ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ – ಶಿವಮೊಗ್ಗ ರಾಮ್ |
ಮಕ್ಕಳು ಹೇಗೆ ಇರುತ್ತಾರೆ ಎಂದು ಅವರನ್ನೇ ಅವಲೋಕನ ಮಾಡಬೇಕಾಗಿಲ್ಲ. ಅವರ ಮನೆ ಪರಿಸರವನ್ನು ಒಮ್ಮೆ ನೋಡಿದರೆ ಸಾಕು. ಅವರ ವ್ಯಕ್ತಿತ್ವವೇ ಅಲ್ಲಿ ದರ್ಶನ ನೀಡುತ್ತದೆ. ಹೌದು. ಈ ಮಾತಿಗೆ ಅನ್ವರ್ಥವಾಗಿದ್ದಾಳೆ ಯುವ ನರ್ತಕಿ ಅಲ್ಪನಾ ಬದರಿನಾಥ್.
ಕರ್ನಾಟಕ ಶಾಸ್ತ್ರೀಯ ಸಂಗೀತ, ಈಜು, ಬ್ಯಾಡಿಂಟನ್, ಚಿತ್ರಕಲೆ ಮತ್ತು ಜ್ಯುವೆಲರಿ ಮೇಕಿಂಗ್ ಕಲೆಹೀಗೆ ಹತ್ತು ಹಲವು ಕ್ರಿಯಾಶೀಲತೆಗಳ ಸಂಗಮವಾಗಿರುವ ಅಲ್ಪನಾ -ಕ್ರಿಯಾಶೀಲ ಪ್ರತಿಭೆ. ಅಲ್ಪನಾ ಎಂದರೆ ಸುಂದರವಾಗಿರುವುದು ಎಂದರ್ಥ. ಅಲಂಕಾರಿಕ ವಿನ್ಯಾಸ, ಚಂದದ ರಂಗವಲ್ಲಿ ಎಂಬ ವ್ಯಾಖ್ಯೆಗಳೂ ಇವೆ. ಈಕೆಗೆ ಈ ನಾಮಧೇಯ ಸಂಪೂರ್ಣವಾಗಿ ಹೋಲಿಕೆ ಆಗಿರುವುದು ಒಂದು ವಿಶೇಷ. ಹೌದಲ್ಲವೇ. ಹೆಸರಿಗೂ ವ್ಯಕ್ತಿತ್ವಕ್ಕೂ ಅಜ- ಗಜಾಂತರ ವ್ಯತ್ಯಾಸ ಇರುವವರೇ ಲೋಕದಲ್ಲಿ ಹೆಚ್ಚು. ಅಂಥದ್ದರಲ್ಲಿ ಪಾಲಕರು ನಾಮಕರಣ ಮಾಡಿದ್ದಕ್ಕೆ ತಕ್ಕಂತೆ ತನ್ನ ಪಥವನ್ನು ರೂಪಿಸಿಕೊಂಡಿರುವ ಈ ಬಾಲೆ, ವಿಜ್ಞಾನ ಮತ್ತು ಕಲಾಸಕ್ತಿಗಳ ಮಿಲನವೇ ಆಗಿದ್ದಾಳೆ.
ರಂಗಾರೋಹಣಕ್ಕೆ ಅಣಿ
ಯುವ, ನವ ಪ್ರತಿಭೆಯನ್ನು ಪರಿಚಯಿಸಲಿಕ್ಕೆ ಒಂದು ಘನ ಕಾರಣ ಇದೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಹಂಪಾಪುರದ ವಿತ್ತೀಯ ತಜ್ಞ ಎಚ್.ಆರ್. ಬದರಿನಾಥ್ ಬದರಿನಾಥ್ ಮತ್ತು ಸ್ಮಿತಾ ಮೈಸೂರು ಅವರ ಪುತ್ರಿ ಅಲ್ಪನಾ ಇದೀಗ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾಳೆ. ಕಾರ್ಯಕ್ರಮ ಜು. 31 ರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಪನ್ನಗೊಳ್ಳಲಿದೆ. ಈ ಶುಭ ಸಂದರ್ಭಕ್ಕೆ ಗುರು, ರಾಜಧಾನಿಯ ವೆಂಕಟೇಶ ನೃತ್ಯ ಮಂದಿರದ ಹಿರಿಯ ನೃತ್ಯವಿದುಷಿ ರಾಧಾ ಶ್ರೀಧರ್, ವಿದುಷಿ ಕುಸುಮಾ ರಾವ್ ಪ್ರಖ್ಯಾತ ಕೂಚಿಪುಡಿ ವಿದುಷಿ ವೈಜಯಂತಿ ಕಾಶಿ, ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ ಕುಮಾರ್, ಡಾ. ಸೂರ್ಯಪ್ರಸಾದ ಇತರರು ಸಾಕ್ಷಿಯಾಗಲಿದ್ದಾರೆ.

