ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಡಾ. ಮೈತ್ರೇಯಿ ಆದಿತ್ಯಪ್ರಸಾದ್ |
ಯೇ ಪ್ರಿಯಾಣಿ ಚ ಭಾಷಂತೇ ಪ್ರಯಚ್ಛಂತಿ ಚ ಸತ್ಕೃತಮ್ l
ಶ್ರೀಮಂತೋ ವಂದ್ಯಚರಣಾ ದೇವಾಸ್ತೇ ನರವಿಗ್ರಹಾಃ ll
ಯಾರು ಪ್ರಿಯವಾದದ್ದನ್ನು ಮಾತಾಡುತ್ತಾರೋ ಸತ್ಕಾರ್ಯವನ್ನು ಮಾಡುತ್ತಾರೋ ಅವರು ಶ್ರೀಮಂತರು, ಗೌರವಾನ್ವಿತರು, ವಂದನೀಯರು ಹಾಗೂ ಮನುಷ್ಯರೂಪದ ದೇವರು ಎನ್ನುವ ಸುಭಾಷಿತದಂತೆ ಇರುವಂತಹ ವ್ಯಕ್ತಿಗಳು ವಿರಳ. ಆ ಸಾಲಿನಲ್ಲಿ ನನಗೆ ಕಂಡು ಬಂದ ವ್ಯಕ್ತಿಯೊಬ್ಬರ ಪರಿಚಯ ಇಂದು ಮಾಡಿಕೊಡುವುದು ಸೂಕ್ತ ಎನಿಸಿ, ಈ ಲೇಖನ ಬರೆಯಲಾರಂಭಿಸಿದೆ.
ಬಾಲ್ಯದಿಂದಲೇ ಓದಿನಲ್ಲಿ ಆಸಕ್ತಿ ಮತ್ತು ಪರಿಸರದ ಕುರಿತಾದ ಕುತೂಹಲ ಇದಕ್ಕೆ ತಾವು ಜನಿಸಿದ ಪ್ರದೇಶವೂ ಕಾರಣವಾಗಿತ್ತು. ಕುದುರೆಮುಖ ಎಂಬ ಪ್ರದೇಶವೇ ಹಾಗೆ ಅದು ಕಬ್ಬಿಣದ ಅದಿರಿನ ನಿಕ್ಷೇಪ ಹಾಗೂ ವನ್ಯಜೀವಿಗಳು ಮತ್ತು ಜೀವ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲಿಯೇ ಇದ್ದುದರಿಂದ ಸಹಜವಾಗಿಯೇ ಪ್ರಕೃತಿಯಲ್ಲಿ ಪ್ರೇಮ ಮತ್ತು ಪಕ್ಷಿಗಳ ಕುರಿತಾದ ಆಸಕ್ತಿ ಮೂಡಿತೆಂದರೆ ಆಶ್ಚರ್ಯವೇನಿಲ್ಲ.
ನಂತರ ತನ್ನ ಉನ್ನತ ಅಧ್ಯಯನ ನಡೆಸಿದ್ದು ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಅದರಲ್ಲಿ ಅತಿಯಾದ ಪ್ರೀತಿ ಬೆಳೆಸಿಕೊಂಡ ಮೇಲೆ ಉಪನ್ಯಾಸಕರಾಗಿ ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ನಿರಂತರ ಅಧ್ಯಯನದ ಆಸಕ್ತಿಯನ್ನು ಹೊಂದಿ ತಮ್ಮ ವೃತ್ತಿಯಲ್ಲಿ ಸಾಕಷ್ಟು ಪರಿಣತಿ ಪಡೆದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಅತ್ಯುತ್ತಮ ಮಾರ್ಗದರ್ಶಕರಾದರು. ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರೂ ಆದರು.
ಬರಿ ಇಷ್ಟೇ ಅವರ ಗುಣಗಳಾಗಿದ್ದಿದ್ದರೆ ಈ ಲೇಖನ ಬರೆಯುವ ಕಾರಣವೇ ಇರುತ್ತಿರಲಿಲ್ಲ. ಆದರೆ ಅವರ ಕುರಿತಾಗಿ ಹೇಳ ಹೊರಟರೆ ಅದು ಮುಗಿಯುವುದೇ ಇಲ್ಲ ಆದರೂ ನಾನು ಗುರುತಿಸಿದಷ್ಟು ಹೇಳುವುದಾದರೆ, ತಾನು ಸ್ವತಃ ಮಗುವಿನ ಮುಗ್ಧ ಮನಸ್ಸನ್ನು ಹೊಂದಿ, ಶಿಸ್ತಿನ ಸಿಪಾಯಿಯಂತೆ ಕಾರ್ಯನಿರ್ವಹಿಸುವವರು. ಒಂದರ್ಥದಲ್ಲಿ ಕಾಯಕಯೋಗಿ ಎಂದರೂ ತಪ್ಪಾಗಲಾರದು. ಶಿಸ್ತಿನ ಸಿಪಾಯಿಯಾದ ಅವರ ಕಾರ್ಯನಿಷ್ಠೆಯನ್ನು ಎಂಥವರಾದರೂ ಮೆಚ್ಚದೇ ಇರಲಾರರು. ಏನೇ ಕೆಲಸವನ್ನು ನೀಡಿದರೂ ಅದನ್ನು ಪೂರ್ಣವಾಗಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಸ್ವಭಾವ ಅವರದು.
