ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಸುಧಾ ಗ್ರಂಥ ಕತೃಗಳಾದ ಶ್ರೀ ಜಯತೀರ್ಥರ ಸನ್ನಿಧಾನವಾದ ಮಳಖೇಡದ ಕಾಗಿಣಾ ನದಿ ತೀರದಲ್ಲಿ ಸುಧಾ ಗಂಗೆಯ ಪ್ರವಾಹ ಉಕ್ಕಿ ಹರಿಯಿತು. ಈ ಸುಧಾಮೃತ ಪ್ರವಾಹದಲ್ಲಿ ಸುಮಾರು ಐವತ್ತು ಸಾವಿರಕ್ಕೂಹೆಚ್ಚು ಭಕ್ತರು ಮಿಂದು ಪುನನೀತರಾದರು.
ಮಳಖೇಡದಲ್ಲಿ Malakheda ಮೂರುದಿನ ನಡೆದ ಶ್ರೀ ಮನ್ಯಾಯಸುಧಾ ಮಂಗಲಮಹೋತ್ಸವ ಐತಿಹಾಸಿಕವಾಗಿ ಜರುಗಿತು. ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ವಿವಿಧ ಮಠಗಳ ಮಠಾಧೀಶರು ಪಾಲ್ಗೊಂಡು ಅನುಗ್ರಹಿಸಿದರು. ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ 20 ವಿದ್ಯಾರ್ಥಿಗಳು ಸುಧಾ ಗ್ರಂಥದ ಅನುವಾದ ಮಂಡಿಸಿ ವಿದ್ವನ್ಮಣಿಗಳ ಮೆಚ್ಚುಗೆ ಪಡೆದರು. ಯತಿಗಳ ಸಮ್ಮುಖದಲ್ಲಿ ಸುಧಾ ಅನುವಾದ ಮಂಡಿಸಿ ಮೆಚ್ಚುಗೆಗೆ ಪಾತ್ರರಾದರು.
ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರ ಜ್ಞಾನಾಮೃತದ ಸವಿ ಅನುಭವಿಸಿದ ಭಕ್ತರು ಜಯತೀರ್ಥರ ಮಹಿಮೆ ಕೊಂಡಾಡಿದರು.
ಸಾವಿರಕ್ಕೂ ಹೆಚ್ಚು ವಿದ್ವಾಂಸರು ಪ್ರವಚನ ನೀಡುವ ಮೂಲಕ ಸಜ್ಜನರನ್ನು ಉದ್ಧರಿಸಿದರು. ಭಕ್ತಿ, ಜ್ಞಾನ, ವೈರಾಗ್ಯ, ಬದುಕಿನ ನೀತಿ ಪಾಠಗಳ ಕುರಿತು ಪಂಡಿತೋತ್ತಮರು ಪ್ರವಚನ ನೀಡಿದರು.
ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು, ರಾಯರ ಮಠದ ಶ್ರೀ ಸುವಿಧ್ಯೇಂದ್ರತೀರ್ಥರು, ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯತೀರ್ಥರು ಪಾಲ್ಗೊಂಡು ಸನ್ಮಾರ್ಗ ತೋರಿದರು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಸಹಸ್ರಾರು ಜನ ಭಕ್ತರು ಪಾಲ್ಗೊಂಡಿದ್ದರು.
ವಿದ್ವಾಂಸರೆ ಅಡುಗೆ ಭಟ್ಟರು:
ಮೂರು ದಿನ ವೈಭವಪೂರಿತವಾಗಿ ಜರುಗಿದ ಸುಧಾ ಮಂಗಲೋತ್ಸವದಲ್ಲಿ ವಿದ್ವಾಂಸರೆ ಅಡುಗೆಯನ್ನು ಮಾಡಿದ್ದಾರೆ. ಪಂಡಿತರಿಂದ ಸಿದ್ದಪಡಿಸಿದ ಅಡುಗೆ ಸೇವಿಸುವ ಭಾಗ್ಯ ಭಕ್ತರಿಗೆ ಸಿಕ್ಕಿದ್ದು ಪುಣ್ಯವೇ ಸರಿ.