ಜನನಿ ತಾನೆ ಮೊದಲ ಗುರು-ಮನೆಯೇ ಮೊದಲ ಪಾಠಶಾಲೆ ಎಂಬುದು ಗಾದೆ. ಬೆಂಗಳೂರಿನಲ್ಲಿ ವಾಸವಿರುವ ಎಚ್.ಆರ್. ಬದರಿನಾಥ್-ಮೈಸೂರಿನ ಸ್ಮಿತಾಗೆ ಸಂಗೀತ-ಸಾಹಿತ್ಯ ಸೇರಿದಂತೆ ಭಾರತೀಯ ಪರಂಪರೆ ಎಂದರೆ ಜೀವ. ಸಂಗೀತದ ಭಾವ ಅವರಲ್ಲಿ ಮಿಳಿತವಾಗಿರುವ ಕಾರಣಕ್ಕಾಗಿ ಮನೆಯೇ ಸಂಸ್ಕೃತಿಯ ಮಂದಿರದಂತಾಗಿದೆ. ಪುತ್ರಿ ಅಲ್ಪನಾ 6 ವರ್ಷದ ಬಾಲಕಿಯಾಗಿದ್ದಾಗಲೇ ಸಂಗೀತ ಮತ್ತು ನೃತ್ಯಗಳ ಬಗ್ಗೆ ವಿಶೇಷವಾದ ಆಸಕ್ತಿಯನ್ನು ತೊರಲಾರಂಭಿಸಿದ್ದು ಗಮನೀಯ. ಸಂಸ್ಕಾರವಂತ ಸಂಗೀತ ಮತ್ತು ಸಾಹಿತ್ಯ ಆಸಕ್ತ ಕುಟುಂಬದಿಂದ ಬಂದಂತಹ ದಂಪತಿ, ಮಗಳ ಆಸಕ್ತಿಯನ್ನು ಗಮನಿಸಿ ಅದಕ್ಕೆ ಸೂಕ್ತವಾದ ಪ್ರೋತ್ಸಾಹ ಕೊಡಲು ಆರಂಭಿಸಿದರು. ಪೂರ್ವ ಪ್ರಾಥಮಿಕ ಶಾಲಾ ಹಂತದಿಂದಲೇ ಶಿಕ್ಷಕಿಯರು ಈ ಬಾಲಕಿಯನ್ನು ಗುರುತಿಸಿ ನೃತ್ಯದ ಬಗ್ಗೆ ಅದಮ್ಯ ಆಸಕ್ತಿ ಇದೆ ಎಂಬುದನ್ನು ತಿಳಿಸಿಕೊಟ್ಟರು.
