಿ ಕೇಶವನೆನಲು ಕೈಗೊಂಡುವನೊ ರಂಗವಿಠಲ ಎಂದು ತಿಳಿದು ಹೇಳಿದ ಹರಿದಾಸರ ಮುಂಚೂಣಿಯಲ್ಲಿ ಚಿರಂತನವಾಗಿ ನೆಲೆಗೊಳ್ಳುತ್ತಾ ಅಜ್ಞರನ್ನು ಯಾವತ್ತೂ ತಮ್ಮ ವಾತ್ಸಲ್ಯ ಕೃಪೆಗಳಿಂದ ಹರಸಿ, ಬದುಕಲ್ಲಿ ಹಾರೈಸುವ ಹಿರಿಯ ಹರಿಭಕ್ತ ಚೇತನರು ಮೂಡಲಬಾಗಿಲಿನ ಪರಮ ಪೂಜ್ಯ ಶ್ರೀಪಾದರಾಜರು.
ವ್ಯಾಸಕೂಟ-ಸುಜ್ಞಾನ ಸಂಪದ
ಮಹಾ ತಪಸ್ವಿ ಸಕಲ ಶಾಸ್ತ್ರ ವಿಶಾರದ ಸುಮಧ್ವ ಸಿದ್ದಾಂತ ವಿಧ್ವಾಂಸ ಮಹಾರಾಜ ಮಹಾಜನ ಪೂಜಿತ ವಿರಾಜಿತ ಶ್ರೀಪಾದರಾಜರು ಸಕಲ ತೀರ್ಥ ಕ್ಷೇತ್ರ ಸಂಚಾರ ಮಾಡಿ ವಾದಿಗಳನ್ನು ಎದುರಿಸಿ ಮಧ್ವ ಸಿದ್ದಾಂತ ಪದ್ಧತಿಯನ್ನು ಸ್ಥಾಪಿಸಿ ಸಕಲ ಜನ ಸಂಪದಕ್ಕೆ ಶಾಂತಿ ನೆಮ್ಮದಿ ಸಾಮರಸ್ಯ ತಂದಿತ್ತ ಮಹಾ ಸಮಾಜ ಚೇತನರು. ಇವರು ಕರ್ನಾಟಕ ಮುಳಬಾಗಿಲನ್ನು ತಮ್ಮ ಜ್ಞಾನ ಕಾರ್ಯಕ್ಕೆ ಆಯ್ಕೆ ಮಾಡಿದುದು ಈ ನಾಡಿನ ಸುಯೋಗ. ವಿಶ್ವವಿದ್ಯಾಲಯ ಸ್ಥಾಪಿಸಿ ಪಾರಂಪಾರಿಕ ಧರ್ಮ ಸಂಸ್ಕೃತಿಯನ್ನು ತಿಳಿಸುತ್ತಾ ಜೊತೆಗೆ ಧಾರ್ಮಿಕ ಚಿಂತನಕ್ಕೆ ಮುಕ್ತ ಚರ್ಚೆಗೆ ಆಹ್ವಾನಿಸಿ ತರ್ಕ ವ್ಯಾಕರಣ ಕಾವ್ಯ ಯೋಗ ವಿಜ್ಞಾನ ಮುಂತಾದ ಆಧ್ಯಾತ್ಮ ವಿಚಾರಗಳಲ್ಲಿ ಅಧ್ಯಯನಾಸಕ್ತರಿಗೆ ಸಮರ್ಪಕವಾಗಿ ಕಲಿಸಿಕೊಂಡು ಸುವ್ಯವಸ್ಥೆಯನ್ನು ಕುಲಪತಿಗಳಾಗಿ ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ ಮಹಾಜ್ಞಾನಿಗಳು ಇವರು.