ಇದೆಲ್ಲಕ್ಕಿಂತ ಮಿಗಿಲಾಗಿ ಇನ್ನೊಂದು ವಿಶಿಷ್ಟವಾದ ಗುಣವೆಂದರೆ ಪ್ರತಿಫಲದ ಅಪೇಕ್ಷೆ ಇಲ್ಲದೆ ಕೆಲಸ ಮಾಡುವ ವ್ಯಕ್ತಿ. ಅಬ್ಬಾ! ಈ ಕಾಲದಲ್ಲಿಯೂ ಇಂಥವರು ಇದ್ದಾರಾ ಎಂದು ಆಶ್ಚರ್ಯ ಪಡುವ ಗುಣ ಸ್ವಭಾವ ಇವರದು. ಒಮ್ಮೆ ತಾವು ಉದ್ಯೋಗ ಮಾಡುವ ಸ್ಥಳದಲ್ಲಿ ಸಂಬಳ ಹೆಚ್ಚು ಮಾಡಿದರೆಂದು ಗಾಬರಿಯಾಗಿ ಓಡಿ ಹೋಗಿ ನನಗೆ ಸಂಬಳ ಹೆಚ್ಚಾಯಿತು ದಯಮಾಡಿ ಕಡಿಮೆ ಮಾಡಿ ಎಂದು ಹೇಳಿದ ಮಹಾನುಭಾವ.
ಮೇಲಿನವುಗಳೆಲ್ಲ ಒಂದೆಡೆಯಾದರೆ ಆ ವ್ಯಕ್ತಿ ಒಬ್ಬ ಉತ್ತಮ ಪರಿಸರ ಪ್ರೇಮಿ. ಮಳೆ, ಹವಾಮಾನ, ಮರ, ಪಕ್ಷಿ ಇವುಗಳ ಕುರಿತಾಗಿ ಏನನ್ನು ಕೇಳಿದರೂ ಸಮಗ್ರವಾಗಿ ತಿಳಿಸಬಲ್ಲ ತಜ್ಞ. ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳನ್ನು ಮಗುವಂತೆ ಆರೈಕೆ ಮಾಡುವ ಮಹನೀಯ. ತಾನು ಪ್ರತಿನಿತ್ಯ ಮನೆಗೆ ನಡೆದೇ ಸಾಗುವ ಅವರು ಗಿಡಗಳಿಗೆ ನೀರೆರೆದು ಹೋಗುತ್ತಿದ್ದರು. ಕೆರೆಯಲ್ಲಿ ನೀರು ಕಡಿಮೆಯಾದಾಗ ಟ್ಯಾಂಕರ್ ಗೆ ಹಣ ಕೊಟ್ಟು ನೀರು ಹಾಕಿಸುತ್ತಿದ್ದರು. ಒಮ್ಮೆ ಕಾಲೇಜಿನಲ್ಲಿ ಒಂದು ವಿಶಿಷ್ಟವಾದ ಮರವನ್ನು ಕಾರಣಾಂತರದಿಂದ ಕಡಿದಾಗ ಬಹು ನೊಂದುಕೊಂಡಿದ್ದು ಅವರ ಪರಿಸರ ಪ್ರೇಮಕ್ಕೆ ಸಾಕ್ಷಿ.
ಅವರೊಬ್ಬ ಉತ್ತಮ ಬಾಣಸಿಗರೆಂಬುದಕ್ಕೆ ಹಬ್ಬ ಬಂದಾಗ ವಾರದ ಮೊದಲೇ ವಿವಿಧ ರೀತಿಯ ತಿಂಡಿಗಳನ್ನು ಮಾಡಿ, ಹಬ್ಬ ಮುಗಿದ ಮೇಲೆ ಕಾಲೇಜಿಗೆ ಅದನ್ನು ಹಂಚುವ ಅವರ ಸಂಭ್ರಮ ನಿಜಕ್ಕೂ ಶ್ಲಾಘನೀಯ. ಮನೆಗೆಲಸದಲ್ಲಿಯೂ ಸಹ ಪ್ರಾವಿಣ್ಯತೆ ಹೊಂದಿರುವುದು ಅವರ ವಿಶೇಷತೆಗಳಲ್ಲಿ ಒಂದು.
ಬೋರ್ಡ್ ಮೇಲೆ ಅಕ್ಷರ ಮೂಡಿಸುತ್ತಿದ್ದರೆ ಅಳಿಸಲು ಮನಸೇ ಬರುವುದಿಲ್ಲವೆಂಬಷ್ಟು ಮುದ್ದಾಗಿ ಬರೆಯುವ ಬರಹಗಾರ. ಚುರುಕುತನದ, ಅಸೂಯಾ ವ್ಯಕ್ತಿತ್ವವನ್ನು ಹೊಂದಿರದ ಇವರು ಗೀತೆಯಲ್ಲಿ ಕೃಷ್ಣ ಹೇಳುವಂತಹ ಸ್ಥಿತಪ್ರಜ್ಞನಂತೆಯೇ ಬದುಕುತ್ತಿರುವವರು. ಹೊಗಳಿಕೆಗೆ ಏರದ, ತೆಗಳಿಕೆಗೆ ಇಳಿಯದ ಇವರು ನನಗೆ ಕಂಡದ್ದು ದೇವಮಾನವನಂತೆಯೇ ವಂದನೀಯರು.
ಇಷ್ಟೆಲ್ಲಾ ಸದ್ಗುಣಗಳ ಗಣಿ ಯಾರೆಂದರೆ ಪೇಸ್ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಶ್ರೀ ರೋನಿ ಡಿ. ಬೆರ್ಟಾ. ಒಬ್ಬ ಆದರ್ಶ ಶಿಕ್ಷಕರಾದ ಇವರು ಹಾಗೂ ಇವರ ಜೀವನ ಎಲ್ಲರಿಗೂ ಪ್ರೇರಣಾದಾಯಿ. ಎಲೆ ಮರೆ ಕಾಯಿಯಂತೆ ಇರುವ ಇವರು ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸ್ಮರಣೀಯರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post