ಕಲ್ಪ ಮೀಡಿಯಾ ಹೌಸ್ | ಹಾವೇರಿ (ಶಿಗ್ಗಾವಿ) |
ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಆ ರೀತಿಯ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ #Basavaraja Bommai ಹೇಳಿದರು.
ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ಕೊಟ್ಟು ಮಾತನಾಡಿದರು.
ಸೆಪ್ಟಂಬರ್ 6 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಲಿದೆ. ಅದಕ್ಕೂ ಪೂರ್ವದಲ್ಲಿ ಸವಣೂರು ಶಿಗ್ಗಾವಿ ತಾಲೂಕಿನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಬೇಕೆಂದು ಎರಡೂ ತಾಲೂಕು ಅಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು ಅಪೇಕ್ಷೆ ಪಟ್ಟಿರುವುದರಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡುತ್ತಿದ್ದೇವೆ. ಹೋತನಹಳ್ಳಿ ಗ್ರಾಮದಿಂದ ಶ್ರೀಮಠದ ಆಶೀರ್ವಾದದಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇದೊಂದು ಶುಭ ಸಂಕೇತ, ಈ ಶುಭ ಸಂಕೇತದ ಅಭಿಯಾನವನ್ನು ಪ್ರತಿಯೊಂದು ಗ್ರಾಮಗಳಿಗೆ ತಲುಪಿಸಬೇಕು ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರಿರುವ ದೊಡ್ಡ ಪಕ್ಷ, ಕಳೆದ ಬಾರಿ 7 ಕೋಟಿ ಜನರು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದರು. ಈ ಬಾರಿ 10 ಕೋಟಿ ಸದಸ್ಯರನ್ನು ಮಾಡುವ ಗುರಿಯೊಂದಿಗೆ ನಮ್ಮ ರಾಷ್ಟ್ರೀಯ ನಾಯಕರು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರ ಜನಪ್ರೀಯತೆ ಎಷ್ಟಿದೆ ಎಂದರೆ, ಪಂಡಿತ್ ಜವಾಹರಲಾಲ್ ನೆಹರು ಅವರ ನಂತರ ಸತತ ಮೂರನೆ ಬಾರಿಗೆ ಪ್ರಧಾನಿಯಾಗಿರುವ ದಾಖಲೆ ಇವರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನೇತೃತ್ವದಲ್ಲಿ ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿರುವ ಪಕ್ಷ ಬಿಜೆಪಿ. ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ಮಾಡಿದರೂ ಭಾರತದ ಜನ ಹಾಗೂ ಕರ್ನಾಟಕದ ಜನರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಂದು ವಿಪರ್ಯಾಸ ಏನಂದರೆ ನಾವು ಮೂರನೇ ಬಾರಿ ಅಧಿಕಾರ ನಡೆಸುತ್ತಿರುವಾಗ 50 ಸ್ಥಾನ ಗಳಿಸಿದ್ದ ಕಾಂಗ್ರೆಸ್ 99 ಸ್ಥಾನ ಗಳಿಸಿ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.
Also read: ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ
ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಹಾವೇರಿ ಲೋಕಸಭಾ ಸದಸ್ಯನಾಗಿ ದೆಹಲಿ ಸಂಸತ್ತಿನಲ್ಲಿ ಪಾಲ್ಗೊಳ್ಳುವಂತಾಗಿದೆ. ಯಾವ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆಯೋ ಅಲ್ಲಿನ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಮತ್ತೆ ಅಧಿಕಾರ ಹಿಡಿಯಲಿದೆ. ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿಯವರು ನಾಲ್ಕನೇ ಬಾರಿಗೂ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು.