ದೇಶಾದ್ಯಂತ ಅನೇಕ ವಿದ್ಯಾರ್ಥಿಗಳು ಮುಳಬಾಗಿಲಿಗೆ ಕಲಿಕೆಗಾಗಿ ಬರುವಂತಾದುದು ಕಲಿತವರು ಜೀವಕೋಟಿಗೆ ಸುಜ್ಞಾನದ ಬೆಳಕನ್ನು ಪಸರಿಸಲು ಸಮರ್ಥವಾಗಿ ಸೇವೆ ಸಲ್ಲಿಸಲು ಪ್ರೇರಣೆ ನೀಡಿದರು. ವೇದ ಉಪನಿಷತ್ತುಗಳನ್ನು ಕುರಿತು, ನಿರಂತರ ಅಧ್ಯಯನ ನಡೆಸಿದ ವೇದ ವಿಜ್ಞಾನ ಮೂರ್ತಿ ಇವರು ವಾಗ್ವಜ್ರ ಎಂಬ ಅತ್ಯಂತ ಮಹತ್ತರ ಕೃತಿ ರಚಿಸಿದರು. ತಮ್ಮಲ್ಲಿ ಅಧ್ಯಯನಕ್ಕಾಗಿ ಬಂದ ಮಹಾಚೇತನ ವ್ಯಾಸರಾಜರಂತಹ ವೇದಾಂತರತ್ನವನ್ನು ಕರ್ನಾಟಕ ಧರ್ಮ ಸಾಹಸ ಸಾಹಿತ್ಯ ಸಂಸ್ಕøತಿ ನವಶಕ್ತಿಗೆ ನೀಡಲು ಆದೇಶಿಸಿದ ಮುನ್ನಡೆಸಿದ ಸಮರ್ಥ ಮಾರ್ಗದರ್ಶಿ ಗುರುವರ್ಯರು ಶ್ರೀಪಾದರಾಜರ ಸಮಗ್ರ ವಿಚಾರ ಧಾರೆಯ ಹೊಂಬೆಳಕನ್ನು ಯತಿಕುಲತಿಲಕ ವ್ಯಾಸರಾಜರೆಂದರೆ ಸಮಂಜಸವಾಗುವುದು ವ್ಯಾಸಕೂಟ ಬಲಪಡಿಸಿ ಸಂಸ್ಕøತ ವೇದಾಂತವನ್ನು ಶ್ರೀಮಂತಗೊಳಿಸಿದ ಧೀಮಂತರಿವರು.
ಶ್ರೀಪಾದರಾಜರ ಗುರುಕುಲದಲ್ಲಿ ಅರಳಿ ಪಸರಿಸಿದ ಮಹಾಚೇತನ ವ್ಯಾಸರಾಜರು. ಶೃತಿ ಸ್ಮøತಿ ಪುರಾಣ ವ್ಯಾಕರಣ ಛಂದಸ್ಸು ತರ್ಕ ಮೀಮಾಂಸೆಗಳಲ್ಲಿ ತಿಳುವಿಗೆ ಹೊಸ ಆಯಾಮ ನೀಡಿದರು. ವ್ಯಾಸ ಕೂಟ ವಿದ್ಯಾ ವೈಭವದ ಸುಂದರ ಅರ್ಥಪೂರ್ಣ ಜೀವನ ಧರ್ಮವಾಗುವಂತೆ ಮಾಡಿದುದು ಸಾಧನೆಯ ಸಾರ್ಥಕ್ಯ. ಅಂದಿನ ಸಂದರ್ಭದಲ್ಲಿ ಮಠಾಧಿಪತಿ ಜಗತ್ ಕಲ್ಯಾಣಕ್ಕಾಗಿ ಮಾಡಿದ ಮಹಾ ತಪಸ್ಸಿದು.
ವಿಭುದೇಂದ್ರ ತೀರ್ಥ -ಸ್ವರ್ಣವರ್ಣತೀರ್ಥರು -ಬ್ರಹಣ್ಯತೀರ್ಥ -ರಘುನಾಥ ತೀರ್ಥ- ವ್ಯಾಸರಾಜರು ವಾದಿರಾಜರು- ಪುರಂದರದಾಸರು -ಕನಕದಾಸರು ಇವರೆಲ್ಲರು ಶ್ರೀಪಾದರಾಜರ ಕಾಲದಲ್ಲಿದ್ದರು ಒಂದೇ ಕಾಲದಲ್ಲಿ ಈ ಎಲ್ಲಾ ಮಹಾತೇಜೋರೂಪಿಗಳು ಬೆಳಗಿದ್ದು, ಭುವನದ ಭಾಗ್ಯವೆಂದು ಹೇಳಬಹುದು. ಪುಟ್ಟಬಾಲಕ ಅಂದು ದನ ಕಾಯುತ್ತಾ ನೀಡಿದ ದಿಟ್ಟ ಉತ್ತರದಿಂದ ವಿಶೇಷ ಅಧ್ಯಯನದಿಂದ ಶಾಸ್ತ್ರ ವಿದ್ಯಾ ಸಂಪನ್ನನಾಗಿ ತನ್ನ ಹನ್ನೆರಡು ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದು ಧೃವನ ಅಂಶ ಭೂತರಾಗಿ ಶ್ರೀಪಾದರಾಜರಾಗಿ ಭಾರತೀಯ ಧರ್ಮ ಸಿದ್ಧಾಂತ ಪಥದಲ್ಲಿ ಹೊಂಬೆಳಕಾಗಿ ಲೋಕೋದ್ದಾರಕ್ಕೆ ಕಾರಣರಾಗಿ ಮಧ್ವಮತದ ಕೀರ್ತಿಯಾಗಿ ಯತಿಗಳ ರಾಜ ಶ್ರೀಪಾದರಾಜರಾಗಿ ಬಾಳಿದುದು ಗೌರವದ ಸಂಗತಿ.