ಅರಿವಿನಿಂದ.. ಗುರುವಿನ ಕಡೆಗೆ…
ಇವೆಲ್ಲದರ ಫಲವಾಗಿ ಗುರು ರಾಧಿಕಾ ಅಯ್ಯಂಗಾರ್ ಬಳಿ ಕಲಿಕೆ ಆರಂಭಿಸಲು ಪಾಲಕರು ಅನುವು ಮಾಡಿಕೊಟ್ಟರು. ವಿಶೇಷ ಆಸಕ್ತಿಯ ಫಲವಾಗಿ ಜೂನಿಯರ್ ಪರೀಕ್ಷೆಯೂ ಪೂರ್ಣಗೊಂಡಿತು. ನಂತರ ಪ್ರಾಪ್ತವಾದ ಗುರು ಸ್ಥಾನವೇ ಹಿರಿಯ ವಿದುಷಿ ರಾಧಾ ಶ್ರೀಧರ್. ಬೆಂಗಳೂರಿನ ಶ್ರೀ ವೆಂಕಟೇಶ ನಾಟ್ಯ ಮಂದಿರಕ್ಕೆ ಅಲ್ಪನಾ ಸೇರ್ಪಡೆ. ತಾಲೀಮು ಮುಂದುವರಿದು ಸೀನಿಯರ್ ಪರೀಕ್ಷೆಯೂ ಸಾರ್ಥಕವಾಗಿ ಪೂರ್ಣಗೊಂಡಿತು.
ಬಾಲಕಿಯ ವಿಶೇಷ ಆಸಕ್ತಿ ಶ್ರದ್ಧೆಗಳನ್ನು ಗಮನಿಸಿ ಕೇಂದ್ರ ಸರ್ಕಾರದ ಸಿಸಿಆರ್‌ಟಿ ವಿದ್ಯಾರ್ಥಿ ವೇತನವೂ ಮಂಜೂರಾಯಿತು. ಈ ದಿಸೆಯಲ್ಲಿ ನೃತ್ಯ ಕಲಾವಿದೆ ಐಶ್ವರ್ಯಾ ನಿತ್ಯಾನಂದ ಮಾಡಿದ ಉಪಕಾರವನ್ನು ಎಂದಿಗೂ ಮರೆಯಲಾಗದು ಎನ್ನುತ್ತಾರೆ ತಾಯಿ ಸ್ಮಿತಾ. ರಾಧಾ ಶ್ರೀಧರ್ ಗರಡಿಯಲ್ಲಿ ತರಬೇತುಗೊಳ್ಳುತ್ತಿರುವ ಅಲ್ಪನಾ ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಗುರು ವಸಂತ ಮಾಧವಿ ಅವರ ಬಳಿ ಅಭ್ಯಾಸ ಮಾಡಿ ಇದೀಗ ಸೀನಿಯರ್ ಹಂತದ ಕಲಿಕೆಗೆ ಬಂದು ನಿಂತಿದ್ದಾಳೆ.

ಕುಟುಂಬದ ಬಳುವಳಿ
ಸದ್ಗುಣ, ಗಣ ಭವತೀಂ ಶಾಶ್ವತೀ ಮಾಷು ದೇವಾಃ … ಎನ್ನುತ್ತದೆ ವಾಯು ಸ್ತುತಿ. ಸದ್ಗಣಗಳ ಸಂಗಮವಿದ್ದಲ್ಲಿ ಗುಣಗಳು ಮನೆ ಮಾಡಲು ಬಹುಕಾಲ ಗಂಧ ತೀಡಬೇಕು. ಇದು ಯಾವುದೇ ಮಾರುಕಟ್ಟೆ ಸರಕಲ್ಲ. ಗುರುವಿನ ಅನುಗ್ರಹ ಮತ್ತು ಹಿರಿಯರ ಬಹುಕಾಲದ ತಪಸ್ಸಿನ ಬಳುವಳಿಯಾಗಿ ಬರುವಂಥವು. ಅಷ್ಟೇ ಜತನವಾಗಿ ಕಾಪಿಟ್ಟುಕೊಳ್ಳುವ ಪೀಳಿಗೆಗಳಲ್ಲಿ ಅಂತರ್ಗತವಾಗಿ ನೆಲೆಸುವಂಥವು. ಅಲ್ಪನಾ ಅವರ ಅಜ್ಜಿ ಕಮಲಾ ರಾವ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರೌಢ ಕೇಳುಗರು.
