ಸಣ್ಣ ಕೊಕ್ಕು, ಅದರ ತಲೆಯ ಮೇಲೆ ಚಂಚುವಿನಷ್ಟೇ ಉದ್ದವಾದ ಜುಟ್ಟು, ಮೈ ತಿಳಿಗಪ್ಪು, ಕುತ್ತಿಗೆ ಬಳಿ ಕೆಂಪು ಬಣ್ಣ, ಕಣ್ಣಿನ ಸುತ್ತ ಬಿಳಿವರ್ತುಲ.
ಈ ಹಕ್ಕಿ ನಮ್ಮ ಕೈದೋಟದ ಪಾರಿಜಾತ ಗಿಡದ ದಟ್ಟ ರೆಂಬೆಗಳ ರಕ್ಷಣೆಯಲ್ಲಿ ಗೂಡು ಕಟ್ಟಿಕೊಂಡಿತ್ತು. ಬೆಳಗಿನ ಕಾಲ್ನಡಿಗೆಯನ್ನು ಸಂಗಾತಿ ಸಾಕುನಾಯಿ ಕೋಕಿಯ ಸಂಗಡ ಮುಗಿಸಿ ಬರುತ್ತಿದ್ದಂತೆಯೇ ಕೇವಲ ಕೆಲವು ತಿಂಗಳ ಹಿಂದಷ್ಟೇ ನೆಟ್ಟ ಹೂಗಿಡಗಳಿಗೆ ನೀರುಣಿಸುವ ಕಾಯಕ ಇದು ನನ್ನ ಕಿರು ದಿನಚರಿ.
ಪಾರಿಜಾತದ ಗಿಡವನ್ನು ಮಗ ಸುಜಯ್ ಮತ್ತು ಸೊಸೆ ಅಮೃತಾ ನೆಟ್ಟು ವರ್ಷವಾಗಿದೆ. ಈಗ ಸಾಕಷ್ಟೂ ಎತ್ತರ ನಿಂತಿದೆ. ನೀರು ಚಿಮುಕಿಸುವಾಗ ಥಟ್ಟನೆ ಹಕ್ಕಿ ಗೂಡು ಕಂಡಿತು. ಅದರೊಳಗೆ ಎರಡು ಮೊಟ್ಟೆಗಳು. ಕೆಲವು ದಿನ ಬೆಳಗಿನ ಸಮಯ ಮೊಟ್ಟೆಗಳ ಮೇಲೆ ಕುಳಿತು ತಾಯಿ ಹಕ್ಕಿ ಕಾವು ಕೊಡುವುದನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದೆ.
ಬೆದರುಗಣ್ಣಿನಿಂದ ನೋಡುವುದು, ಕೆಲವು ದಿನವಾದ ಮೇಲೆ ನನ್ನಿಂದ ಅಪಾಯವಿಲ್ಲವೆಂದು ಅರಿತ ಮೇಲೆ ಕಣ್ಮುಚ್ಚಿ ಗೂಡೊಳಗೇ ಮೊಟ್ಟೆಗಳಿಗೆ ಕಾವುಕೊಡುವ ಅದರ ತಾಯ್ತನದ ಜವಾಬ್ದಾರಿಯನ್ನು ಅದಕ್ಕೇನೂ ತೊಂದರೆ ಕೊಡದಂತೆ ಗಮನಿಸುತ್ತಾ ಬಂದೆ.
ಈಗ ಮಳೆಗಾಲ ಕಾಲಿಟ್ಟಿದೆ, ಜೋರುಮಳೆ ಬಿದ್ದಿಲ್ಲ. ಆದರೆ ಜೋರಾಗಿ ಬೀಸುವ ಗಾಳಿಗೆ ಕಡಿಮೆಯಿಲ್ಲ. ಹೀಗೆ ಜೋರಾಗಿ ನಿನ್ನೆ ರಾತ್ರಿ ಗಾಳಿ ಬೀಸಿದೆ. ಬೆಳಿಗ್ಗೆ ನೀರುಣಿಸುವ ಎಂದು ಪೈಪ್ ಹಿಡಿದೆ. ಹಕ್ಕಿ ಗೂಡು ನೆಲದಲ್ಲಿ ಬಿದ್ದಿದೆ!