ಅಚ್ಚುಕಟ್ಟು ವ್ಯವಸ್ಥೆ:
ಈ ಕಾರ್ಯಕ್ರಮಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಊಟ, ವಸತಿ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಬೃಹದಾಕಾರದ ಪೆಂಡಾಲ್ ಹಾಕಲಾಗಿತ್ತು. ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ವೃದ್ದರು, ಅಂಗ ವೈಕಲ್ಯ ಭಕ್ತರಿಗೆ ಮಹಾದ್ವಾರದಿಂದ ಕಾರ್ಯಕ್ರಮದ ವೇದಿಕೆ ವರೆಗೂ ಎಲೆಕ್ಟ್ರಿಕಲ್ ವಾಹನದ ಮೂಲಕ ಕರೆತರಲಾಗುತ್ತಿತ್ತು.
ಸಹಸ್ರಾರು ಜನರಿಗೆ ಬೆಳಗ್ಗೆ ತಿಂಡಿ, ಟೀ, ಕಾಫಿ, ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆ ಸ್ವಲ್ಪವೂ ಲೋಪವಾಗದಂತೆ ನಿರ್ವಹಿಸಲಾಗಿತ್ತು.
Also read: ಕಾರ್ಕಳ ಸಮಾಜಕ್ಕಾಗಿ ಮಿಡಿಯುತ್ತಿದ್ದ ಸುದೀಪ್ ಶೆಟ್ಟಿ ಅಕಾಲಿಕ ನಿಧನ
ವಾಹನ ಪಾರ್ಕಿಂಗ್ ಗಾಗಿಯೇ ಆರು ಎಕರೆ ಜಮೀನು ಗುರುತಿಸಲಾಗಿತ್ತು. ಅದು ಸಾಕಾಗದ ಕಾರಣ ಮಠದಿಂದ ಬಸ್ ನಿಲ್ದಾಣದ ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲ್ಲಿಸಲಾಗಿತ್ತು. ಅದಲ್ಲದೇ ಖಾಲಿ ಮೈದಾನಗಳಲ್ಲೂ ವಾಹನಗಳದ್ದೆ ಕಾರಬಾರು ಎಂಬಂತಾಗಿತ್ತು.
ಮೂರುದಿನಗಳ ಕಾಲ ಜ್ಞಾನಾಮೃತ ಹರಿಯಿತು. ಇಲ್ಲಿಪಸರಿಸಿದ ಸುಧಾಮೃತದ ಕಂಪು ದೇಶದ ಮೂಲೆ ಮೂಲೆಯಲ್ಲಿ ಹರಡಿತು. ತತ್ವ ಪ್ರಪಂಚಕ್ಕೆ ಸುಧಾ ಎಂಬ ಅದ್ವಿತೀಯ ಗ್ರಂಥ ನೀಡಿದ ಶ್ರೀ ಜಯತೀರ್ಥ ಸನ್ನಿಧಾನದಲ್ಲಿ ಸುಧಾ ಮಂಗಲೋತ್ಸವ ನಡೆಸಿದ್ದು ವಿಶೇಷವಾಗಿತ್ತು.
ಅಮೃತ ಸಿಂಚನ:
ಸುಧಾ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದ ಯತಿವರೇಣ್ಯರರಿಂದ ಅಮೃತ ಸಿಂಚನ ಸೂಸಿ ಬಂದಿತು. ವಿದ್ವಾಂಸರು, ಭಕ್ತರು ಯತಿಗಳ ಅನುಗ್ರಹ ಸಂದೇಶದಿಂದ ಪಾವನರಾದರು. ಸನಾತನ ಪರಂಪರೆ, ವೇದ, ಶ್ರುತಿ, ಭಾಗವತ, ಮಹಾಭಾರತ, ರಾಮಾಯಣ, ಶ್ರೀಮನ್ಯಾಯಸುಧಾ, ಭಗವದ್ಗೀತೆ ಕುರಿತು ಅಮೃತ ವಚನ ನೀಡಿ ಅನುಗ್ರಹಿಸಿದರು.
ಮಳಖೇಡದಿಂದ ಹರಿದ ಜ್ಞಾನ ಸುಧೆ ಪ್ರವಾಹವು ಭಕ್ತರ ಬದುಕಿನಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ಕೊಚ್ಚಿಹೋಗಿ ಜ್ಞಾನ ದ ಬೆಳಕು ನೀಡಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post