ಇವರ ಪತಿ ವಿಜಯೇಂದ್ರ ರಾವ್ ಕೂಡ ಕೊಳಲು ವಾದನದಲ್ಲಿ ಆತ್ಮಾನಂದ ಕಾಣುವವರು. ಅತ್ತ ಬದರಿನಾಥ ಪಾಲಕರೂ, ಸಂಬಂಧಿಕರು ಭಾರತೀಯ ಪರಂಪರೆಯ ವೇದ, ಸಂಗೀತಗಳ ಬಗ್ಗೆ ಅಪಾರ ಗೌರವ ಹೊಂದಿದವರು. ಆಗಾಗ್ಗೆ ವಿದ್ವಾಂಸರ ಕಛೇರಿಗಳಿಗೆ ಹೋಗುವುದು ಒಂದು ಸಾಂಪ್ರದಾಯಿಕ ಆಸಕ್ತಿ ಯಾದ ಕಾರಣ ಇದೇ ಪರಿಸರದಲ್ಲಿ ಬೆಳೆದ ಅಲ್ಪನಾಗೆ ಕಲಾಸಕ್ತಿ, ಪಠ್ಯ ಅಧ್ಯಯನ ಕ್ರಮದ ಶ್ರದ್ಧೆ ತಾನಾಗಿಯೇ ಮೂಡಿತು.
ಇದು ಎಲ್ಲ ಮನೆ- ಮನಗಳಲ್ಲಿ ಆದರೆ ನಮ್ಮ ಸಮಾಜ ಸಂಪೂರ್ಣ ಸುಸಂಸ್ಕೃತವಾದೀತು. ಎಚ್.ಆರ್. ಬದರಿನಾಥ್ ಅವರು ಬೆಂಗಳೂರಿನ ಐಐಎಂ ನಲ್ಲಿ ಅಧ್ಯಯನ ಮಾಡಿದ್ದು, ಹಿರಿಯ ಆರ್ಥಿಕ ತಜ್ಞರೂ ಆಗಿದ್ದಾರೆ. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ವಿವಿ ಸೇರಿದಂತೆ ದೇಶದ ಅನೇಕ ಅಗ್ತಪಂಕ್ತಿ ವಿವಿಗಳಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರು. ಶಾಸ್ತ್ರೀಯ ಸಂಗೀತ ಕೇಳ್ಮೆಗೂ ಅವರ ಅಂತರಂಗ ಆಗಾಗ್ಗೆ ಅಣಿಯಾಗುತ್ತದೆ. ಹಾಗಾಗಿ ಅವರು ಮಗಳ ಆಸಕ್ತಿಗಳಿಗೆ ಬೆನ್ನೆಲುಬಾದರು. ತಾಯಿ ಸ್ಮಿತಾ ಅವರೂ ತವರಿನ ಪರಂಪರೆಯಿಂದಲೇ ಸಂಗೀತಕ್ಕೆ ತಲೆದೂಗುವವರು. ಕಲೆಗಳಿಗೆ ತಲೆಬಾಗುವವರು. ಬಯೋಮೆಡಿಕಲ್ ಸೈನ್ಸ್ ತಜ್ಞರು. ಇವರಿಬ್ಬರ ಆಸಕ್ತಿ ಮತ್ತು ಶ್ರದ್ಧೆಗಳ ಫಲವೇ ಅಲ್ಪಾ ಎನ್ನಬಹುದು.

