ಬೆಂಗಳೂರು: ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ನಡೆಯಲಿದೆ.
ಉಪಚುನಾವಣೆಯಲ್ಲಿ ಒಟ್ಟು 40 ಅಭ್ಯರ್ಥಿಗಳು ಕಣದಲ್ಲಿದ್ದು, ರಾಜ್ಯದ ಕುತೂಹಲ ಕೆರಳಿಸಿದೆ.
ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಕುಟುಂಬಸ್ತರು ಶಿಕಾರಿಪುರ ಮತಕೇಂದ್ರದಲ್ಲಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನ ಹುಚ್ಚರಾಯ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಹಿತ ಭೇಟಿ ನೀಡಿದ ಬಿಎಸ್‌ವೈ ವಿಶೇಷ ಪೂಜೆ ಸಲ್ಲಿಸಿದರು.
ಮತದಾನ ಮಾಡಿದ ನಂತರ ಮಾತನಾಡಿದ ಬಿಎಸ್‌ವೈ, ಮೂರೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಸಹೋದರಿ ಜಿ. ಶಾಂತಾ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಉಗ್ರಪ್ಪ ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ವೈ. ರಾಘವೇಂದ್ರ ಕಣದಲ್ಲಿದ್ದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧುಬಂಗಾರಪ್ಪ, ಜೆಡಿಯುನ ಮಹಿಮಾ ಪಟೇಲ್ ಸೇರಿದಂತೆ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇನ್ನು, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ, ಬಿಜೆಪಿಯ ಡಾ.ಸಿದ್ದರಾಮಯ್ಯ ಸೇರಿದಂತೆ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಕಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಆನಂದ್ ನ್ಯಾಮೇಗೌಡ, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ 10 ಮಂದಿ ಕಣದಲ್ಲಿದ್ದಾರೆ.
ಇನ್ನು, ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಕೇವಲ ಎರಡು ದಿನಗಳ ಹಿಂದಷ್ಟೇ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಗೆಲುವು ನಿರಾಯಾಸವಾಗಲಿದೆ ಎನ್ನಲಾಗುತ್ತಿದೆ.
ಇನ್ನು ಐದು ಕ್ಷೇತ್ರಗಳಲ್ಲಿ ಮಹಿಳೆಯರಿಗಾಗಿ 57 ಪಿಂಕ್ ಮತಕೇಂದ್ರಗಳನ್ನು ತೆರೆಯಲಾಗಿದೆ.
ಈ ಉಪ ಚುನಾವಣೆಯ ಮತಎಣಿಕೆ ನವೆಂಬರ್ 6 ರಂದು ನಡೆಯಲಿದೆ.
Discussion about this post