ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಯಡಿಯೂರಪ್ಪ ಮಗನನ್ನು ಸೋಲಿಸಲು ಅಮಿತ್ ಶಾ #AmitShah ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #KSEshwarappa ರೋಚಕ ಹೇಳಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಇಂದು ದೆಹಲಿಗೆ ಹೋಗಿದ್ದ ಈಶ್ವರಪ್ಪ ಅವರಿಗೆ ಅಮಿತ್ ಶಾ ಭೇಟಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಹೀಗೆ ಅಮಿತ್ ಶಾ ಭೇಟಿ ಆಗದೆ ಇರುವುದು ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂದಂತಾಗಿದೆ ಎಂದು ಹೇಳಿದರು.

ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಈ ಹಿಂದೆ ವರಿಷ್ಟರು ಏನು ಹೇಳಿದರೋ ಅದನ್ನೆಲ್ಲ ಮಾಡಿದ್ದೇನೆ. ಈ ಸಲ ಅವರ ಮಾತನ್ನು ಉಲ್ಲಂಘಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಆದರೆ ನನ್ನ ಚಿಂತೆಯನ್ನು ಅಮಿತ್ ಶಾ ದೂರ ಮಾಡಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಲು ಆಶೀರ್ವಾದ ಮಾಡಿದ್ದಾರೆ ಎಂಬುದು ನನ್ನ ನಂಬಿಕೆ ಎಂದು ಹೇಳಿದರು.

ಇದಾದ ನಂತರ ಮಂತ್ರಿಗಿರಿಗೆ ರಾಜೀನಾಮೆ ಕೊಡುವ ವಿಷಯ ಬಂದಾಗಲೂ ರಾಜೀನಾಮೆ ಕೊಡಿ ಎಂದರು. ಆಗಲೂ ಇದನ್ನು ಪಾಲಿಸಿದೆ. ಮೊನ್ನೆ ಫೋನು ಮಾಡಿ ದಿಲ್ಲಿಗೆ ಬನ್ನಿ. ಮಾತನಾಡಬೇಕು ಎಂದರು. ಅವರ ಮಾತಿಗೆ ಗೌರವ ನೀಡಿ ನಾನು ದೆಹಲಿಗೆ ಬಂದೆ. ಆದರೆ ಇಂದು ನನ್ನ ಭೇಟಿಗೆ ಅವಕಾಶ ನೀಡಬೇಕಿದ್ದ ಅವರು ಭೇಟಿ ನೀಡಿಲ್ಲ. ಇದು ನನಗೆ ಅವರು ಮಾಡಿದ ಆಶೀರ್ವಾದ. ರಾಘವೇಂದ್ರ ಅವರನ್ನು ಸೋಲಿಸಿ ಎಂಬ ಇಂಗಿತ ಎಂದರು.
ಹೀಗಾಗಿ ಇನ್ನಷ್ಟು ಉತ್ಸಾಹದಿಂದ ನಾನು ರಾಜ್ಯಕ್ಕೆ ಮರಳುತ್ತಿದ್ದೇನೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಣದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post