-ಸ್ಮಿತಾ ಬದರೀನಾಥ್

ಬಿಡುವಿನ ವೇಳೆಯಲ್ಲಿ ಈಜು, ಚಿತ್ರಕಲೆ ಬ್ಯಾಡ್ಮಿಂಟನ್ ಆಡುವುದು ಮತ್ತು ಶಾಸ್ತ್ರೀಯ ಸಂಗೀತ ಹಾಡುವುದು ಅಲ್ಪನಾಳ ವಿಶೇಷ ಹವ್ಯಾಸಗಳು. ಇದರೊಂದಿಗೆ ಜ್ಯುವೆಲ್ಲರಿ ಮೇಕಿಂಗ್ ಕೂಡಾ ಆಸಕ್ತಿಗಳಿಗೆ ಭೂಷಣವಾಗಿದೆ. ಪಠ್ಯ ಅಧ್ಯಯನ ಒತ್ತಡವಾದ ಸಂದರ್ಭದಲ್ಲಿ ಸಂಗೀತ, ನೃತ್ಯ ನಮಗೆ ಹೊಸ ಚೈತನ್ಯ ನೀಡುತ್ತವೆ. ದೈಹಿಕ- ಮಾನಸಿಕ ಉಲ್ಲಾಸ ನೀಡುತ್ತವೆ. ಮೂಲ ವಿಜ್ಞಾನವನ್ನು ಓದುವ ಹೆಬ್ಬಯಕೆ ಇದ್ದರೂ ಎಂದಿಗೂ ಕಲಾಸಕ್ತಿ ಬಿಡಲಾರೆ ಎನ್ನುತ್ತಾಳೆ ಈಕೆ. ಇದು ನಮ್ಮ ವ್ಯಕ್ತಿತ್ವಕ್ಕೆ ಅತ್ಯಂತ ಪೂರಕ ಮತ್ತು ಬದುಕಿಗೆ ಗಟ್ಟಿ ನೆಲೆಯನ್ನು ತಂದು ಕೊಡುತ್ತದೆ ಎನ್ನುತ್ತಾಳೆ ಅಲ್ಪನಾ. ಐಐಟಿಯಲ್ಲಿ ಸಾಧನೆ ಮಾಡುವುದರೊಂದಿಗೆ ನೃತ್ಯದಲ್ಲಿ ವಿದ್ವತ್ ಮಾಡಿಕೊಳ್ಳುತ್ತೇನೆ.ಒಬ್ಬ ಅತ್ಯುತ್ತಮ ವೇದಿಕೆ ಕಲಾವಿದೆಯಾಗಬೇಕು. ನರ್ತನ ರಂಗದಲ್ಲೂ ಖ್ಯಾತಿ ಗಳಿಸಬೇಕು ಎಂಬುದು ಈಕೆಯ ಮಹದಾಸೆ.

ಮಗಳ ಸಾಧನೆಗಳ ಬಗ್ಗೆ ಮೌನವಾಗಿಯೇ ಅವಲೋಕನ ಮಾಡಿಕೊಳ್ಳುವ ಬದರಿನಾಥ್, ಆಸಕ್ತಿ ಮತ್ತು ಶ್ರದ್ಧೆ ಇರುವವರಿಗೆ ಆದಷ್ಟು ಬೆಂಬಲವನ್ನು ಕೊಡೋಣ ವಿದ್ಯೆ ಮತ್ತು ಜ್ಞಾನಕ್ಕೆ ಸರಿಸಮನಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಜ್ಞಾನಾರ್ಜನೆಯೊಂದೇ ಬದುಕಿನ ಧ್ಯೇಯವಾಗಬೇಕು ಆಗ ಮಾತ್ರ ಎಲ್ಲಾ ಕೀರ್ತಿಗಳು ನಮ್ಮನ್ನು ಅರಸಿ- ಹರಸಿ ಬರುತ್ತವೆ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಹಿಮ್ಮೇಳದ ಸಹಕಾರ
ಅಲ್ಪನಾ ಬದರಿನಾಥ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜು. 31 ರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡಿದೆ. ಗಾಯನದಲ್ಲಿ ವಿದುಷಿ ಐಶ್ವರ್ಯಾ ನಿತ್ಯಾನಂದ, ನಟವಾಂಗದಲ್ಲಿ ವಿದ್ವಾನ್. ಡಿ.ವಿ. ಪ್ರಸನ್ನ ಕುಮಾರ, ಮೃದಂಗದಲ್ಲಿ ವಿದ್ವಾನ್ ಸಾಯಿ ವಂಶಿ, ಕೊಳಲಿನಲ್ಲಿ ವಿದ್ವಾನ್ ಮಹೇಶ್ ಸ್ವಾಮಿ, ಪಿಟೀಲಿನಲ್ಲಿ ವಿದ್ವಾನ್ ಮೈಸೂರು ಆರ್. ದಯಾಕರ್ ಮತ್ತು ರಿದಂ ಪ್ಯಾಡ್ ನಲ್ಲಿ ಮಿಥುನ್ ಶಕ್ತಿ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post