ಗೂಡನ್ನ್ನು ಕೈಯಲ್ಲೆತ್ತಿದೆ. ಅನತಿ ದೂರಕ್ಕೆ ಮೊಟ್ಟೆಯೊಡೆದು ಬಂದ ಮರಿ ಚಂಚು ಚಾಚಿ ಕೀರಲು ಅರಚುತ್ತಿತ್ತು. ಕೋಮಲವೆನ್ನಿಸುವ ರೆಕ್ಕೆಗಳು ಚಿಗುರೆಲೆಗಳಂತೆ ಕಾಣುತ್ತಿದ್ದವು. ಇನ್ನೂ ಹಸುಗಂದನ ಮೈ. ರೂಪುಗೊಳ್ಳುತ್ತಿರುವ ಪಕ್ಷಿಯ ಸಜಹ ಸ್ವರೂಪ ಪುಟ್ಟ ಪ್ಲಾಸ್ಟಿಕ್ ಮುದ್ದೆಯಂತೆ ಕಾಣುತ್ತಿತ್ತು.
ತಕ್ಷಣ ಗೂಡನ್ನು ಗಿಡದೊಳಗಿನ ಮುಂಚಿನ ಸ್ಥಾನದಲ್ಲೇ ಇರಿಸಿದೆ. ಒಂದು ಮರಿಯನ್ನು ಕೈಯಿಂದ ಸ್ಪರ್ಶಿಸದೇ ಗಿಡದ ದೊಡ್ಡ ಎಲೆಗಳಿಂದ ಕೋಮಲವಾಗಿ ಎತ್ತಿ ಗೂಡಿನೊಳ ಮೆಲ್ಲನೆ ಇರಿಸಿದೆ. ನಾನು ಮುಂಚೆ ನೋಡಿದ್ದು ಎರಡು ಮೊಟ್ಟೆಗಳು. ಇನ್ನೊಂದು ಮರಿ ಇರಲೇಬೇಕು. ಕಣ್ಣಾಡಿಸಿದೆ. ಗಿಡದ ಬುಡದಲ್ಲಿ ಇರುವೆಗಳ್ಮುುತ್ತಿದ ಮರಿಯನ್ನು ಕಂಡೆ. ತಕ್ಷಣ ದೊಡ್ಡ ಎರಡು ಎಲೆಗಳ ಮೂಲಕ ಅದನ್ನೂ ಎತ್ತಿ ಗೂಡಿನೊಳಗೆ ಇರಿಸಿದೆ. ನಂತರ ಇಡೀಗೂಡನ್ನೂ ಪಾರಿಜಾತ ಗಿಡದೊಳಗೆ ಇರಿಸಿದೆ. ಇಷ್ಟಾದ ನಂತರ ನನಗೆ ಸಮಾಧಾನವಾಯಿತು. ನಾನು ನನ್ನ ಕೆಲಸದ ನಿಮಿತ್ತ ಹೊರಹೊರಟೆ.
ಆದರೆ ಗಾಳಿ ಮಾರಾಯ ಸುಮ್ಮನಿರಬೇಕಲ್ಲ, ಮತ್ತೆ ಬೀಸಿದ… ಬೀಸಿಯೇ ಬೀಸಿದ… ಮನಸಾರೆ ಬೀಸಿದ… ಮತ್ತೆ ನಾನು ಬಂದಾಗ ನೋಡುತ್ತೇನೆ!!!
ತಾಯಿ ಹಕ್ಕಿ ಗಿಡದ ಬುಡ ಕೂತಿದೆ. ಅದರ ಸಾಸಿವೆ ಕಣ್ಣುಗಳಲ್ಲಿ ಆತಂಕ ತುಂಬಿ ತುಳುಕಿದೆ. ನನ್ನನ್ನ ಒಮ್ಮೆ ನೋಡಿತು, ಕೂಗಿತು. ನನಗೆ ಹಕ್ಕಿ ಭಾಷೆ ಅರ್ಥವಾಗಲ್ಲ. ಆದರೆ ತಾಯಿಯ ಮೂಕವೇದನೆ ಅರ್ಥವಾಯಿತು.
