ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಬುದ್ಧಿಯ ಮೇಲೆ ಹಿಡಿತ ಸಾಧಿಸಿ, ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರಿಯ ಕಡೆಗೆ ಮುನ್ನುಗ್ಗಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕಾರ್ಕಳ ಸಿ.ಎಸ್.ಐ ಬೆಥಾನ್ಯ ದೇವಾಲಯ ಧರ್ಮಗುರು ರೆವರೆಂಡ್ ಸೊಲೊಮೋನ್ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇನ್ನೋರ್ವ ಅತಿಥಿ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
Also read: ನಮ್ಮ ದೇಶದ ಸಂವಿಧಾನ ಅತ್ಯಂತ ಮಹತ್ವಪೂರ್ಣವಾಗಿದೆ | ಅಸಿಸ್ಟೆಂಟ್ ಪ್ರೊಫೆಸರ್ ಅಶ್ವಿನಿ
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕುಂದಾಪುರದ ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನೀಲ್ ಗ್ಲಾಡ್ವಿನ್ ಡಿಲೀಮ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಡಿಸೋಜರವರು ಸಂದರ್ಭೊಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಡೊಮಿನಿಕ್ ಅಂದ್ರಾದೆಯವರು ಮಾತನಾಡಿ, ಪ್ರತಿಯೊಂದು ಮಗುವಿಗೂ ಕೂಡ ದೇವರು ಪ್ರತಿಭೆಯನ್ನು ನೀಡಿರುತ್ತಾನೆ. ಆ ಪ್ರತಿಭೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳುವುದರ ಜೊತೆಗೆ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬದುಕಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್, ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋ ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕಿ ಸಿಸ್ಟರ್ ಶಾಲೆಟ್ ಸಿಕ್ವೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯಾದ ರೇಖಾ ಸಂತೋಷ್, ಜೋಸ್ನಾ ಸ್ನೇಹಲತಾ, ಶಮೀನಾ ಬಾನು, ಆಶಾಜ್ಯೋತಿ, ಅಶ್ವಿನಿ ಪೈ, ನೀತಿ ಆಚಾರ್ಯ ಇವರು ಪ್ರಶಸ್ತಿ ವಿಜೇತರ ಹೆಸರನ್ನು ವಾಚಿಸಿದರು. 9ನೇ ತರಗತಿಯ ಆಯೇಶ ರೂಬ ಸ್ವಾಗತಿಸಿ 8ನೇ ತರಗತಿಯ ವರುಣ್ ಕಾಮತ್ ವಂದಿಸಿದರು. 9ನೇ ತರಗತಿಯ ಸಾನ್ವಿ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post