ಶಿಗ್ಗಾವಿ ಜನರನ್ನು ಮರೆಯುವ ಪ್ರಶ್ನೆಯೇ ಇಲ್ಲ
ಹೋತನಹಳ್ಳಿ ಗ್ರಾಮ ನನಗೆ ಅತ್ಯಂತ ಅಭಿಮಾನ ಇರುವ ಗ್ರಾಮ ಇಲ್ಲಿನ ಹಿರಿಯರು, ಯುವಕರು ,ಎಲ್ಲರೂ ಬಹಳ ಆತ್ಮೀಯತೆಯಿಂದ ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ ನನ್ನನ್ನು ಕಂಡಿದ್ದೀರಿ, ನಿಮಗೆ ಕೋಟಿ ಕೋಟಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಅಧಿಕಾರ ಬರುತ್ತದೆ ಹೋಗುತ್ತದೆ. ನಾನು ನಿಮ್ಮ ಶಾಸಕನೂ ಅಲ್ಲ, ಆದರೂ ನೀವೆಲ್ಲ ಬಂದಿರುವುದು ಇದೊಂದು ಪ್ರೀತಿಯ ಸಂಕೇತ ಎಂದು ನಾನು ಭಾವಿಸಿದ್ದೇನೆ. ಬಹಳಷ್ಟು ಜನರು ನಾನು ಲೋಕಸಭೆಗೆ ಹೋದಮೇಲೆ ನೀವು ನಮ್ಮನ್ನು ಬಿಟ್ಟು ಹೋದಿರಿ ಎನ್ನುತ್ತಾರೆ. ನಾನು ನಿಮ್ಮನ್ನು ಯಾವತ್ತೂ ಬಿಡುವುದಿಲ್ಲ. ನಾನು ಎಂಪಿನೇ ಆಗಬೇಕು, ಮಂತ್ರಿನೇ ಆಗಬೇಕು ಅಂತ ಇಲ್ಲ. ಏನೂ ಇಲ್ಲದಿದ್ದರೂ ಎದೆಕೊಟ್ಟು ನಿಮ್ಮ ಕೆಲಸ ಮಾಡುವ ಶಕ್ತಿಯನ್ನು ಭಗವಂತ ಹಾಗೂ ನೀವು ಕೊಟ್ಟಿದ್ದೀರಿ. ನನ್ನ ಜೀವನದ ಉಸಿರು ಇರುವವರೆಗೂ ಈ ಕ್ಷೇತ್ರದ ಜನರ ಸೇವೆಯನ್ನು ನಾನು ಮಾಡುತ್ತೇನೆ ಎಂದು ಹೇಳಿದರು.
ಶಿಗ್ಗಾವಿ ಕ್ಷೇತ್ರ ಮೊದಲು ಹೇಗಿತ್ತು ಈಗ ಹೇಗಾಗಿದೆ ಎನ್ನುವುದು ನಿಮ್ಮ ಅನುಭವಕ್ಕೆ ಬಂದಿದೆ. ಇಲ್ಲಿನ ಹಿರಿಯರಾದ ರುದ್ರಗೌಡರು ಈಗ ನಮ್ಮೊಂದಿಗಿಲ್ಲ. ಅವರು ಅಭಿವೃದ್ಧಿಯ ಬಗ್ಗೆ ಅವರದೇ ಆದ ಒಂದು ಕಲ್ಪನೆ ಇಟ್ಟುಕೊಂಡು ಕೆಲಸ ಮಾಡಿದರು. ನಾವು ಶಿಗ್ಗಾವಿ ಏತ ನೀರಾವರಿ ಯೋಜನೆ ಮಾಡಿದಾಗ ಹೋತನಳ್ಳಿ ಅತಿ ಎತ್ತರದ ಪ್ರದೇಶಕ್ಕೆ ನೀರು ತರಬೇಕು ಎಂದು ನಮಗೆ ಯಾರಿಗೂ ಕಲ್ಪನೆಯಿಲ್ಲ, ನಿಮ್ಮನ್ನೆಲ್ಲ ಕರೆದುಕೊಂಡು ಬಂದು ಹೋತನಹಳ್ಳಿ ನೀರಾವರಿ ಕೆರೆ ತುಂಬಿಸುವ ಯೋಜನೆ ಮಾಡುವಂತೆ ಮಾಡಿದ್ದಾರೆ. ನೀವು ಏನೇ ಕೆಲಸ ಹೇಳಿದರೂ ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವ ಕೆಲಸ ಮಾಡಿದ್ದೇನೆ ಎಂದರು.
ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರೆಯಬೇಕು. ಅಭಿವೃದ್ಧಿ ಕೆಲಸ ನಿರಂತರವಾಗಿ ಮುಂದುವರೆಯಬೇಕಾದರೆ ಹಲವಾರು ಸವಾಲುಗಳಿವೆ. ಇವತ್ತಿನ ಸರ್ಕಾರ ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಆ ಕುರ್ಚಿನಲ್ಲಿ ಕೂಡಲು ಹೇಗೆ ಆಗುತ್ತದೆ ಗೊತ್ತಿಲ್ಲ. ನಮಗೆ ಒಂದು ಕೆಲಸ ಹೇಳಿದರೆ ಯಾವಾಗ ಮಾಡಿದ್ದೇವೆ ಎಂದು ಚಡಪಡಿಸುತ್ತಿದ್ದೇವು. ಬರಗಾಲ ಬಂದಾಗ ರೈತರಿಗೆ ಪರಿಹಾರ ಕೊಡಲಿಲ್ಲ. ನಮ್ಮ ಕಾಲದಲ್ಲಿ ಪ್ರವಾಹ ಬಂದಾಗ ಕೇಂದ್ರ ಸರ್ಕಾರ 6 ಸಾವಿರ ಕೊಟ್ಟರೆ ನಾವು 13 ಸಾವಿರ ಕೊಟ್ಟೆವು. ನೀರಾವರಿಗೆ 25 ಸಾವಿರ ರೂ. ಕೊಟ್ಟೆವು. ವಿರೋಧ ಪಕ್ಷದಲ್ಲಿದ್ದಾಗ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ನಾವು ಡಬಲ್ ಪರಿಹಾರ ಕೊಡುತ್ತೇವೆ ಎಂದಾಗ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದರು. ಈಗ ಅವರು ಅಧಿಕಾರದಲ್ಲಿದ್ದಾರೆ. ಯಾವುದೇ ಪರಿಹಾರ ಕೊಡುತ್ತಿಲ್ಲ. ಮಳೆಯಾಗಿ ಬೆಳೆ ಹಾನಿಯಾಗಿದ್ದು, ಭತ್ತ, ಗೋವಿನ ಗೋಳ ಹಾಳಾಗಿದ್ದು, ಕೂಡಲೆ ಸಮೀಕ್ಷೆ ಮಾಡಿ ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸರ್ಕಾರದ ಬಳಿ ಹಣವಿಲ್ಲ
ನಾವಿದ್ದಾಗ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದೆವು ಅದನ್ನು ನಿಲ್ಲಿಸಿದರು. ಡಿಸೆಲ್ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದರು. ಇದು ರೈತರು ಹಾಗೂ ವಿದ್ಯಾರ್ಥಿಗಳ ವಿರೋಧಿ ಸರ್ಕಾರ ಗ್ಯಾರೆಂಟಿಯಿಂದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗ ಇಲ್ಲದಂತಾಗಿದೆ. ಹಣಕಾಸಿನ ದಿವಾಳಿತನಕ್ಕೆ ಬಂದಿದೆ. ಇದೇ ರೀತಿ ಮುಂದುವರೆದರೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗನವಾಡಿ ಕಾರ್ಯಕರ್ತರ ವೇತನ ನಿಲ್ಲುತ್ತದೆ. ನಾವು ಒಂದು ಭವಿಷ್ಯ ಹೇಳುತ್ತೇನೆ. ನಾವು ದೊಡ್ಡ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಮಾಡಬೇಕು. ರೈತರು, ಮಹಿಳೆಯರು, ಯುವಕರನ್ನು ಬೂತ್ ಮಟ್ಟದಲ್ಲಿ ಸದಸ್ಯರನ್ನಾಗಿ ಮಾಡಬೇಕು. ನಂತರ ದೊಡ್ಡ ಸಮಾವೇಶ ಮಾಡೋಣ, ಬರುವ ನವೆಂಬರ್‌ನಲ್ಲಿ ಉಪ ಚುನಾವಣೆ ಬರಲಿದ್ದು ಅದಕ್ಕೂ ಮುನ್ನ ಸದಸ್ಯತ್ವ ಅಭಿಯಾನ ಯಶಸ್ವಿಯಾಗಬೇಕು. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಾವು ಜಯಭೇರಿ ಬಾರಿಸಬೇಕು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post