ಬಾಗಿ ನೋಡಿದೆ.?!? ಒಂದು ಮರಿ ಮಾತ್ರ ಕೆಳಗೆ ಜಾರಿ…. ಬಿದ್ದುಬಿಟ್ಟಿದೆ!!! ಮತ್ತೆ ಎರಡು ದೊಡ್ಡ ಎಲೆಗಳ ಮೂಲಕ ಮರಿಯನ್ನು ಎತ್ತಿ ಗೂಡಿನೊಳಗೆ ಇರಿಸಿದೆ. ಪುರ್ರನೆ ಹಾರಿಹೋದ ತಾಯಿ ಮತ್ತೆ ಗೂಡಿನತ್ತ ಧಾವಿಸಿತು. ನಿನಗೆ ಥ್ಯಾಂಕ್ಸ್ ಅನ್ನುವ ರೀತಿ ಕಿಟರ್…ಕಿಟ್ರೂ. ಎಂದು ದನಿ ಹೊರಡಿಸಿತು. ನಾನು ಅಲ್ಲಿಗೇ ಸುಮ್ಮನಾಗಲಿಲ್ಲ.
ಲೇಔಟ್ ವಾಚ್ ಮನ್ ಶಿವಣ್ಣನಿಗೆ ಫೋನ್ ಮಾಡಿದೆ. ಹಕ್ಕಿಯ ಕತೆ ಹೇಳಿದೆ. ಆತನದೂ ಮೃದುಹೃದಯ. ಹೀಗಾಗಿ ಸ್ಪಂದಿಸಿದ. ಒಂದು ದಪ್ಪದಾದ ಕೋಲು ಮತ್ತು ಅಗೆಯುವ ಹಾರೆ ತರಲು ಕೋರಿದೆ.
ಹಾರೆಯಿಂದ ಗಿಡದ ಬುಡ ಗುಂಡಿ ತೋಡಿದ. ದಪ್ಪದಾದ ಕೋಲನ್ನು ಅದರೊಳಗೆ ಇಳಿಸಿದ. ಭದ್ರಮಾಡಿ ನಿಲ್ಲಿಸಿದ. ಪಾರಿಜಾತ ಗಿಡ ಬೀಸುವ ಗಾಳಿಗೆ ಬಳುಕುತ್ತಿದ್ದರಿಂದ ಗೂಡು ಅಲುಗಾಟಕ್ಕೆ ಬಿದ್ದು ಬಿಡುತ್ತಿತ್ತು. ಕೋಲಿನ ಸಂಗಡ ಗಿಡದ ಕಾಂಡವನ್ನ ಚಳ್ಳದ ಹುರಿಯಿಂದ ಬಿಗಿದು ಕಟ್ಟಿದ. ಗಾಳಿಗೆ ಗಿಡ ಬಳುಕುವುದು ನಿಂತಿತು. ಪುಟ್ಟಹಕ್ಕಿಗಳು ಗುಕ್ಕಿಗೆ ಚಂಚು ಚಾಚುವುದನ್ನು ಎವೆಯಿಕ್ಕದೇ ನೋಡುತ್ತಿದ್ದೆ. ತಾಯಿ ಹಕ್ಕಿ ಬಂದು ಮರಿಗಳನ್ನು ತಡವಿ ಅವುಗಳ ಮೈಗೆ ಹತ್ತಿದ ಇರುವೆಗಳನ್ನೇ ಮೆಲುವಾಗಿ ಹೆಕ್ಕಿ ತೆಗೆದಿತ್ತು. ಇರುವೆಗಳನ್ನೇ ಆಹಾರವಾಗಿಸಿ ಸ್ವಚ್ಛಮಾಡಿತ್ತು ಎಂಬಲ್ಲಿಗೆ ಕೆಂಪುಮೀಸೆ ಪಿಕಲಾರ ಹಕ್ಕಿ ಗೂಡಿನ ವಾಸ್ತವ ಪ್ರಸಂಗ ಉಪಸಂಹಾರ..
ಮನದಾಳದ ಬರೆಹ: ಡಾ.ಚನ್ನಗಿರಿ ಸುಧೀಂದ್ರ
Discussion about this post