ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಇಡಿಯ ದೇಶವೇ ತಲ್ಲಣಗೊಳ್ಳುವಂತೆ ಅತ್ಯಂತ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ನಡೆಸಿದ್ದ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.
ಅಪರಾಧಿಗಳಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಹಾಗೂ ಪವನ್ ಗುಪ್ತಾ ಕೊನೆಯವರೆಗೂ ಕಾನೂನು ಹೋರಾಟ ನಡೆಸಿದರೂ ಸಾವಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇಂದು ನಸುಕಿನ 5.30ಕ್ಕೆ ಸರಿಯಾಗಿ ತಿಹಾರ್ ಜೈಲು ನಂ.3ರಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಗಿದ್ದು, ಬರೋಬ್ಬರಿ 7.5 ವರ್ಷಗಳ ನಂತರ ಈ ಪ್ರಕರಣಕ್ಕೆ ನ್ಯಾಯ ದೊರೆದಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ.
ನಾಲ್ವರನ್ನೂ ನೇಣು ಗಂಬವೇರಿಸುವ ಮುನ್ನ ತಿಹಾರ್ ಜೈಲಿನ ಆರೋಗ್ಯಾಧಿಕಾರಿಗಳಿಂದ ನಾಲ್ವರು ಅಪರಾಧಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ಫಿಟ್ ಅಂಡ್ ಫೈನ್ ಆಗಿದ್ದಾರೆ ಎಂದು ವರದಿ ನೀಡಲಾಗಿತ್ತು. ನಂತರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಅಪರಾಧಿಗಳ ಅಂತಿಮ ಇಚ್ಚೆಯನ್ನು ಕೇಳಲಾಗಿದೆ. ಆದರೆ, ಅಂತಿಮ ಇಚ್ಚೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಕಪ್ಪು ಬಟ್ಟೆ ಧರಿಸಿದ ಕೈದಿಗಳನ್ನು ವಾರ್ಡನ್ ಹಾಗೂ ಹೆಡ್ ವಾರ್ಡನ್ ಗಲ್ಲು ಕೋಣೆಗೆ ಕರೆತಂದಿದ್ದು, ಡೆತ್ ವಾರೆಂಟ್’ಗೆ ಮ್ಯಾಜಿಸ್ಟ್ರೇಟ್ ಸಹಿ ಹಾಕಿದ ನಂತರ ಅಪರಾಧಿಗಳ ಎದುರು ವಾರೆಂಟ್ ಓದಿದ ನಂತರ ನಾಲ್ವರನ್ನೂ ನೇಣುಗಂಬಕ್ಕೇರಿಸಲಾಗಿದೆ.
ನಿರ್ಭಯಾ ತಂದೆ-ತಾಯಿ ಹೇಳಿದ್ದೇನು?
ಸುಮಾರು 7.5 ವರ್ಷದ ನಂತರ ನಮಗೆ ನ್ಯಾಯ ದೊರೆತಿದೆ. ಈ ಘಟನೆ ಹಾಗೂ ಇಂದು ಅತ್ಯಾಚಾರಿಗಳನ್ನು ಗಲ್ಲಿಗೇರಿಸಿರುವುದು ಇಂತಹ ದುಷ್ಟರಿಗೆ ಒಂದು ಪಾಠವಾಗಬೇಕು ಎಂದು ಹೇಳುತ್ತಲೇ ತಮ್ಮ ಮಗಳನ್ನು ನೆನೆದು ಭಾವುಕರಾದರು.
ನಿರ್ಭಯಾ ನ್ಯಾಯ ದಿವಸ್
ಇನ್ನು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ಭಯಾ ತಾಯಿ ಇಷ್ಟು ವರ್ಷಗಳ ನಮ್ಮ ಹೋರಾಟಕ್ಕೆ ಹಾಗೂ ನನ್ನ ಮಗಳ ಸಾವಿಗೆ ಇಂದು ನ್ಯಾಯ ದೊರೆತಿದ್ದು, ಮಾರ್ಚ್ 20ರ ಈ ದಿನ ಐತಿಹಾಸಿಕವಾಗಿದೆ. ಈ ದಿನವನ್ನು ನಿರ್ಭಯಾ ನ್ಯಾಯ ದಿವಸ್ ಎಂದು ಸಂಭ್ರಮಿಸಬೇಕು ಎಂದು ಕೋರಿದ್ದಾರೆ.
ನಮಗೆ ನ್ಯಾಯ ದೊರಕಿಸಿಕೊಟ್ಟ ಕೇಂದ್ರ ಸರ್ಕಾರ, ನ್ಯಾಯಾಂಗ ವ್ಯವಸ್ಥೆಗೆ ಹಾಗೂ ನಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದಿದ್ದಾರೆ.
ಗುರುವಾರ ಬೆಳಿಗ್ಗೆ ನಾಲ್ವರು ಅಪರಾಧಿಗಳಲ್ಲಿ ಮೂವರು ಸುಪ್ರೀಂ ಕೋರ್ಟ್ ಕದ ತಟ್ಟಿ ತಮ್ಮ ಗಲ್ಲು ಶಿಕ್ಷೆಗೆ ತಡೆ ತರಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆ ಬಳಿಕ ನಾಲ್ವರೂ ಅಪರಾಧಿಗಳ ಪರ ಅವರ ವಕೀಲರು ದೆಹಲಿ ಹೈಕೋರ್ಟಿನಲ್ಲಿ ಹೊಸ ಮನವಿ ಅರ್ಜಿಯನ್ನು ಸಲ್ಲಿಸಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿಕೊಂಡರು. ಆದರೆ ಅಲ್ಲಿಯೂ ನಿರ್ಭಯಾ ಹಂತಕರ ಮನವಿಗೆ ಪುರಸ್ಕಾರ ಲಭಿಸಲಿಲ್ಲ.
ತಿಹಾರ್ ಜೈಲಿನಲ್ಲಿ ಹಂತಕರನ್ನು ನೇಣುಗಂಬಕ್ಕೇರಿಸಲು ಕೊನೇ ಕ್ಷಣದ ಸಿದ್ಧತೆಗಳು ನಡೆಯುತ್ತಿರುವಂತೆ ಅವರ ಪರ ವಕೀಲರಾದ ಎ.ಪಿ.ಸಿಂಗ್ ಅವರು ದೆಹಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೆ, ಇದನ್ನು ವಜಾಗೊಳಿಸಿದ್ದು, ತತಕ್ಷಣವೇ ಗಲ್ಲು ಶಿಕ್ಷೆ ಜಾರಿಗೊಳಿಸುವಂತೆ ಆದೇಶಿಸಲಾಗಿತ್ತು.
Get in Touch With Us info@kalpa.news Whatsapp: 9481252093
Discussion about this post