ವಿಜಯನಗರದ ಮಂಡಲಾಧಿಪತಿ ಸಾಳ್ವನರಸಿಂಹನಂತೂ ಇವರ ಮಹಿಮೆಗೆ ಮಣಿದು ರಾಜವೈಭವದಿಂದ ಸತ್ಕರಿಸಿ ಅವರ ಆಜ್ಞಾನುಸಾರ ಅನೇಕ ದೇವ ಮಂದಿರಗಳ ಜೀರ್ಣೋದ್ಧಾರ ನವ ನಿರ್ಮಾಣ ಪುಷ್ಕರಣಿ ತಟಾಕಗಳ ನಿರ್ಮಾಣ ವೇದಾಧ್ಯಯನ ಗುರುಕುಲಗಳ ನಿರ್ಮಾಣ ಧರ್ಮ ಸಂಸ್ಕೃತಿ ರಕ್ಷಣೆಗೆ ರಚನಾತ್ಮಕ ಕ್ರಿಯಾತ್ಮಕ ಕಾರ್ಯಕಲಾಪಗಳನ್ನು ಮಾಡಿಸುತ್ತಾ ರಾಜದಂಡಕ್ಕೆ ಧರ್ಮದಂಡದ ಮೆರಗುನ್ನಿತ್ತಾ ಮಹಾಮಹಿಮರು. ಶ್ರೀಪಾದರಾಜರು ಬಾಳಿ ಬೆಳಗಿದ ಪರಿ ನೀಡಿದ ಧರ್ಮ ಸಂದೇಶ ಹಾಡಿದ ಕೀರ್ತನೆಗಳು ನಡೆದು ನಡೆಸಿದ ರೀತಿ ನಿತ್ಯ ಸತ್ಯ ಸುಂದರ ಹಾಗೂ ಲೋಕೋದ್ಧಾರಕ್ಕೆ ನಿರಂತರ ಸ್ಫೂರ್ತಿದಾಯಕವು.
ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೀಕಾರ ಪುರುಷರಾದ ಶ್ರೀಪಾದರಾಜರ ಅಂಕಿತ ರಂಗವಿಠಲ.ಶಾಸ್ತ್ರ ಗ್ರಂಥಗಳ ವ್ಯಾಸಂಗ ಸಿದ್ಧಾಂತ ಪ್ರಚಾರ ಇವೇ ಮೊದಲಾದ ಮಠಾಧಿಪತಿಗಳು ಮಾಡಬೇಕಾದ ಕಾರ್ಯ ಸಾಂಪ್ರದಾಯಕವಾಗಿ ಸಂಸ್ಕೃತದಲ್ಲಿ ಮಾಡಿದಂತೆಯೇ ಕನ್ನಡ ಹರಿದಾಸ ಸಾಹಿತ್ಯದಲ್ಲಿ ವಾತ್ಸಲ್ಯ ಭಾವದಲ್ಲಿ ಮೂಲ ಹಾಗೂ ಮಾದರಿ ಪ್ರಾಯವಾದ ಕೃತಿಗಳನ್ನು ಅವರು ರಚಿಸಿದರು.
ಶ್ರೀಪಾದರಾಜರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಚಮತ್ಕಾರಯುತ ವಾಣಿಯಿಂದ ಹರಿದಾಸ ಪಂಥಕ್ಕೆ ನಾಂದಿ ಹಾಡಿದರಲ್ಲದೇ ಶ್ರೀ ಸ್ವರ್ಣವರ್ಣತೀರ್ಥರಿಂದ ಸನ್ಯಾಸ ಪಡೆದ ತರುವಾಯ ಕನ್ನಡ ದಾಸ ಸಾಹಿತ್ಯಕ್ಕೆ ಮೆರಗನ್ನು ತಂದುಕೊಟ್ಟರು. ಇವರೇ ಮೂಲ ಸೆಲೆಯಾಗಿ ಹರಿದಾಸ ಭಕ್ತಿ ಭಾಗೀರಥಿಯನ್ನು ಹರಿಸಿದರು. ಪಂಡಿತರು ಮಾತ್ರ ತಿಳಿಯಲು ಶಕ್ಯವಾಗಿದ್ದ ಶಾಸ್ತ್ರ ಮತ್ತು ವೇದೋಪನಿಷತ್ತಿನ ವಿಚಾರಗಳ ಸಾರವನ್ನು ಆಡು ಭಾಷೆಯಾದ ಕನ್ನಡದಕ್ಕೆ ಪರಿವರ್ತಿಸಿ ಪ್ರಾರಂಭಿಕ ಸೂತ್ರರಾದರು. ಇವರ ತರುವಾಯ ಇವರನ್ನು ಅನುಸರಿಸಿ ದಾಸ ಸಾಹಿತ್ಯದ ಧ್ವಜವನ್ನು ಉಚ್ಛ್ರಾಯಸ್ಥಿತಿಗೆ ವ್ಯಾಸರಾಜರು ಕೊಂಡೊಯ್ದರು. ಶ್ರೀ ವ್ಯಾಸರಾಜರು, ವ್ಯಾಸ ದಾಸ ಸಾಹಿತ್ಯವೆಂಬ ಎರಡು ಮಾರ್ಗವನ್ನು ತೋರಿಸಿಕೊಟ್ಟರು. ಎರಡೂ ಮಾರ್ಗವು ಹರಿಯನ್ನು ಅರಿಯಲು ಸಹಕಾರಿಯಾಗುವಂತೆ ಗೃಹಸ್ಥಾಶ್ರಮಿಗಳಿಗೆ ದಾಸ ದೀಕ್ಷೆಯನ್ನು ನೀಡಿ ದಾಸ ಪಂಥವನ್ನು ಪ್ರೇರೇಪಿಸಿದರು.
ಕನ್ನಡನಾಡಿನಲ್ಲಿ ಚಿನ್ನಪಟ್ಟಣದ ಅಬ್ಬೂರಿನಲ್ಲಿ ಯತಿವರೇಣ್ಯ ಶ್ರೀ ಪುರುಷೋತ್ತಮತೀರ್ಥರ ವಾತ್ಸಲು ಪಡೆದಿದ್ದ, ತನ್ನನ್ನು ಅರಸಿ ಬಂದರೋ ಎಂಬಂತೆ ಆಗಮಿಸಿದ ಶ್ರೀ ಸ್ವರ್ಣವರ್ಣತೀರ್ಥ ಗುರುವರ್ಯರ ಪ್ರೀತಿಪಾತ್ರರಾಗಿ ಶ್ರೀಪುರುಷೋತ್ತಮ ಯತೀಂದ್ರರ ಆದೇಶದ ಮೇರೆಗೆ ಸನ್ಯಾಸ ದೀಕ್ಷೆ ಪಡೆದು ಗುರುವಿನೊಂದಿಗೆ ಗಮಿಸಿದ್ದು, ಶ್ರೀರಂಗದೆಡೆಗೆ. ಶ್ರೀರಂಗ ತಮಿಳುನಾಡಿನ ಶ್ರೀವೈಷ್ಣವ ಕ್ಷೇತ್ರ. ಆಳ್ವಾರ್ ಮಹನೀಯರು ತನ್ನ ದಿವ್ಯ ಪ್ರಬಂಧ ಪಾಶುರ ಪದ್ಯಗಳಲ್ಲಿ ಸದಾ ಹಾಡಿರುವ ಭಕ್ತ ಹೃದಯ ಕ್ಷೇತ್ರ.
ಅವರು ಸರ್ವಸಂಗ ಪರಿತ್ಯಾಗಿಗಳಾಗಿದ್ದರೂ ಅವರ ಸುಖ ಪ್ರಾರಬ್ಧದಿಂದಾಗಿ ರಾಜ ಸನ್ಯಾಸಿಯಂತೆ ವೈಭೋಗದಲ್ಲೇ ಬದುಕಿದರು, ಜೊತೆಗೆ ಅವರ ಅಸಾಧಾರಣ ವಿದ್ವತ್ತು ಹಾಗೂ ಪವಾಡದಿಂದಾಗಿ ಶ್ರೀ ರಘುನಾಥ ತೀರ್ಥರು ಅವರಿಗೆ ಶ್ರೀಪಾದರಾಜರೆಂದು ಹೆಸರಿಟ್ಟರು. ಶ್ರೀ ಮಧ್ವ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು 40 ಬಾರಿ ಪಾಠ ಹೇಳಿದ ಹಿರಿಮೆ ಇವರದ್ದು.
ಶ್ರೀಪಾದರಾಜರ ಆತ್ಮೀಯ ಶಿಷ್ಯರಾದ ಶ್ರೀ ವ್ಯಾಸರಾಜರು ಜಾತಿ ಪದ್ದತಿಯ ಸಂಕೋಲೆಯನ್ನು ಕಳಚಿ ಪುರಂದರದಾಸರು ಮತ್ತು ಶ್ರೀ ಕನಕದಾಸರು ಗೌರವಿಸಿ ಶಿಷ್ಯರನ್ನಾಗಿ ಸ್ವೀಕರಿಸಿ, ಅವರುಗಳಿಂದ ದೇವತಾಸ್ತುತಿ, ಸಮಾಜ ಸುಧಾರಣಾ ಚಿಂತನೆಗಳೇ ಮೊದಲಾದ ಗಹನ ವಿಷಯಗಳ ಮೇಲಿನ ಅನೇಕ ರಚನೆಗಳು ಲಕ್ಷಾಂತರ ಹಾಡುಗಳು, ಉಗಾಭೋಗಗಳು, ಕಾವ್ಯಗಳೇ ಮೊದಲಾದ ಕೃತಿಗಳನ್ನು ಪ್ರೋತ್ಸಾಹಿಸಿ, ತಾವೂ ಸಹ ಅಮೂಲ್ಯ ದೇವರನಾಮಗಳನ್ನು ರಚಿಸಿ, ಕನ್ನಡ ಸಾರಸ್ವತ ಭಂಡಾರದ ಅಭಿವೃದ್ಧಿಗಾಗಿ ಸಹೃದಯ ಕಾರಣಕರ್ತರಾಗಿದ್ದಾರೆ.
ಕಾಕೋಳು, ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣ.ಇಲ್ಲಿನ ಶ್ರೀಪಾದರಾಜ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದಲ್ಲಿ ಮಹಿಮಾನ್ವಿತ ಮಾಧ್ವ ತಪಸ್ವಿ , ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ ,ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರ – ಆರಾಧನಾ ( ಈ ಬಾರಿ ಜೂನ್ 16 , ಭಾನುವಾರ )ಮಹೋತ್ಸವವನ್ನು ವಿಶೇಷವಾಗಿ ಗಾನ- ಜ್ಞಾನ ಯಜ್ಞ ಪೂರ್ವಕವಾಗಿ ಗುರುಭಕ್ತಿ ಉತ್ಸವವಾಗಿ ಪಾಂಚಜನ್ಯ ಪ್ರತಿಷ್ಠಾನ – ಟಿಟಿಡಿ ಹಿಂದು ಧರ್ಮಪ್ರಚಾರ ಪರಿಷದ್ ಮತ್ತು ಆಸ್ತಾ ಕನ್ನಡ ಟಿವಿ ಸಹಯೋಗದಲ್ಲಿ ಆಚರಿಸಲಾಗುವುದು.
ಕೀರ್ತಿಶೇಷ ಶ್ರೀ ಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಅವರ ಕುಟುಂಬವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸುವ ಕಾರ್ಯಕ್ರಮವು ಇಂತಿದೆ. ಬೆಳಿಗ್ಗೆ 9.00 ಗಂಟೆಗೆ : ಮೂಲದೇವರುಗಳಿಗೆ ಪಂಚಾಮೃತ ಅಭಿಷೇಕ, ವ್ಯಾಸ ದಾಸ ವಾಙ್ಮಯ ಕೃತಿಗಳ ಪಾರಾಯಣ ಬೆಳಿಗ್ಗೆ 10.30 ರಿಂದ : ಶ್ರೀ ಶ್ರೀಪಾದರಾಜ ಮಹಿಮಾ ಉಪನ್ಯಾಸ ಮ.ಶಾ.ಸಂ. ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯ ರಿಂದ ನಂತರ ಶ್ರೀಶ್ರೀ ಪಾದರಾಜರ ಕೃತಿಗಳ ಗಾಯನ –ವಿದುಷಿ ರಶ್ಮಿ ಮಧುಸೂಧನ್ ರವರಿಂದ ಮಧ್ಯಾಹ್ನ 1.00 ಗಂಟೆಗೆ : ಮಹಾಮಂಗಳಾರತಿ , ಅಲಂಕಾರ ಪಂಕ್ತಿ , ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ವಿವರಗಳಿಗೆ 9845075250/9035618076 ಗೆ ಸಂಪರ್ಕಿಸಿ
ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು
Discussion about this post